ADVERTISEMENT

ಮನಸ್ಸಿನ ಪಯಣ ‘ಸೀತಾ ಪಯಣ’: ಮಗಳ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ ಅರ್ಜುನ್ ಸರ್ಜಾ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 23:30 IST
Last Updated 26 ಜನವರಿ 2026, 23:30 IST
ಐಶ್ವರ್ಯ, ನಿರಂಜನ್‌ 
ಐಶ್ವರ್ಯ, ನಿರಂಜನ್‌    

ನಟ ಅರ್ಜುನ್‌ ಸರ್ಜಾ ನಿರ್ದೇಶನದ ‘ಸೀತಾ ಪಯಣ’ ಫೆ.14ರಂದು ಬಿಡುಗಡೆಯಾಗುತ್ತಿದೆ. ‘ಸೀತಾ ಪಯಣ ಇದೊಂದು ವ್ಯಕ್ತಿಯ ಪಯಣವಲ್ಲ, ಇದೊಂದು ಮನಸ್ಸಿನ ಪಯಣ’ ಎಂದಿದ್ದಾರೆ ಅರ್ಜುನ್‌ ಸರ್ಜಾ. 

ಶ್ರೀ ರಾಮ್ ಫಿಲಂಸ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದಲ್ಲಿ ನಿರಂಜನ್ ಹಾಗೂ ಐಶ್ವರ್ಯ ಅರ್ಜುನ್ ಜೋಡಿಯಾಗಿ ನಟಿಸಿದ್ದಾರೆ. ಸಿನಿಮಾಗೆ ಅರ್ಜುನ್‌ ಸರ್ಜಾ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ.

‘ಇದು ನಾನು ಕನ್ನಡದಲ್ಲಿ ನಿರ್ದೇಶಿಸಿರುವ ಎರಡನೇ ಸಿನಿಮಾ. ಈವರೆಗೂ ಸುಮಾರು ಹದಿನೈದು ಚಿತ್ರಗಳ ನಿರ್ದೇಶನ ಮಾಡಿದ್ದೇನೆ. ‘ಸೀತಾ ಪಯಣ’ದ ಕಥೆಯನ್ನು ಹದಿಮೂರು ವರ್ಷಗಳ ಹಿಂದೆಯೇ ಸಿದ್ಧಮಾಡಿಕೊಂಡಿದ್ದೆ. ಯಾವಾಗ ಇದನ್ನು ತೆರೆಗೆ ತರುವುದು ಎಂದು ಕಾಯುತ್ತಿದ್ದೆ. ಈಗ ಆ ಕಾಲ ಬಂದಿದೆ. ನನ್ನ ಮಗಳು ಐಶ್ವರ್ಯ ನಾಯಕಿಯಾಗಿ ನಟಿಸಿದ್ದಾಳೆ. ಪ್ರಕಾಶ್ ರಾಜ್‌, ಸತ್ಯರಾಜ್, ಕೋವೈ ಸರಳ ಅವರಂತಹ ಅನುಭವಿ ಕಲಾವಿದರಿದ್ದಾರೆ. ನಾನು ಕೂಡ ಪಾತ್ರವೊಂದಕ್ಕೆ ಬಣ್ಣಹಚ್ಚಿದ್ದು, ಧ್ರುವ ಸರ್ಜಾ ಅವರೂ ವಿಶೇಷ ಪಾತ್ರವೊಂದರಲ್ಲಿದ್ದಾರೆ. ಧ್ರುವ ಅವರ ಅಭಿಮಾನಿಗಳಿಗೆ ಈ ಪಾತ್ರ ಮೆಚ್ಚುಗೆಯಾಗಲಿದೆ. ‘ಸೀತಾ ಪಯಣ’ ಇದು ಬರೀ ವ್ಯಕ್ತಿಯ ಪಯಣವಲ್ಲ. ಮನಸ್ಸಿನ ಪಯಣ, ನಾವು ತಿಳಿದುಕೊಳ್ಳಬೇಕಿರುವ ಮೌಲ್ಯಗಳ ಪಯಣ ಹಾಗೂ ಭಾವನೆಗಳ ಜೊತೆಗಿನ ಸುಂದರ ಪಯಣ. ಈ ಚಿತ್ರ ನೋಡಿದವರು ಚಿತ್ರಮಂದಿರದಿಂದ ಹೋಗುವಾಗ ಒಂದು ನಗುವಿನ ಜೊತೆ ಹೋಗುವುದು ಖಂಡಿತ. ಸಿನಿಮಾ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ’ ಎಂದರು ಅರ್ಜುನ್ ಸರ್ಜಾ.‌

ADVERTISEMENT

ಚಿತ್ರಕ್ಕೆ ಅನೂಪ್ ರುಬೆನ್ಸ್ ಸಂಗೀತ ಸಂಯೋಜಿಸಿದ್ದು, ಬಾಲಮುರುಗನ್ ಛಾಯಾಚಿತ್ರಗ್ರಹಣ ಹಾಗೂ ಆಯೂಬ್ ಸಂಕಲನವಿದೆ. 

ಅಪ್ಪ ಒಂದೊಳ್ಳೆಯ ಚಿತ್ರ ನಿರ್ದೇಶನ ಮಾಡಿದ್ದಾರೆ. ಎಲ್ಲರೂ ಕುಟುಂಬ ಸಮೇತ ನೋಡಬಹುದಾದ ಚಿತ್ರವಿದು. ಹಿರಿಯ ಕಲಾವಿದರ ಜೊತೆಗೆ ಅಭಿನಯಿಸಿದ ಖುಷಿಯಿದೆ. ಸಿನಿಮಾದ ಎರಡು ಹಾಡುಗಳು ಸದ್ಯದಲ್ಲೇ ಅನಾವರಣವಾಗಲಿದೆ.
ಐಶ್ವರ್ಯ ಅರ್ಜುನ್ ನಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.