ADVERTISEMENT

ಕ್ರಿಕೆಟರ್‌ ‘ಜಿಮ್ಮಿ’ ವರಸೆಯಲ್ಲಿ ಸಾಖಿಬ್‌

ರೋಹಿಣಿ ಮುಂಡಾಜೆ
Published 19 ಫೆಬ್ರುವರಿ 2019, 14:40 IST
Last Updated 19 ಫೆಬ್ರುವರಿ 2019, 14:40 IST
ಸಾಖಿಬ್‌ ಸಲೀಂ
ಸಾಖಿಬ್‌ ಸಲೀಂ   

1983ರಲ್ಲಿ ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ ಗೆದ್ದ ಕ್ಷಣವನ್ನು ನೆನಪಿಸಿಕೊಂಡರೆ ಈಗಲೂ ರೋಮಾಂಚನವಾಗುತ್ತದೆ. ಅಂದಿನ ಪಂದ್ಯದ ವಿಡಿಯೊವನ್ನು ಜತನವಾಗಿ ಕಾಪಾಡಿಟ್ಟುಕೊಂಡಿರುವಕ್ರಿಕೆಟ್‌ ಪ್ರಿಯರೂ ಇದ್ದಾರೆ.

ಕಪಿಲ್‌ದೇವ್‌ ನೇತೃತ್ವದ ಭಾರತ ಕ್ರಿಕೆಟ್‌ ತಂಡದ ಒಬ್ಬೊಬ್ಬರೂ ಅವಿಸ್ಮರಣೀಯವಾಗಿ ಆಡಿ ಕ್ರಿಕೆಟ್‌ ಜಗತ್ತಿನ ದಿಗ್ಗಜರಾಗಿ ಮೂಡಿಬಂದಿದ್ದರು.ಬಲಗೈ ಬ್ಯಾಟ್ಸ್‌ಮನ್‌ ಮತ್ತು ಬಲಗೈ ಮೀಡಿಯಂ ಬೌಲರ್‌ ಆಗಿ ಮೊಹಿಂದರ್‌ ಅಮರ್‌ನಾಥ್‌ ಮಿಂಚಿದ್ದರು.

ಅಂದು ಟ್ರೋಫಿ ಗೆದ್ದಾಗ ಸಂಭ್ರಮಿಸಿದ್ದವರಲ್ಲಿ ಬಾಲಿವುಟ್‌ ನಟ ಸಾಖಿಬ್‌ ಸಲೀಂ ಕೂಡಾ ಒಬ್ಬರು. ಸಾಖಿಬ್‌, ಅಂದು ಹುಚ್ಚೆದ್ದು ಕುಣಿದಷ್ಟೇ ರಣೋತ್ಸಾಹದಿಂದ ಈಗ ಮತ್ತೆ ಕುಣಿದಾಡುತ್ತಿದ್ದಾರೆ.

ADVERTISEMENT

ಕಬೀರ್‌ ಖಾನ್‌ ನಿರ್ದೇಶನದ ‘83’ ಸಿನಿಮಾದಲ್ಲಿ ಅವರು ಮೊಹಿಂದರ್‌ ಅಮರ್‌ನಾಥ್‌ ಪಾತ್ರ ಮಾಡಲಿರುವುದು ಇದಕ್ಕೆ ಕಾರಣ.

ಸ್ವತಃ ಕ್ರಿಕೆಟರ್‌

ಸಾಖಿಬ್‌ ಸ್ವತಃ ಕ್ರಿಕೆಟರ್‌ ಆಗಿರುವುದು ಈ ಪಾತ್ರಕ್ಕೆ ಅವರ ಆಯ್ಕೆಗೆ ದಾರಿ ಮಾಡಿಕೊಟ್ಟಿದೆ. ದೆಹಲಿ ಮತ್ತು ಕಾಶ್ಮೀರ ಕ್ರಿಕೆಟ್‌ ತಂಡಗಳಲ್ಲಿ ಸಾಖಿಬ್‌ ಗಮನಾರ್ಹ ಪಾತ್ರ ವಹಿಸಿದವರು. ಅವರ ಮೊದಲ ಆದ್ಯತೆಯೂ ಕ್ರಿಕೆಟ್‌ ಆಗಿತ್ತೇ ವಿನಾ ನಟನೆ ಅಲ್ಲ. ಆದರೆ ಕ್ರೀಡಾಂಗಣದಿಂದ ಕಾರವಾನ್‌ ಏರಲೇಬೇಕಾಯಿತು.

ಮೊಹಿಂದರ್‌ ಅಮರ್‌ನಾಥ್‌ ಪಾತ್ರಕ್ಕಾಗಿ ಸಾಖಿಬ್‌ ಕ್ರಿಕೆಟ್‌ ತರಬೇತಿಯೊಂದಿಗೆ ಕಿಕ್‌ ಬಾಕ್ಸಿಂಗ್ ಮತ್ತು ಮಾಂಸಖಂಡ ಬೆಳೆಸಿಕೊಳ್ಳುವ ತರಬೇತಿ ಪಡೆಯುತ್ತಿದ್ದಾರೆ. ಆದರೆ ತೂಕ ಕಡಿಮೆಯಾಗಬೇಕು! ಇದಕ್ಕಾಗಿ ಸ್ಟ್ರೆಂಥ್‌ ಟ್ರೇನಿಂಗ್‌ನಲ್ಲಿ ಕೋಚ್‌ ವಿಶೇಷ ಕಸರತ್ತುಗಳನ್ನು ಮಾಡಿಸುತ್ತಿದ್ದಾರಂತೆ.

ಸಾಖಿಬ್‌, ಕ್ರಿಕೆಟ್‌ನಲ್ಲಿ ಪಳಗಿರಬಹುದು. ಆದರೆ ಈ ಚಿತ್ರಕ್ಕೆ ಅವರ ಪಾತ್ರ ಬಯಸುವುದುಮೊಹಿಂದರ್‌ ಅಮರ್‌ನಾಥ್‌ ಶೈಲಿಯನ್ನು. ಬಲಗೈಯಲ್ಲಿ ಬ್ಯಾಟಿಂಗ್‌ ಮಾಡಬೇಕು, ಬಲಗೈಯಲ್ಲಿ ಮೀಡಿಯಂ ಬೌಲಿಂಗ್‌ ಮಾಡಬೇಕು, ಬ್ಯಾಟ್‌ ಹಿಡಿದು ಜಿಮ್ಮಿಯವರಂತೆ ನಿಲ್ಲಬೇಕು, ಕ್ರೀಸ್‌ನಲ್ಲಿ ಓಡುವುದೂ ಅವರಂತೆಯೇ ಇರಬೇಕು. ಹಿಂದಿನ ಚಿತ್ರಕ್ಕಾಗಿ ಬೆಳೆಸಿಕೊಂಡಿದ್ದ ಗಡ್ಡ ಮೀಸೆ ಬೋಳಿಸಿಕೊಂಡು ಕ್ಲೀನ್‌ ಶೇವ್ಡ್‌ ಜಿಮ್ಮಿ ಆಗಬೇಕು...

ಇಡೀ ಸಿನಿಮಾ ಆ ಪಂದ್ಯದ ಮೇಲೆ ಕೇಂದ್ರೀಕೃತವಾಗಿರುವ ಕಾರಣ ಸಾಖಿಬ್‌ ಗಮನ ಜಿಮ್ಮಿ ಶೈಲಿ ಮತ್ತು ವರ್ಲ್ಡ್‌ ಕಪ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯಕ್ಕಷ್ಟೇ ಸೀಮಿತವಾಗಿರಬೇಕಾಗಿದೆ. ಸಾಖಿಬ್‌ ನೆನಪಿಸಿಕೊಂಡೇ ಥ್ರಿಲ್ ಆಗುತ್ತಿದ್ದಾರೆ. ದಿನಾ ಐದು ಗಂಟೆ ಕಡ್ಡಾಯವಾಗಿ ಜಿಮ್ಮಿ ಸ್ಟೈಲ್‌ಗಾಗಿ ಕಬೀರ್‌ ಕ್ಯಾಂಪ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ!

ಚಿತ್ರರಂಗದ ಕನಸು ಕಾಣದಿದ್ದರೂ ಸಾಖಿಬ್‌ ಬಣ್ಣದ ಲೋಕಕ್ಕೆ ಪರಿಚಿತರೇ ಆಗಿದ್ದರು. ವೃತ್ತಿಪರ ರೂಪದರ್ಶಿಯಾಗಿದ್ದುದು ಇದಕ್ಕೆ ಕಾರಣ. ಅದರೊಂದಿಗೆ ಹೋಟೆಲ್‌ ಉದ್ಯಮಿ. ದೆಹಲಿಯಲ್ಲಿ ಅವರ 10 ರೆಸ್ಟೊರೆಂಟ್‌ಗಳಿವೆ.

ಸಾಖಿಬ್‌ ಸಲೀಂ,ಬಾಲಿವುಡ್‌ ನಟಿ ಹುಮಾ ಖುರೇಶಿಯ ಸಹೋದರ.2011ರಿಂದಲೂ ಕೆಲವು ಹಿಂದಿ ಚಿತ್ರಗಳಲ್ಲಿ ನಟಿಸಿ ಚಲಾವಣೆಯಲ್ಲಿರುವವರು ಸಾಖಿಬ್‌. ಮುಜ್‌ಸೆ ಫ್ರೆಂಡ್‌ಶಿಪ್‌ ಕರೋಗೆ’, ಮೇರೆ ಡ್ಯಾಡ್‌ ಕೆ ಮಾರುತಿ, ಅಜೀಬ್‌ ದಾಸ್ತಾನ್‌ ಹೈ ಯೇ, ಹವಾ ಹವಾಯಿ, ಡಿಶೂಂ, ದೊಬಾರಾ, ದಿಲ್‌ ಜಂಗ್ಲಿ, ರೇಸ್‌ 3 ಮತ್ತು ರಂಗ್‌ಬಾಜ್‌ನಲ್ಲಿ ಅವರ ನಟನೆ ಗಮನಾರ್ಹವಾಗಿತ್ತು.ರಂಗ್‌ಬಾಜ್‌ನಲ್ಲಿ ಭೂಗತ ಪಾತಕಿ ಶಿವಪ್ರಕಾಶ್‌ ಶುಕ್ಲಾ ಪಾತ್ರದ ನಿರ್ವಹಣೆಗೆ ಬಿ ಟೌನ್‌ ತಲೆದೂಗಿತ್ತು.

ಅಂದ ಹಾಗೆ, ವರ್ಲ್ಡ್‌ ಕಪ್‌ ಪಂದ್ಯದಲ್ಲಿ ಭಾರತ ತಂಡದ ನಾಯಕರಾಗಿದ್ದ ಕಪಿಲ್‌ದೇವ್‌ ಪಾತ್ರದಲ್ಲಿ ರಣವೀರ್‌ ಸಿಂಗ್‌ ನಟಿಸಲಿದ್ದಾರೆ. ಮೇ ಮೊದಲ ವಾರದಲ್ಲಿ ಚಿತ್ರ ಸೆಟ್ಟೇರಲಿದ್ದು,ಅದಕ್ಕೂ ಮುನ್ನ ಎಲ್ಲಾ ನಟರು ಕ್ರಿಕೆಟರ್‌ಗಳ ಗೆಟಪ್‌ನಲ್ಲಿ ಸಜ್ಜುಗೊಳ್ಳಬೇಕಿದೆ ಎಂಬುದು ಕಬೀರ್‌ ಲೆಕ್ಕಾಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.