ನಿರ್ದೇಶಕ ವಿನೋದ್ ದೋಂಡಾಳೆ ಅಕಾಲಿಕ ನಿಧನದಿಂದ ಅರ್ಧಕ್ಕೆ ನಿಂತಿದ್ದ ‘ದಿ ರೈಸ್ ಆಫ್ ಅಶೋಕ’ ಚಿತ್ರ ಮತ್ತೆ ಸೆಟ್ಟೇರಿದೆ. ಸತೀಶ್ ನೀನಾಸಂ ನಾಯಕನಾಗಿ ನಟಿಸುತ್ತಿರುವ ಚಿತ್ರದ ಚಿತ್ರೀಕರಣ ಚಾಮರಾಜನಗರದಲ್ಲಿ ಭರದಿಂದ ಸಾಗಿದೆ. ಚಿತ್ರದ ಸಂಕಲನಕಾರ ಮನು ಶೇಡ್ಗಾರ್ ನಿರ್ದೇಶಕನ ಕ್ಯಾಪ್ ತೊಟ್ಟು ಚಿತ್ರವನ್ನು ಪೂರ್ಣಗೊಳಿಸುವ ಹೊಣೆ ಹೊತ್ತುಕೊಂಡಿದ್ದಾರೆ.
‘ಚಾಮರಾಜನಗರದ ಕೊತ್ತಲವಾಡಿಯಲ್ಲಿ ಚಿತ್ರೀಕರಣ ಶುರುವಾಗಿದ್ದು, ಎರಡು ಫೈಟ್ ಹಾಗೂ ಮೂರು ಹಾಡುಗಳನ್ನು ಚಿತ್ರೀಕರಿಸುತ್ತಿದ್ದೇವೆ. ಇದು 70ರ ದಶಕದಲ್ಲಿ ನಡೆಯುವ ಕ್ರಾಂತಿಕಾರಿ ಯುವಕನ ಕಥೆ. ಕಾರ್ಮಿಕರ ಪರವಾಗಿ ನಿಲ್ಲುವ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈಗಾಗಲೇ ಶೇಕಡ 75ರಷ್ಟು ಚಿತ್ರೀಕರಣ ಮುಗಿದಿದೆ. ಕ್ಲೈಮ್ಯಾಕ್ಸ್ ಭಾಗ ಮಾತ್ರ ಬಾಕಿಯಿದೆ’ ಎಂದರು ಸತೀಶ್.
ಏಪ್ರಿಲ್ 15ರ ವೇಳೆ ಶೂಟಿಂಗ್ ಪೂರ್ಣಗೊಳಿಸುವ ಯೋಜನೆ ಚಿತ್ರತಂಡದ್ದು. ಚನ್ನಪಟ್ಟಣ, ನಂಜನಗೂಡು, ಶ್ರೀರಂಗಪಟ್ಟಣ ಸೇರಿದಂತೆ ಹಲವೆಡೆ ಚಿತ್ರೀಕರಣ ಮಾಡಲು ತಂಡ ಯೋಜನೆ ರೂಪಿಸಿದೆ. ಕನ್ನಡ ಸೇರಿದಂತೆ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.
‘ಒಟ್ಟು 30 ದಿನಗಳ ಚಿತ್ರೀಕರಣ ಬಾಕಿಯಿದೆ. ತನ್ನ ಜನರಿಗಾಗಿ ಅನ್ಯಾಯದ ವಿರುದ್ಧ ಹೋರಾಡುವ ಕಾರ್ಮಿಕನ ಬದುಕು ಹಾಗೂ ಸಂಘರ್ಷದ ಕುರಿತು ಚಿತ್ರ ಬೆಳಕು ಚೆಲ್ಲುತ್ತದೆ. ಈ ಚಿತ್ರಕ್ಕಾಗಿ ಕಳೆದ ಎರಡೂವರೆ ವರ್ಷಗಳಿಂದ ಇಡೀ ತಂಡ ಶ್ರಮಿಸಿದೆ. ಹೀಗಾಗಿ ಚಿತ್ರವನ್ನು ಪೂರ್ಣಗೊಳಿಸುವ ಹೊಣೆ ಹೊತ್ತಿದ್ದೇನೆ. ಏಪ್ರಿಲ್‌ನಲ್ಲಿ ಚಿತ್ರದ ಹಾಡು ಬಿಡುಗಡೆಗೊಳಿಸಿ ಪ್ರಚಾರ ಪ್ರಾರಂಭಿಸುವ ಯೋಜನೆಯಿದೆ’ ಎಂದು ಸತೀಶ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.