ಚಂದನವನದ ತೆರೆಗಳಲ್ಲಿ ಇಂದು (ಸೆ.5) ಏಳು ಸಿನಿಮಾಗಳು ತೆರೆಕಾಣುತ್ತಿವೆ. ಈ ಪೈಕಿ ಕನ್ನಡದ ಐದು ಸಿನಿಮಾಗಳು ಇವೆ.
ಏಳುಮಲೆ: ‘ಕಾಟೇರ’ ಚಿತ್ರದ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ನಿರ್ಮಾಣದ, ಪುನೀತ್ ರಂಗಸ್ವಾಮಿ ನಿರ್ದೇಶನದ ಸಿನಿಮಾವಿದು. ನಟ ರಾಣಾ, ‘ಮಹಾನಟಿ’ ರಿಯಾಲಿಟಿ ಶೋ ವಿಜೇತೆ ಪ್ರಿಯಾಂಕಾ ಆಚಾರ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಜಗಪತಿ ಬಾಬು, ಟಿ.ಎಸ್. ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ‘ಏಳುಮಲೆ’ಯ ತಾರಾಬಳಗದಲ್ಲಿದ್ದಾರೆ. ಸಿನಿಮಾಗೆ ಅದ್ವೈತ ಗುರುಮೂರ್ತಿ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ.
ನಾನು ಮತ್ತು ಗುಂಡ 2: ಈ ಹಿಂದೆ ತೆರೆಕಂಡಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ಮುಂದುವರಿದ ಭಾಗವಿದು. ರಘು ಹಾಸನ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಅವರೇ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ರಾಕೇಶ್ ಅಡಿಗ, ರಚನಾ ಇಂದರ್ ಮುಖ್ಯಭೂಮಿಕೆಯಲ್ಲಿದ್ದಾರೆ. ಆರ್.ಪಿ.ಪಟ್ನಾಯಕ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಈ ಹಿಂದಿನ ಸಿನಿಮಾದಲ್ಲಿದ್ದ ಶಂಕರ ನಿಧನನಾದ ಮೇಲೆ ಆತನ ಮಗನಿಂದ ಕಥೆ ಮುಂದುವರಿಯುತ್ತದೆ. ರಾಕೇಶ್ ಅಡಿಗ ಶಂಕರನ ಮಗನಾಗಿ ನಟಿಸಿದ್ದಾರೆ.
31 ಡೇಸ್: ‘ಜಾಲಿಡೇಸ್’ ಖ್ಯಾತಿಯ ನಿರಂಜನ್ ಶೆಟ್ಟಿ ಅಭಿನಯದ ಸಿನಿಮಾವಿದು. ಎನ್ ಸ್ಟಾರ್ ಬ್ಯಾನರ್‌ನಲ್ಲಿ ನಾಗವೇಣಿ ಎನ್. ಶೆಟ್ಟಿ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ರಾಜ ರವಿಕುಮಾರ್ ನಿರ್ದೇಶಿಸಿದ್ದಾರೆ. ನಿರಂಜನ್ ಶೆಟ್ಟಿ ಹಾಗೂ ಪ್ರಜ್ವಲಿ ಸುವರ್ಣ ನಾಯಕ–ನಾಯಕಿಯಾಗಿ ನಟಿಸಿರುವ ಸಂಗೀತ ಪ್ರಧಾನ ಸಿನಿಮಾವಿದು. ವಿ.ಮನೋಹರ್ ಸಂಗೀತ ನಿರ್ದೇಶನದ 150ನೇ ಚಿತ್ರವಾಗಿದೆ. ವಿನುತ್ ಕೆ. ಛಾಯಾಚಿತ್ರಗ್ರಹಣ, ಧನು ಕುಮಾರ್, ತ್ರಿಭುವನ್ ನೃತ್ಯ ನಿರ್ದೇಶನ ಸಿನಿಮಾಗಿದೆ.
ಓಂ ಶಿವಂ: ಅಲ್ವಿನ್ ನಿರ್ದೇಶನದ, ದೀಪಾ ಮೂವೀಸ್ ಲಾಂಛನದಲ್ಲಿ ಕೆ.ಎನ್.ಕೃಷ್ಣ ಅವರು ನಿರ್ಮಿಸಿರುವ ಸಿನಿಮಾ ಇದಾಗಿದೆ. ಭಾರ್ಗವ ಕೃಷ್ಣ ಮತ್ತು ವಿರಾನಿಕ ಶೆಟ್ಟಿ ಜೋಡಿಯಾಗಿ ನಟಿಸಿರುವ ಈ ಸಿನಿಮಾ ರೊಮ್ಯಾಂಟಿಕ್ ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ವಿರೇಶ್ ಛಾಯಾಚಿತ್ರಗ್ರಹಣ, ಸತೀಶ್ ಚಂದ್ರ ಸಂಕಲನ, ವಿಜಯ್ ಯಾರ್ಡ್ಲಿ ಸಂಗೀತ ನಿರ್ದೇಶನ, ನಾಗೇಶ್ ನೃತ್ಯ ನಿರ್ದೇಶನ ಹಾಗೂ ಕೌರವ ವೆಂಕಟೇಶ್, ನರಸಿಂಹ, ವೈಲೆಂಟ್ ವೇಲು ಸಾಹಸ ನಿರ್ದೇಶನ ಚಿತ್ರಕ್ಕಿದೆ. ರವಿ ಕಾಳೆ, ಕಾಕ್ರೋಜ್ ಸುಧಿ, ಯಶ್ ಶೆಟ್ಟಿ, ಬಲ ರಾಜವಾಡಿ, ಲಕ್ಷ್ಮೀ ಸಿದ್ದಯ್ಯ, ಅಪೂರ್ವ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಈ ಸಿನಿಮಾಗಳ ಜೊತೆಗೆ ‘ಕುಡ್ಲ ನಮ್ದು ಊರು’ ಹಾಗೂ ‘ನಮೋ ವೆಂಕಟೇಶ’ ಸಿನಿಮಾಗಳು ತೆರೆಕಾಣುತ್ತಿವೆ. ಮಲಯಾಳದಲ್ಲಿ ತೆರೆಕಂಡಿದ್ದ ರಾಜ್ ಬಿ.ಶೆಟ್ಟಿ ಹಾಗೂ ಅಪರ್ಣಾ ಬಾಲಮುರಳಿ ನಟನೆಯ ‘ರುಧಿರಂ’ ಸಿನಿಮಾ ಕನ್ನಡದಲ್ಲಿ ಡಬ್ ಆಗಿ ತೆರೆಕಾಣುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.