ADVERTISEMENT

‘ಸಾಲಿಗ್ರಾಮ’ದ ಆಡಿಯೊ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 19:31 IST
Last Updated 16 ಅಕ್ಟೋಬರ್ 2018, 19:31 IST
ದಿಶಾ ಪೂವಯ್ಯ
ದಿಶಾ ಪೂವಯ್ಯ   

ಸಾಲಿಗ್ರಾಮ ಎಂದರೆ ಶಿಲೆ. ಇದೇ ಹೆಸರಿನಡಿ ಗಾಂಧಿನಗರದಲ್ಲಿ ಸಿನಿಮಾವೊಂದು ತಯಾರಾಗಿದೆ. ಕರ್ಮದ ಪರಿಕಲ್ಪನೆಯಡಿ ಚಿತ್ರಕಥೆ ಹೆಣೆಯಲಾಗಿದೆ. ಶೂಟಿಂಗ್‌ಗೆ ಅಗತ್ಯ ಸಾಮಾಗ್ರಿಗಳನ್ನು ಬಾಡಿಗೆಗೆ ನೀಡುವ ಹರ್ಷ ಈ ಚಿತ್ರಕ್ಕೆ ಕತೆ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ. ಛಾಯಾಗ್ರಹಣದ ಜೊತೆಗೆ ನಿರ್ಮಾಣದ ಜವಾಬ್ದಾರಿಯೂ ಅವರದ್ದೇ.

‘ನಾಯಕ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳು ಆತನ ಪುನರ್ಜನ್ಮದಲ್ಲಿ ಕಾಡುತ್ತವೆ. ಕೊನೆಗೆ, ಸಾಲಿಗ್ರಾಮವನ್ನು ಪೂಜಿಸುವುದರೊಂದಿಗೆ ದುಷ್ಟಶಕ್ತಿಗಳಿಂದ ವಿಮುಕ್ತನಾಗುತ್ತಾನೆ’ ಎಂದು ಕಥೆ ಒಂದು ಎಳೆಯನ್ನು ಬಿಡಿಸಿಟ್ಟರು.

ಹಿರಿಯ ನಿರ್ದೇಶಕ ಎಸ್‌.ಕೆ. ಭಗವಾನ್, ‘ಯುವಪೀಳಿಗೆ ಚಿತ್ರರಂಗವನ್ನು ಪ್ರವೇಶಿಸುತ್ತಿದೆ. ಹೊಸ ಕಲ್ಪನೆಯ ಚಿತ್ರಗಳು ಮೂಡಿಬರುತ್ತಿವೆ. ಜಾಗತೀಕರಣದ ಅಬ್ಬರದಲ್ಲಿ ಭಿನ್ನವಾದ ಸಿನಿಮಾಗಳು ಬರುತ್ತಿರುವುದು ಖುಷಿ ತಂದಿದೆ’ ಎಂದರು.

ADVERTISEMENT

ಕನ್ನಡ ಚಿತ್ರರಂಗದಲ್ಲಿ ಈಗ ಸುವರ್ಣಯುಗ ಆರಂಭವಾಗಿದೆ. ನಮ್ಮ ಕಾಲದಲ್ಲಿ ವರ್ಷಕ್ಕೆ 6ರಿಂದ 7 ಸಿನಿಮಾ ತೆರೆಕಾಣುತ್ತಿದ್ದವು. ಪ್ರಸ್ತುತ ಇವುಗಳ ಸಂಖ್ಯೆ 250ಕ್ಕೆ ಮುಟ್ಟಿದೆ. ಚಂದನವನ ಪ್ರವರ್ಧಮಾನಕ್ಕೆ ಬರುತ್ತಿದೆ. ಹಿರಿತನ, ಸಿರಿತನ ಹೀಗೆಯೇ ಮುಂದುವರಿಯಲಿ’ ಎಂದು ಹೇಳಿದರು.

‘ಸಿದ್ಧಾರ್ಥ ಒಳ್ಳೆಯ ನಟ. ಅವರಿಗೆ ಉತ್ತಮ ಭವಿಷ್ಯವಿದೆ. ನಿರ್ಮಾಪಕರು ಶಕ್ತಿಧಾಮಕ್ಕೆ ಒಂದು ವರ್ಷಕ್ಕೆ ಆಗುವಷ್ಟು ಅನ್ನದಾನ ಮಾಡಿದ್ದಾರೆ. ಅವರ ಮಗಳು ಪೂರ್ಣಶ್ರೀ ಚೆನ್ನಾಗಿ ಡ್ರಮ್‌ ಬಾರಿಸಿದ್ದಾರೆ. ಒಳ್ಳೆಯ ಚಿತ್ರಗಳು ಬರುತ್ತಿವೆ. ಚಿತ್ರರಂಗಕ್ಕೆ ಹೊಸಬರು ಬರಬೇಕು’ ಎಂದು ಆಶಿಸಿದರು ನಟ ಶಿವರಾಜ್‍ಕುಮಾರ್ ಹೇಳಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ ಗುಂಡೂರಾವ್, ಚಿತ್ರ ಸಾಹಿತಿ ಕೆ. ಕಲ್ಯಾಣ್‌ ತಂಡಕ್ಕೆ ಶುಭ ಕೋರಿದರು. ಇದೇ ವೇಳೆ ಚಿತ್ರದ ಆಡಿಯೊ ಬಿಡುಗಡೆ ಮಾಡಲಾಯಿತು. ನಾಯಕ ಸಿದ್ಧಾರ್ಥ, ನಾಯಕಿಯರಾದ ಪಲ್ಲವಿರಾಜು, ದಿಶಾ ಪೂವಯ್ಯ ಚುಟುಕಾಗಿ ಮಾತನಾಡಿದರು. ಚಿತ್ರದ ನಾಲ್ಕು ಹಾಡುಗಳಿಗೆ ಸನ್ನಿರಾಜ್ ಸಂಗೀಥ ಸಂಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.