ADVERTISEMENT

ಸ್ಯಾಂಡಲ್‌ವುಡ್‌ನಲ್ಲಿ ‘ಚೈತ್ರ’ ಮಾಸ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 19:30 IST
Last Updated 6 ಮಾರ್ಚ್ 2023, 19:30 IST
ಚೈತ್ರಾ ಜೆ. ಆಚಾರ್‌
ಚೈತ್ರಾ ಜೆ. ಆಚಾರ್‌   

‘ತಲೆದಂಡ’ ಸಿನಿಮಾದಲ್ಲಿ ನಟ ದಿವಂಗತ ಸಂಚಾರಿ ವಿಜಯ್‌ ಜೊತೆ ತೆರೆಹಂಚಿಕೊಂಡು ಗಮನ ಸೆಳೆದಿದ್ದ ನಟಿ ಚೈತ್ರಾ ಜೆ. ಆಚಾರ್‌ ಚಂದನವನದಲ್ಲಿ ತಮ್ಮ ಸಿನಿಬ್ಯಾಂಕ್‌ ಹಿಗ್ಗಿಸಿಕೊಳ್ಳುತ್ತಿದ್ದಾರೆ. ಸಾಲು ಸಾಲು ಚಿತ್ರಗಳಿಗೆ ಹಸಿರು ನಿಶಾನೆ ನೀಡಿರುವ ಚೈತ್ರಾ, ‘ಬ್ಲಿಂಕ್‌’ ಎಂಬ ಸಿನಿಮಾದಲ್ಲಿ ‘ದೇವಕಿ ಅರಸ್‌’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶ್ರೀನಿಧಿ ಬೆಂಗಳೂರು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸೈನ್ಸ್ ಫಿಕ್ಷನ್ ಸಿನಿಮಾ ‘ಬ್ಲಿಂಕ್’. ಈಗಾಗಲೇ ಟೀಸರ್ ಮೂಲಕ ಈ ಸಿನಿಮಾ ಗಮನಸೆಳೆದಿದೆ. ಚಿತ್ರದಲ್ಲಿ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದು, ಚೈತ್ರಾ ಹಾಗೂ ಮಂದಾರ ಬಟ್ಟಲಹಳ್ಳಿ ನಾಯಕಿಯರಾಗಿ ಬಣ್ಣಹಚ್ಚಿದ್ದಾರೆ. ಚಿತ್ರದಲ್ಲಿ ಚೈತ್ರಾ ಅವರ ಲುಕ್‌ ಹೇಗಿರುತ್ತದೆ ಎನ್ನುವ ಪ್ರಶ್ನೆಗೆ ಫೋಟೊವೊಂದರ ಮೂಲಕ ಚಿತ್ರತಂಡ ಉತ್ತರಿಸಿದೆ.

‘ಮಹಿರಾ’, ‘ಆ ದೃಶ್ಯ’, ‘ಗಿಲ್ಕಿ’, ‘ತಲೆದಂಡ’ ಸಿನಿಮಾದಲ್ಲಿ ನಟಿಸಿರುವ ಚೈತ್ರಾ ‘ಬ್ಲಿಂಕ್’ ಸಿನಿಮಾದಲ್ಲಿ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ 90ರ ದಶಕದ ಸೆಮಿ ಮಾಡರ್ನ್‌ ಹಳ್ಳಿ ಹುಡುಗಿ ‘ದೇವಕಿ ಅರಸ್’ ಎಂಬ ಪಾತ್ರ ನಿಭಾಯಿಸಿದ್ದಾರೆ. ‘ದೇವಕಿ, ಚಿತ್ರದಲ್ಲಿ ತುಂಬಾ ಮಾತನಾಡುವ, ಎಲ್ಲರನ್ನೂ ಸೆಳೆಯುವ ಪಾತ್ರ’ ಎಂದಿದ್ದಾರೆ ಶ್ರೀನಿಧಿ. ಚಿತ್ರೀಕರಣ ಮುಗಿಸಿ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಜನನಿ ಪಿಕ್ಚರ್ಸ್ ಬ್ಯಾನರ್‌ನಡಿ ರವಿಚಂದ್ರ ಎ.ಜೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ADVERTISEMENT

ಗಾಯಕಿಯೂ ಆಗಿರುವ ಚೈತ್ರಾ, ರಕ್ಷಿತ್ ಶೆಟ್ಟಿ ನಟನೆಯ ಹೊಸ ಚಿತ್ರ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ‘ಸುರಭಿ’ ಎಂಬ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ನಟಿ ಶ್ರುತಿ ಹರಿಹರನ್‌ ನಟನೆಯ ‘ಸ್ಟ್ರಾಬೆರಿ’ಯಲ್ಲೂ ಚೈತ್ರಾ ಬಣ್ಣಹಚ್ಚಿದ್ದಾರೆ. ಇವೆರಡೂ ಸಿನಿಮಾಗಳು ಇನ್ನಷ್ಟೇ ತೆರೆಕಾಣಬೇಕಿದೆ.

‘ಬ್ಲಿಂಕ್‌’ ಚಿತ್ರದಲ್ಲಿ ಆರು ಪ್ರಮುಖ ಪಾತ್ರಗಳಿದ್ದು ದೀಕ್ಷಿತ್, ವಜ್ರದೀರ್ ಜೈನ್, ಚೈತ್ರಾ, ಮಂದಾರ, ಗೋಪಾಲ ಕೃಷ್ಣ ದೇಶಪಾಂಡೆ, ಯಶಸ್ವಿನಿ ರಾವ್, ಕಿರಣ್ ನಾಯ್ಕ್, ಸುರೇಶ್ ಅನಗಳ್ಳಿ ಮುಖ್ಯ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.