ನಟಿ ರಾಗಿಣಿ ಮುಖ್ಯಭೂಮಿಕೆಯಲ್ಲಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದೆ. ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಮತ್ತು ಸಾರ್ವಜನಿಕ ಪಡಿತರ ವ್ಯವಸ್ಥೆಯ ಸುತ್ತ ನಡೆಯುವ ಕಥಾಹಂದರವನ್ನು ಹೊಂದಿರುವ ಚಿತ್ರಕ್ಕೆ ಸಾತ್ವಿಕ ಪವನ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
‘ಗ್ರಾಮೀಣ ಭಾಗದಲ್ಲಿ ಪಡಿತರ ವಿತರಣೆಯಲ್ಲಿ ನಡೆಯುವ ಆಗು-ಹೋಗುಗಳ ಸುತ್ತ ಇಡೀ ಚಿತ್ರದ ಕಥೆ ಸಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಗ್ಲಾಮರಸ್ ಪಾತ್ರಗಳಲ್ಲಿ ಗಮನ ಸೆಳೆದಿದ್ದ ನಟಿ ರಾಗಿಣಿ ದ್ವಿವೇದಿ, ಇದೇ ಮೊದಲ ಬಾರಿಗೆ ಹಳ್ಳಿಯ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕುಮಾರ ಬಂಗಾರಪ್ಪ, ದೊಡ್ಡಣ್ಣ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ’ ಎಂದರು ನಿರ್ದೇಶಕರು.
‘ಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಸಿನಿಮಾ. ಹಳ್ಳಿ ಹುಡುಗಿಯೊಬ್ಬಳು ತನ್ನ ಊರಿನ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ನಡೆಯುವ ಭ್ರಷ್ಟ ವ್ಯವಸ್ಥೆಯ ವಿರುದ್ದ ಹೇಗೆ ಹೋರಾಡುತ್ತಾಳೆ ಎಂಬುದೇ ನನ್ನ ಪಾತ್ರ. ಮಂಡ್ಯ ಜಿಲ್ಲೆಯ ಹಳ್ಳಿಯ ಪರಿಸರದಲ್ಲಿ ಇಡೀ ಸಿನಿಮಾ ಮೂಡಿಬರುತ್ತಿದೆ. ಸಿನಿಮಾ ತುಂಬ ಚೆನ್ನಾಗಿ ಬರುತ್ತಿದೆ’ ಎಂದರು ರಾಗಿಣಿ.
‘ಹಳ್ಳಿಯ ಜನರಿಗೆ ಹತ್ತಿರವಾಗುವಂಥ ಕಥೆ ಈ ಸಿನಿಮಾದಲ್ಲಿದೆ. ಬಹು ಸಮಯದ ನಂತರ ನಾನು ಈ ಸಿನಿಮಾದಲ್ಲಿ ಹಳ್ಳಿಯ ಜನಸಾಮಾನ್ಯ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಆಹಾರ ಭದ್ರತೆಯ ಮೇಲೆ ಮಾಡಿರುವ ಈ ಸಿನಿಮಾದಲ್ಲಿ ಒಂದು ಸಂದೇಶವಿದೆ’ ಎಂದರು ಕುಮಾರ ಬಂಗಾರಪ್ಪ
‘ಜಯಶಂಕರ ಟಾಕೀಸ್’ ಬ್ಯಾನರಿನಲ್ಲಿ ಶ್ರೀಮತಿ ತೇಜು ಮೂರ್ತಿ ಮತ್ತು ಎಸ್. ಪದ್ಮಾವತಿ ಬಂಡವಾಳ ಹೂಡಿದ್ದಾರೆ. ಬಿ. ರಾಮಮೂರ್ತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರದ ಹಾಡುಗಳಿಗೆ ಅನಂತ ಆರ್ಯನ್ ಸಂಗೀತ ಸಂಯೋಜಿಸಿದ್ದು, ನಿರ್ದೇಶಕರೇ ಛಾಯಾಚಿತ್ರಗ್ರಹಣದ ಹೊಣೆ ಹೊತ್ತುಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ರಾಜಕಾರಣಿ ಎಲ್.ಆರ್. ಶಿವರಾಮೇಗೌಡ ಕೂಡ ಈ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.