ADVERTISEMENT

‘ನಾಟ್‌ಔಟ್‌’ ಫಸ್ಟ್‌ಹಾಫ್‌ ಉಚಿತ!

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 23:30 IST
Last Updated 12 ಜುಲೈ 2024, 23:30 IST
ಅಜಯ್ ಪೃಥ್ವಿ
ಅಜಯ್ ಪೃಥ್ವಿ   

ಜನರನ್ನು ಚಿತ್ರಮಂದಿರದತ್ತ ಸೆಳೆಯಲು ನಾನಾ ಬಗೆಯ ಕಸರತ್ತುಗಳನ್ನು ಚಿತ್ರತಂಡಗಳು ಮಾಡುತ್ತವೆ. ಇಲ್ಲೊಂದು ಚಿತ್ರತಂಡ ಚಿತ್ರದ ಮೊದಲಾರ್ಧವನ್ನು ವೀಕ್ಷಕರಿಗೆ ಉಚಿತವಾಗಿ ತೋರಿಸಲು ನಿರ್ಧರಿಸಿದೆ. ಜುಲೈ 19ರಂದು ಬಿಡುಗಡೆಗೊಳ್ಳಲಿರುವ ‘ನಾಟ್‌ಔಟ್‌’ ಈ ಪ್ರಯತ್ನಕ್ಕೆ ಕೈಹಾಕಿದ ಸಿನಿಮಾ.

ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಅಂಬರೀಶ್ ಎಂ. ನಿರ್ದೇಶನದ ಹಾಗೂ ಅಜಯ್ ಪೃಥ್ವಿ, ರಚನಾ ಇಂದರ್ ನಟಿಸಿರುವ ಈ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. ನಟ ಶ್ರೀನಗರ ಕಿಟ್ಟಿ ಹಾಗೂ ನಿರ್ದೇಶಕ ಸಿಂಪಲ್ ಸುನಿ ಟ್ರೇಲರ್‌ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಂಬರೀಶ್‌, ‘ಕೆಲವು ಮುಖ್ಯ ಚಿತ್ರಮಂದಿರಗಳಲ್ಲಿ ಚಿತ್ರದ ಫಸ್ಟ್‌ಹಾಫ್‌ ಉಚಿತವಾಗಿ ನೋಡಬಹುದು. ದ್ವಿತೀಯಾರ್ಧವನ್ನು ನೋಡಲು ಟಿಕೆಟ್‌ ಪಡೆಯಬೇಕು. ಮಧ್ಯಂತರದಲ್ಲಿ ಸಿನಿಮಾ ಕುತೂಹಲಕಾರಿಯಾಗಿದೆ ಎಂದೆನಿಸಿದರೆ ಆಗಷ್ಟೇ ಟಿಕೆಟ್‌ ಖರೀದಿಸಬಹುದು. ಇದೊಂದು ವಿಶೇಷ ಪ್ರಯತ್ನ. ಇದಕ್ಕೆ ಬೇಕಾದ ವ್ಯವಸ್ಥೆ ಮಾಡುತ್ತಿದ್ದೇವೆ. ಕೆಲವರು ಸಿನಿಮಾ ನೋಡಿದ ಬಳಿಕ ‘ಫಸ್ಟ್‌ಹಾಫ್‌ ಬೋರ್‌ ಆಯಿತು, ಅದಕ್ಕೆ ಎದ್ದು ಬಂದೆ. ದುಡ್ಡು ವ್ಯರ್ಥ’ ಎನ್ನುತ್ತಾರೆ. ಈ ಹಿನ್ನೆಲೆಯಲ್ಲಿ ಈ ಹೊಸ ಪ್ರಯತ್ನ ಮಾಡುತ್ತಿದ್ದೇವೆ. 70ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಕನ್ನಡ ಸಿನಿಮಾಗೆ ಪ್ರೇಕ್ಷಕರು ಬರುತ್ತಿಲ್ಲ ಎನ್ನುವ ವಾತಾವರಣದಲ್ಲಿ ಈ ಹೆಜ್ಜೆ ಇಟ್ಟಿದ್ದೇವೆ’ ಎಂದರು. 

ADVERTISEMENT

‘ನನ್ನ ಮೊದಲ ಸಿನಿಮಾ ‘ಹೋಪ್‌’ ಚಿತ್ರಮಂದಿರಗಳಲ್ಲಿ ಸದ್ದು ಮಾಡಿಲ್ಲ. ಸಿನಿಮಾ ಒಟಿಟಿಯಲ್ಲಿ ಬಂದ ಬಳಿಕ ಎಲ್ಲರೂ ಒಳ್ಳೆಯ ವಿಮರ್ಶೆ ನೀಡಿದರು. ಈ ಹಿನ್ನೆಲೆಯಲ್ಲಿ ಚಿತ್ರಮಂದಿರದಲ್ಲಿ ಸಿನಿಮಾ ಇದ್ದಾಗಲೇ ಮಾತನಾಡಬೇಕು ಎಂದು  ಮೊದಲಾರ್ಧವನ್ನು ಉಚಿತವಾಗಿ ತೋರಿಸುವ ನಿರ್ಧಾರ ಕೈಗೊಂಡಿದ್ದೇವೆ’ ಎಂದರು ಅಂಬರೀಶ್‌. ಈ ಚಿತ್ರ ಡಾರ್ಕ್ ಹ್ಯೂಮರ್ ಕಾಮಿಡಿ ಜಾನರ್‌ನಲ್ಲಿದ್ದು, ಚಿತ್ರದಲ್ಲಿ ಆಂಬುಲೆನ್ಸ್ ಚಾಲಕನ ಪಾತ್ರದಲ್ಲಿ ಅಜಯ್‌ ಪೃಥ್ವಿ ನಟಿಸಿದ್ದಾರೆ. ನರ್ಸ್‌ ಪಾತ್ರದಲ್ಲಿ ರಚನಾ ಇಂದರ್‌ ನಟಿಸಿದ್ದಾರೆ. ಕಾಕ್ರೋಚ್‌ ಸುಧಿ, ಅಶ್ವಿನ್ ಹಾಸನ್, ಪ್ರಶಾಂತ್ ಸಿದ್ದಿ, ಸಲ್ಮಾನ್ ಮುಂತಾದ ಕಲಾವಿದರು ಚಿತ್ರದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.