ADVERTISEMENT

ಸಿನಿ ಸುದ್ದಿ: ತೆರೆಯಲ್ಲಿ 11 ಸಿನಿಮಾಗಳು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 0:00 IST
Last Updated 21 ಫೆಬ್ರುವರಿ 2025, 0:00 IST
<div class="paragraphs"><p>ನಟಿ ವೆನ್ಯ ರೈ</p></div>

ನಟಿ ವೆನ್ಯ ರೈ

   

ಕಳೆದೊಂದು ತಿಂಗಳಿಂದ ಸಿನಿಮಾ ಬಿಡುಗಡೆ ಸುಗ್ಗಿ ಜೋರಾಗಿದೆ. ಈ ವಾರವೂ 11 ಸಿನಿಮಾಗಳು ತೆರೆಕಾಣುತ್ತಿವೆ.

ಎಲ್ಲೋ ಜೋಗಪ್ಪ ನಿನ್ನರಮನೆ:

ಕಿರುತೆರೆ ನಿರ್ದೇಶಕ ಹಯವದನ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ‘ಎಲ್ಲೋ ಜೋಗಪ್ಪ ನಿನ್ನರಮನೆ’ ತೆರೆ ಕಾಣುತ್ತಿದೆ. ಅಂಜನ್ ನಾಗೇಂದ್ರ ನಾಯಕನಾಗಿ ನಟಿಸಿದ್ದು, ಯುವ ನಟಿ ವೆನ್ಯ ರೈ ನಾಯಕಿ. ಸಂಜನಾ ದಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿರಾದಾರ್, ಶರತ್ ಲೋಹಿತಾಶ್ವ, ದಾನಪ್ಪ, ಸ್ವಾತಿ, ದಿನೇಶ್ ಮಂಗಳೂರು, ಲಕ್ಷ್ಮೀ ನಾಡಗೌಡ ಮುಂತಾದವರು ನಟಿಸಿದ್ದಾರೆ.

ADVERTISEMENT

‘ಜರ್ನಿಯ ಕಥಾನಕದ ಜೊತೆಗೆ ಅಪ್ಪನ ಮಗನ ಬಾಂಧವ್ಯದ ಎಳೆಯೂ ಚಿತ್ರದಲ್ಲಿದೆ. ಬೆಂಗಳೂರಿನಿಂದ ಶುರುವಾಗುವ ಪ್ರಯಾಣ ಹಿಮಾಲಯದವರೆಗೆ ಸಾಗುತ್ತದೆ. ಭಾವನಾತ್ಮಕವಾದ ಈ ಸಿನಿಮಾ ಹಲವು ರಾಜ್ಯಗಳ ಅನೇಕ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿದೆ’ ಎನ್ನುತ್ತಾರೆ ನಿರ್ದೇಶಕ ಹಯವದನ.

ಶಿವಪ್ರಸಾದ್ ಸಂಗೀತ, ನಟರಾಜ್ ಮದ್ದಾಲ ಛಾಯಾಚಿತ್ರಗ್ರಹಣ, ರವಿಚಂದ್ರನ್ ಸಂಕಲನವಿದೆ. ‘ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್’ ಮತ್ತು ‘ಕೃಷ್ಣಛಾಯಾ ಚಿತ್ರ’ ಬ್ಯಾನರ್ ಚಿತ್ರವನ್ನು ನಿರ್ಮಿಸಿದೆ.

ನಿಮಗೊಂದು ಸಿಹಿ ಸುದ್ದಿ:

ಯುವಕನೊಬ್ಬ ಗರ್ಭಧರಿಸಿ‌ ಜಗತ್ತಿನಲ್ಲಿ ಅಚ್ಚರಿ ಮೂಡಿಸಿದ ಕಥೆಯ ಸುತ್ತ ಸಾಗುವ ಚಿತ್ರವಿದು. ಚಿತ್ರರಂಗದಲ್ಲಿ ಹಲವು ವಿಭಾಗಗಳಲ್ಲಿ ಕೆಲಸ ಮಾಡಿರುವ ನಟ, ನಿರ್ದೇಶಕ ರಘು ಭಟ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

‘ಮಹಾಭಾರತ ನನ್ನ ಕಥೆಗೆ ಸ್ಫೂರ್ತಿ. ಅದರಲ್ಲಿ ಅರ್ಜುನ ಬೃಹನ್ನಳೆಯಾದ ಸನ್ನಿವೇಶವನ್ನೇ ಆಧಾರವಾಗಿಟ್ಟುಕೊಂಡು ಈ ಕಥೆ ಮಾಡಲಾಗಿದೆ. ನಾಯಕನ ಹೆಸರು ಅರ್ಜುನ್. ಆತ ಗರ್ಭಿಣಿಯಾಗುತ್ತಾನೆ. ಹೇಗಾಗುತ್ತಾನೆ ಎಂಬುದೇ ಚಿತ್ರದ ಟ್ವಿಸ್ಟ್. ಮನೋರಂಜನೆ ಅಂಶಗಳನ್ನು ಇಟ್ಟುಕೊಂಡು ಮಾಡಿದ ರಾಮ್‌ಕಾಮ್‌ ಚಿತ್ರವಿದು. ಗೋವಾದಲ್ಲಿ ಚಿತ್ರೀಕರಣ ಮಾಡಿದ್ದೇವೆ. ವಿಜಯ್‌ ರಾಘವೇಂದ್ರ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ’ ಎನ್ನುತ್ತಾರೆ ನಿರ್ದೇಶಕರು.

ಅವ್ಯಕ್ತ ಸಿನಿಮಾಸ್ ಸಂಸ್ಥೆಯ ಹರೀಶ್ ಎನ್. ಗೌಡ ಬಂಡವಾಳ ಹೂಡಿದ್ದಾರೆ. ಕಾವ್ಯ ಶೆಟ್ಟಿ ನಾಯಕಿ. ಹರಿಣಿ ಶ್ರೀಕಾಂತ್, ಪದ್ಮಿನಿ ನರಸಿಂಹನ್, ಸುಜಯ್ ಶಾಸ್ತ್ರಿ ಮುಂತಾದವರು ಚಿತ್ರದಲ್ಲಿದ್ದಾರೆ. ಅಶ್ವಿನ್ ಹೇಮಂತ್ ಸಂಗೀತ, ಆನಂದ್ ಸುಂದ್ರೇಶ್ ಛಾಯಾಚಿತ್ರಗ್ರಹಣ, ನವೀನ್ ತೇಜ್ ಮತ್ತು ರಘುನಾಥ್ ಎಲ್‌ ಸಂಕಲನ ಚಿತ್ರಕ್ಕಿದೆ.

ಒಲವಿನ ಪಯಣ:

ಕಿರುತೆರೆ ನಟ ಸುನಿಲ್ ನಾಯಕನಾಗಿ ನಟಿಸಿರುವ ವಿಭಿನ್ನ ಪ್ರೇಮ ಕಥಾಹಂದರ ಹೊಂದಿದ ಚಿತ್ರ ‘ಒಲವಿನ ಪಯಣ’. ಹಳ್ಳಿಯ ಮಧ್ಯಮ ವರ್ಗದ ಕುಟುಂಬದ ಯುವಕನ ಬದುಕು, ಪ್ರೇಮ ಪಯಣದ ಕಥೆಯನ್ನು ಈ‌ ಚಿತ್ರದ ಮೂಲಕ ನಿರ್ದೇಶಕ ಕಿಶನ್ ಬಲ್ನಾಡ್  ಹೇಳಹೊರಟಿದ್ದಾರೆ. ಪ್ರಿಯಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಮುಳಗುಂದ ಕ್ರಿಯೇಷನ್ಸ್ ಮೂಲಕ ನಾಗರಾಜ್ ಎಸ್. ಮುಳಗುಂದ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.  ನಾಗೇಶ್ ಮಯ್ಯ, ಪದ್ಮಜಾ ರಾವ್, ಬಲ ರಾಜವಾಡಿ ಮುಂತಾದವರು ನಟಿಸಿದ್ದಾರೆ. ಜೀವನ್‌ ಗೌಡ ಅವರ ಛಾಯಾಚಿತ್ರಗ್ರಹಣ, ಕೀರ್ತಿರಾಜ್ ಸಂಕಲನ ಈ ಚಿತ್ರಕ್ಕಿದೆ.

ಭಾವ ತೀರ ಯಾನ:

ಸಂಗೀತ ನಿರ್ದೇಶಕ ಮಯೂರ್ ಅಂಬೆಕಲ್ಲು ‘ಭಾವ ತೀರ ಯಾನ’ ಮೂಲಕ ನಿರ್ದೇಶರಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಮಯೂರ್ ಹಾಗೂ ತೇಜಸ್ ಕಿರಣ್ ಜಂಟಿ ನಿರ್ದೇಶನದ ಚಿತ್ರವಿದು. ತೇಜಸ್ ಕಿರಣ್ ನಾಯಕನಾಗಿ ಅಭಿನಯಿಸಿದ್ದು, ಆರೋಹಿ ನೈನಾ ಹಾಗೂ ಅನುಷಾ ಕೃಷ್ಣ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ರಮೇಶ್ ಭಟ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಚಂದನಾ ಅನಂತಕೃಷ್ಣ, ವಿದ್ಯಾಮೂರ್ತಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

ಆರೋಹ ಫಿಲ್ಮಂಸ್ ಬ್ಯಾನರ್ ನಿರ್ಮಾಣವಿದೆ. ಶಿವಶಂಕರ್ ನೂರಂಬಡ ಛಾಯಾಚಿತ್ರಗ್ರಹಣ, ಸುಪ್ರಿತ್ ಬಿಕೆ ಸಂಕಲನವಿದೆ.

ನನಗೂ ಲವ್ವಾಗಿದೆ:

ಬಿ.ಎಸ್.ರಾಜಶೇಖರ್ ನಿರ್ದೇಶನದ ಪ್ರೇಮಕಥಾಹಂದರದ ಚಿತ್ರವಿದು. ಕೆ.ನೀಲಕಂಠನ್ ಬಂಡವಾಳ ಹೂಡುವುದರ ಜೊತೆಗೆ ಖಳನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಸೋಮವಿಜಯ್ ನಾಯಕ. ತೇಜಸ್ವಿನಿ ರೆಡ್ಡಿ ನಾಯಕಿ. ಉಳಿದಂತೆ ಪಿ.ಮೂರ್ತಿ, ಕಾರ್ತಿಕ್‌ ರಾಮಚಂದ್ರ, ದೊರೆ, ನವೀನ್, ರಾಜಕುಮಾರ್ ಪತ್ತಾರ್ ಮುಂತಾದವರಿದ್ದಾರೆ. ಬಿ.ಆರ್.ಹೇಮಂತಕುಮಾರ್ ಸಂಗೀತವಿದೆ.

ಗಗನ ಕುಸುಮ:

ನಾಗೇಂದ್ರ ಕುಮಾರ್ ಜೈನ್ ನಿರ್ದೇಶನದ ಚಿತ್ರ ‘ಗಗನ ಕುಸುಮ’. ಆರ್.ಶೇಖರನ್ ಬಂಡವಾಳ ಹೂಡಿದ್ದಾರೆ. ತಾರಾಗಣದಲ್ಲಿ ಎಸ್.ಕೆ.ಪ್ರಕಾಶ್ ಸಣ್ಣಕ್ಕಿ, ದಿನೇಶ್‌ ಗೌಡ, ಕಾವ್ಯ ಪ್ರಕಾಶ್, ಆಶಾ, ಹರಣಿ ನಟರಾಜ್ ಮುಂತಾದವರಿದ್ದಾರೆ. ಚಿತ್ರಕ್ಕೆ ನಿವೇದ್ ಸಂಗೀತವಿದೆ.

ರಾಜರೋಜ:

ಬಿಗ್‌ಬಾಸ್ ಖ್ಯಾತಿಯ ದಿವಾಕರ್ ನಾಯಕನಾಗಿ ನಟಿಸಿರುವ ಚಿತ್ರ. ಪ್ರೀತಿ ಚಿತ್ರದ ನಾಯಕಿ. ಉದಯ್ ಪ್ರೇಮ್‌ ನಿರ್ಮಾಣ ಮತ್ತು ನಿರ್ದೇಶನವಿದೆ. ಮಿರ್ಚಿ ಮಣಿಕಂಠ, ಕುರಿಬಾಂಡ್ ಸುನಿಲ್ ಮುಂತಾದವರು ತಾರಾಗಣದಲ್ಲಿದ್ದಾರೆ.

‘ವಿದ್ಯಾ ಗಣೇಶ’, ‘ಶ್ಯಾನುಭೋಗರ ಮಗಳು’, ‘ನವಮಿ’ ಚಿತ್ರಗಳೂ ತೆರೆಕಾಣಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.