ADVERTISEMENT

ಕೆಜಿಎಫ್‌ ಚಾಪ್ಟರ್‌ 2: ‘ಅಧೀರ‘ನ ಕ್ರೂರತೆ ಅನಾವರಣ

‘ಅಧೀರ’ನ ಪಾತ್ರಕ್ಕೆ ವೈಕಿಂಗ್ಸ್‌ ಯೋಧರ ಸ್ಫೂರ್ತಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 6:57 IST
Last Updated 29 ಜುಲೈ 2020, 6:57 IST
‘ಅಧೀರ’ನ ಹೊಸ ಪೋಸ್ಟರ್‌
‘ಅಧೀರ’ನ ಹೊಸ ಪೋಸ್ಟರ್‌   

ಪ್ರಶಾಂತ್‌ ನೀಲ್‌ ನಿರ್ದೇಶನದ ‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರದಲ್ಲಿ ಬಾಲಿವುಡ್‌ ನಟ ಸಂಜಯ್ ದತ್‌ ‘ಅಧೀರ’ನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಂದಹಾಗೆ ಇಂದು ಸಂಜು ಅವರ ಜನ್ಮದಿನ. ಮೂರ್ನಾಲ್ಕು ದಿನಗಳ ಹಿಂದೆಯೇ ನಿರ್ದೇಶಕರು ಹೇಳಿದಂತೆ ‘ಅಧೀರ’ನ ಹೊಸ ಪೋಸ್ಟರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿನ ಸಂಜು ಅವರ ಪಾತ್ರದ ಕ್ರೂರತೆಯು ಈ ಪೋಸ್ಟರ್‌ ಮೂಲಕ ಅನಾವರಣಗೊಂಡಿದೆ.

‘ಈ ಅಧೀರ ವೈಕಿಂಗ್ಸ್‌ ಕ್ರೂರ ಮಾರ್ಗದಿಂದ ಸ್ಫೂರ್ತಿ ಪಡೆದಿದ್ದಾನೆ’ ಎಂದು ಪ್ರಶಾಂತ್‌ ನೀಲ್‌ ಕ್ಯಾಪ್ಷನ್‌ ಬರೆದಿದ್ದಾರೆ. ‘ವೈಕಿಂಗ್ಸ್‌’ ಎಂದರೆ ಯಾರು ಎಂಬ ಪ್ರಶ್ನೆ ಮೂಡುವುದು ಸಹಜ. 2013ರಲ್ಲಿ ಹಿಸ್ಟರಿ ಚಾನೆಲ್‌ನಲ್ಲಿ ‘ವೈಕಿಂಗ್ಸ್‌’ ಧಾರಾವಾಹಿ ಪ್ರಸಾರವಾಗಿತ್ತು. ಆ್ಯಕ್ಷನ್‌ ಅಡ್ವೆಂಜರ್‌ ಇರುವ ಐತಿಹಾಸಿಕ ಧಾರಾವಾಹಿ ಇದು. ಮೈಕೆಲ್ ಹಿರ್ಸ್ಟ್ ಬರೆದು ಈ ಕಥೆಯು ಕ್ರೌರ್ಯ ಮರೆದಿದ್ದ ವೈಕಿಂಗ್ಸ್‌ ಯೋಧರ ಬದುಕನ್ನು ತೆರೆದಿಟ್ಟಿತ್ತು.

ಮಧ್ಯಕಾಲೀನ ಸ್ಕ್ಯಾಂಡಿನೇವಿಯಾದ ನಾರ್ಮನ್ನರ ಕಥೆಗಳಿಂದ ಸ್ಫೂರ್ತಿ ಪಡೆದ ಸರಣಿ ಇದಾಗಿತ್ತು. ಕೊಲೆ, ರಕ್ತಪಾತ, ದಾಳಿ, ಯುದ್ಧವೆಂದರೆ ವೈಕಿಂಗ್‌‌ ಯೋಧರಿಗೆ ಲೆಕ್ಕವೇ ಇಲ್ಲ. ಅಂತಹ ಭೀಕರ ಲೋಕದಿಂದ ಪ್ರೇರಿತಗೊಂಡು ಅಧೀರ ಪಾತ್ರ ಸೃಷ್ಟಿಯಾಗಿದೆಯಂತೆ. ಸಂಜಯ್‌ ದತ್‌ ವೇಷವೂ ವೈಕಿಂಗ್ಸ್‌ ಯೋಧರಂತೆಯೇ ಇದೆ.

ADVERTISEMENT

ಸೂರ್ಯವರ್ಧನ್ ‘ಕೆಜಿಎಫ್‌ ಚಾಪ್ಟರ್ 1’ರ ಪ್ರಮುಖ ಖಳನಾಯಕ. ಈತನ ಸಹೋದರನೇ ಅಧೀರ. ಸೂರ್ಯವರ್ಧನ್‌ನ ಸಾವಿನ ಬಳಿಕ ‘ನರಾಚಿ’ ಗಣಿಯ ಅಧಿಕಾರದ ಗದ್ದುಗೆಗೇರುವುದು ಆತನ ಪುತ್ರ ಗರುಡ. ಈತನನ್ನು ಸುಫಾರಿ ಪಡೆದ ರಾಕಿ ಭಾಯ್‍(ಯಶ್‌) ಹತ್ಯೆ ಮಾಡುತ್ತಾನೆ. ಅಧೀರನ ಪ್ರವೇಶವಾಗುವುದು ಚಾಪ್ಟರ್‌ 2ರಲ್ಲಿ. ಇದಕ್ಕೆ ಸಂಜಯ್‌ ದತ್‌ ಜೀವ ತುಂಬಿದ್ದಾರೆ.

ಚಿತ್ರದ ಬಹುತೇಕ ಭಾಗದ ಶೂಟಿಂಗ್‌ ಪೂರ್ಣಗೊಂಡಿದೆ. ಅಕ್ಟೋಬರ್‌ 23ರಂದು ಸಿನಿಮಾ ಬಿಡುಗಡೆಗೆ ದಿನಾಂಕವೂ ನಿಗದಿಯಾಗಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳದಲ್ಲಿ ತೆರೆಕಂಡ ‘ಕೆಜಿಎಫ್‌ ಚಾಪ್ಟರ್‌ 1’ ಸಿನಿಮಾ ₹ 200 ಕೋಟಿಗೂ ಹೆಚ್ಚು ಗಳಿಕೆ ಕಂಡಿತ್ತು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ₹ 100 ಕೋಟಿಗೂ ಹೆಚ್ಚು ಗಳಿಕೆ ಕಂಡ ಮೊದಲ ಚಿತ್ರ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಶ್ರೀನಿಧಿ ಶೆಟ್ಟಿ ಈ ಚಿತ್ರದ ನಾಯಕಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.