ಕೆಲವು ಚಿತ್ರಗಳು ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತವೆ. ಅಂಥದ್ದೇ ಒಂದು ವಿಭಿನ್ನ ಶೀರ್ಷಿಕೆ ಹೊಂದಿರುವ ಹೊಸಬರ ಚಿತ್ರವೊಂದು ಸೆಟ್ಟೇರಲು ಸಜ್ಜಾಗಿದೆ. ರಜತ್ ಮೌರ್ಯ ನಿರ್ದೇಶನದೊಂದಿಗೆ, ನಾಯಕನಾಗಿ ನಟಿಸುತ್ತಿರುವ ‘ವೈಕುಂಠ ಸಮಾರಾಧಾನೆ’ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ‘ಇದು ನಮ್ಮ ಸಿನಿಮಾದ ಡೆತ್‌ಲುಕ್ ಪೋಸ್ಟರ್’ ಎಂಬ ಅಡಿಬರಹವಿದೆ.
‘ಸಾವಿಲ್ಲದ ಮನೆ ಸಾಸಿವೆ ತನ್ನಿ ಎಂಬ ಮಾತಿದೆ. ಅದೇ ರೀತಿ ವೈಕುಂಠ ಸಮಾರಾಧನೆಯೇ ಇಲ್ಲದ ಮನೆ ಹುಡುಕಲು ಸಾಧ್ಯವಿಲ್ಲ. ಜೊತೆಗೆ ನಾನು ತಿರುಪತಿ ಭಕ್ತ. ಹೀಗಾಗಿ ಈ ಶೀರ್ಷಿಕೆ ಆಯ್ದುಕೊಂಡೆ. ಅಜ್ಜ–ಮೊಮ್ಮಗನ ಕಥೆ ಹೊಂದಿರುವ ಹಾಸ್ಯಮಯ ಚಿತ್ರವಿದು. ನವೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಶೇ 65ರಷ್ಟು ಭಾಗ ಮಲೆನಾಡಿನಲ್ಲಿ ಚಿತ್ರೀಕರಣಗೊಳ್ಳಲಿದೆ. ಉಳಿದ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತದೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು ರಜತ್.
ಆಶಾ ಗೇರ್‌ಗಲ್ ಚಿತ್ರದ ನಿರ್ಮಾಪಕರು. ರುತ್ವಿಕ್ ಮುರುಳಿಧರ್ ಸಂಗೀತ, ಹರ್ಷಿತ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.
‘ಮಾರುಕಟ್ಟೆ ಬಿದ್ದಾಗ ಷೇರುಪೇಟೆಯಲ್ಲಿ ಹೂಡಿಕೆ ಮಾಡಬೇಕು. ಅದೇ ರೀತಿ ಚಿತ್ರರಂಗ ಸಂಕಷ್ಟದಲ್ಲಿರುವಾಗ ಹೊಸ ಅಲೆಯ ಚಿತ್ರಗಳು ಬರಬೇಕು. ನಮ್ಮಲ್ಲಿ ನಮ್ಮವರೇ ನಮ್ಮನ್ನು ತುಳಿಯುತ್ತಿದ್ದಾರೆ. ಚಿತ್ರೋದ್ಯಮದಲ್ಲಿ ನಾವೆಲ್ಲ ಒಗ್ಗಟ್ಟಾಗಿ ನಿಲ್ಲಬೇಕು. ಈಗಾಗಲೇ ವಕೀಲ ವೃತ್ತಿಯಲ್ಲಿ ಯಶಸ್ವಿಯಾಗಿರುವ ಚಿತ್ರದ ನಾಯಕ ರಜತ್ ಚಿತ್ರರಂಗದಲ್ಲಿಯೂ ಯಶಸ್ಸು ಕಾಣಲಿ’ ಎಂದು ‘ಶಾಖಾಹಾರಿ’ ಚಿತ್ರದ ನಿರ್ಮಾಪಕ ರಾಜೇಶ್ ಕೀಳಂಬಿ ತಂಡಕ್ಕೆ ಶುಭ ಹಾರೈಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.