ADVERTISEMENT

‘ಸುಲ್ತಾನ್‌’ ನಿರ್ಮಾಣದಲ್ಲಿ ಪೈಲ್ವಾನ್‌ ಶೋ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 20:00 IST
Last Updated 11 ಫೆಬ್ರುವರಿ 2019, 20:00 IST
   

‘ಕುಸ್ತಿ ಜಗತ್ತಿನ ರತ್ನ’, ‘ಸೋಲರಿಯದ ಸರದಾರ’ ಖ್ಯಾತಿಯ ‘ಗಾಮಾ ಪಹಲ್‌ವಾನ್‌’ಗುಲಾಮ್‌ ಮೊಹಮ್ಮದ್‌ ಬಕ್ಷ್‌ ಭಟ್‌ ಹೆಸರು ಪ್ರಸಿದ್ಧ. ಕುಸ್ತಿ ಕಾಳಗಪ್ರಯರು ಮರೆಯಲಾಗದ ಮಹಾತಾರೆ. ಬರೋಬ್ಬರಿ 50 ವರ್ಷಗಳ ಕುಸ್ತಿ ಪಂದ್ಯದಲ್ಲಿ ಯಾರಿಂದಲೂ ಸೋಲಿಸಲಾಗದ ಜಗತ್ತಿನ ಏಕೈಕ ಪೈಲ್ವಾನ್ ಈ ಗುಲಾಮ್‌.

ಗುಲಾಮ್‌ ದಿನಚರಿ ಒಂದು ದಂತಕತೆ.ಪ್ರತಿದಿನ ಬರೋಬ್ಬರಿ 1200 ಕೆ.ಜಿ. ಭಾರದ ಕಲ್ಲನ್ನು ಎತ್ತಿ ಕಸರತ್ತು ಮಾಡಿ ಯಥಾ ಸ್ಥಾನದಲ್ಲಿಟ್ಟು ಹೋಗುತ್ತಿದ್ದ ವಜ್ರದೇಹಿ. ಆ ಕಲ್ಲನ್ನು, ಅವರ ಸಾಮರ್ಥ್ಯದ ಕುರುಹು ಎಂಬಂತೆ ಬರೋಡಾದಸಯ್ಯಾಜಿಬಾಗ್‌ನಲ್ಲಿರುವ ಬರೋಡಾ ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಅಂತಹ ವಜ್ರಕಾಯಕ್ಕೆ ಎಂತಹ ಆಹಾರ ಉಣಿಸಿರಬಹುದು ಎಂಬ ಕುತೂಹಲ ಮೂಡುವುದು ಸಹಜ. ಗುಲಾಮ್‌ ದಿನಾಲೂ 20 ಲೀಟರ್‌ ಹಾಲು ಕುಡಿಯುತ್ತಿದ್ದರು, ಅರ್ಧ ಕೆ.ಜಿ ಶುದ್ಧ ಬೆಣ್ಣೆ , 4 ಕೆ.ಜಿ ಹಣ್ಣುಹಂಪಲು, ಮೂಳೆ ಬೇರ್ಪಡಿಸಿದ ಮಾಂಸಾಹಾರ ಮನಸೋ ಇಚ್ಛೆ ತಿನ್ನುತ್ತಿದ್ದರು. ಐದು ಅಡಿ ಎಂಟು ಇಂಚು ಎತ್ತರದ ಗುಲಾಮ್‌ ತಮ್ಮ ದೇಹ ತೂಕ 110 ಕೆ.ಜಿ ದಾಟಲು ಬಿಡುತ್ತಿರಲಿಲ್ಲವಂತೆ.

ತಮ್ಮ ಹತ್ತನೇ ವಯಸ್ಸಿನಲ್ಲೇ ಕುಸ್ತಿ ಆಖಾಡಕ್ಕೆ ಇಳಿದ ಗುಲಾಮ್‌ ಅವರ ಎದುರು ಕಣಕ್ಕಿಳಿಯಲು ಎದುರಾಳಿಗಳು ಹಿಂಜರಿಯುತ್ತಿದ್ದರಂತೆ. ತಮ್ಮ ದೇಶಗಳಲ್ಲಿ ಕುಸ್ತಿ ಪಟುಗಳಾಗಿ ಹೆಸರು ಮಾಡಿದ್ದ ಘಟಾನುಘಟಿಗಳೂ ಗುಲಾಮ್‌ ಅವರನ್ನು ಹೆಡೆಮುರಿ ಕಟ್ಟಲು ಮುಂದಾಗಿದ್ದುಂಟು. ಆದರೆ ಅವರ ಕುಸ್ತಿಯ ಪಟ್ಟು ಮತ್ತು ಹುರಿಮಾಡಿದ ದೇಹದ ಸಾಮರ್ಥ್ಯದ ಮುಂದೆ ಅವರ ಆಟ ನಡೆಯಲೇ ಇಲ್ಲ. ಸಮರ ಕಲೆಗಳಲ್ಲಿ ಪಂಟರ್‌ ಎಂದೇ ಜಗದ್ವಿಖ್ಯಾತ ಬ್ರೂಸ್‌ಲೀ ತಮ್ಮ ರೋಲ್ ಮಾಡೆಲ್, ಪ್ರೇರಣೆ ಎಂದುಗುಲಾಮ್ ಹೇಳಿಕೊಂಡಿದ್ದರು.

ADVERTISEMENT

ಗುಲಾಮ್‌ ಹುಟ್ಟಿದ್ದು 1878ರ ಮೇ 22ರಂದು. ಬ್ರಿಟಿಷ್‌ ಕಾಲದ ಪಂಜಾಬ್‌ ಪ್ರಾಂತ್ಯಕ್ಕೆ ಸೇರಿದ ಅಮೃತಸರ ಬಳಿಯ ಜಬೊವಾಲ್‌ ಅವರ ಹುಟ್ಟೂರು. ದೇಶ ವಿಭಜನೆಯಾದ ಬಳಿಕ ಪಾಕಿಸ್ತಾನದ ಲಾಹೋರ್‌ಗೆ ವಲಸೆ ಹೋಗಿ, 1960ರ ಮೇ 23ರಂದು ಕೊನೆಯುಸಿರೆಳೆದರು.

ಗಾಮಾ ಪಹಲ್‌ವಾನ್‌’ ಗುಲಾಮ್‌ ಮೊಹಮ್ಮದ್‌ ಭಕ್ಷ್‌

ಸಲ್ಮಾನ್ ಖಾನ್‌ ಕಾರಣ!

‘ಗಾಮಾ ಪಹಲ್‌ವಾನ್‌’ ಈಗ ಯಾಕೆ ನೆನಪಾದರು ಅಂತೀರಾ? ಬಾಲಿವುಡ್‌ನ ‘ಸುಲ್ತಾನ್‌’ ಸಲ್ಮಾನ್‌ ಖಾನ್‌ ಇದಕ್ಕೆ ಕಾರಣ.

ಹೌದು,ಕುಸ್ತಿ ಮತ್ತು ಕುಸ್ತಿ ಪಟುಗಳೆಂದರೆಬಾಲಿವುಡ್‌ನ ‘ಸುಲ್ತಾನ್‌’ಗೆ ಏನೋ ವ್ಯಾಮೋಹ.2016ರಲ್ಲಿ ಯಶ್‌ ಚೋಪ್ರಾ ನಿರ್ಮಾಣದ ‘ಸುಲ್ತಾನ್‌’ ಚಿತ್ರದ ಬಳಿಕ ಈ ಮೋಹ ಜಾಸ್ತಿಯಾಗಿದೆ. ಚಂದನವನದ ‘ಅಭಿನಯ ಚಕ್ರವರ್ತಿ’ ಸುದೀಪ್‌ ಅಭಿನಯದ ‘ಪೈಲ್ವಾನ್‌’ ಟೀಸರ್‌ ನೋಡಿ ಮನತುಂಬಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸಲ್ಮಾನ್‌ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ನಿರ್ಮಾಣದಲ್ಲಿ ತೊಡಗಿಸಿಕೊಂಡು ಬಹಳ ದಿನಗಳಾಗಿವೆ. ‘ಕಪಿಲ್‌ ಶರ್ಮಾ ಶೋ’ ಅದರ ನಿರೂಪಕ ಕಪಿಲ್‌ ಶರ್ಮಾ ಅವರಿಂದಾಗಿ ವಿವಾದಕ್ಕೊಳಗಾದರೂ ಯಶಸ್ವಿಯಾಗಿದೆ.

ಇದೀಗ ‘ಗಾಮಾ ಪಹಲ್‌ವಾನ್‌’ ಶೋ ನಿರ್ಮಾಣದಲ್ಲಿ ಸಲ್ಲೂ ಭಾಯ್‌ ಬ್ಯುಸಿಯಾಗಿದ್ದಾರೆ. ಏಪ್ರಿಲ್‌ನಲ್ಲಿ ಈ ಫಿಕ್ಷನ್‌ ಶೋ ತೆರೆಗೆ ಬರಲಿದೆ. ಪುನೀತ್‌ ಇಸ್ಸಾರ್‌ ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ. ಪಂಜಾಬ್‌ ಮತ್ತು ಲಂಡನ್‌ನಲ್ಲಿ ವಿವಿಧ ಸನ್ನಿವೇಶಗಳ ಚಿತ್ರೀಕರಣ ನಡೆದಿದೆ. ಇತರ ಪೈಲ್ವಾನ್‌ಗಳ ಪಾತ್ರದಲ್ಲಿ ಸಲ್ಮಾನ್‌ ಸಹೋದರ ಸೊಹೈಲ್‌ ಖಾನ್‌ ಮತ್ತು ಕಿರುತೆರೆ ನಟ ಮೊಹಮ್ಮದ್‌ ನಜೀಮ್‌ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.