
ಐಶ್ವರ್ಯ ಅರ್ಜುನ್
ಬಹುಭಾಷಾ ನಟ ಅರ್ಜುನ್ ಸರ್ಜಾ ನಿರ್ದೇಶನದ ‘ಸೀತಾ ಪಯಣ’ ಫೆ.14ರಂದು ಬಿಡುಗಡೆಯಾಗುತ್ತಿದ್ದು, ಸಿನಿಮಾದ ‘ಅಸಲಿ ಸಿನಿಮಾ’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು.
ಶ್ರೀ ರಾಮ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ‘ಚೆಲುವಿ ನೀನೇ ಅಂತಾರೋ... ಲುಕ್ ಅಲ್ಲಿ ಬಬ್ಲಿ ಅಂತಾರೋ..’ ಎಂಬ ಹಾಡಿಗೆ ಭರತ್ ಜನನಿ ಸಾಹಿತ್ಯವಿದ್ದು, ಅನುರಾಧಾ ಭಟ್ ಹಾಡಿದ್ದಾರೆ. ಅನೂಪ್ ರೂಬೆನ್ಸ್ ಸಂಗೀತ ಹಾಡಿಗಿದೆ. ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಅರ್ಜುನ್ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.
ಚಿತ್ರದಲ್ಲಿ ನಿರಂಜನ್ ನಾಯಕನಾಗಿ ನಟಿಸಿದ್ದು, ಪೋಷಕ ಪಾತ್ರಗಳಲ್ಲಿ ಸತ್ಯರಾಜ್, ಪ್ರಕಾಶ್ ರಾಜ್ ಮತ್ತು ಕೋವೈ ಸರಳಾ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಸರ್ಜಾ ಅವರೂ ಒಂದು ಭಿನ್ನಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಧ್ರುವ ಸರ್ಜಾ ಅವರೂ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರೇಮಿಗಳ ದಿನಕ್ಕೆ ಸಿನಿಮಾ ತೆರೆಕಾಣುತ್ತಿದ್ದು, ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಗೆ ತರಲು ಚಿತ್ರತಂಡ ಯೋಜಿಸಿದೆ.
ಸಿನಿಮಾಗೆ ಅರ್ಜುನ್ ಸರ್ಜಾ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಜಿ. ಬಾಲಮುರುಗನ್ ಛಾಯಾಚಿತ್ರಗ್ರಹಣ, ಅಯೂಬ್ ಖಾನ್ ಸಂಕಲನ, ಅರ್ಜುನ್ ಸರ್ಜಾ ಸಾಹಸ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.