ADVERTISEMENT

‘ಕಸ್ತೂರಿ ಮಹಲ್‌’ನೊಳಗೆ ಶಾನ್ವಿ: ಮತ್ತೆ ಚಂದನವನದತ್ತ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 11:18 IST
Last Updated 29 ಮಾರ್ಚ್ 2022, 11:18 IST
ನಟಿ ಶಾನ್ವಿ ಶ್ರೀವಾಸ್ತವ್‌
ನಟಿ ಶಾನ್ವಿ ಶ್ರೀವಾಸ್ತವ್‌   

ಸದ್ಯಕ್ಕೆ ಪರಭಾಷಾ ಚಿತ್ರಗಳ ಚಿತ್ರೀಕರಣದಲ್ಲೇ ತೊಡಗಿಸಿಕೊಂಡಿರುವ ನಟಿ ಶಾನ್ವಿ ಶ್ರೀವಾಸ್ತವ್‌, ಸುಮಾರು ಎರಡೂವರೆ ವರ್ಷದ ಬಳಿಕ ಹಾರರ್‌ ಚಿತ್ರದ ಮೂಲಕ ಮತ್ತೆ ಚಂದನವನದ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರ ‘ಕಸ್ತೂರಿ ಮಹಲ್‌’ ಮೇ 13ರಂದು ಬಿಡುಗಡೆಯಾಗುತ್ತಿದೆ. ಈ ಹಾರರ್‌ ಚಿತ್ರದ ಚಿತ್ರೀಕರಣವು ಕೊಟ್ಟಿಗೆಹಾರದಲ್ಲಿರುವ ಸುಮಾರು 200 ವರ್ಷ ಹಳೆಯ ಮನೆಯಲ್ಲಿ ನಡೆದಿದೆ. ಈ ಮನೆಯು ಚಿತ್ರದ ನಾಯಕ ಸ್ಕಂದ ಅವರ ಪೂರ್ವಜರಿಗೆ ಸೇರಿದ್ದಾಗಿದೆ.

‘ಈ ಹಿಂದೆ ‘ಚಂದ್ರಲೇಖ’ ಎನ್ನುವ ಹಾರರ್‌ ಸಿನಿಮಾ ಮಾಡಿದ್ದೆ. ಮತ್ತೊಂದು ಹಾರರ್‌ ಸಿನಿಮಾದಲ್ಲಿ ನಟಿಸಬೇಕೇ ಅಥವಾ ಬೇಡವೇ ಎನ್ನುವ ಗೊಂದಲದಲ್ಲಿದ್ದೆ. ಆದರೆ ಚಿತ್ರದ ಕಥೆ ಕೇಳಿ, ನಿರ್ದೇಶಕರಿಗಿದ್ದ ಭರವಸೆ ನೋಡಿ ಒಪ್ಪಿಕೊಂಡೆ. ಕೋವಿಡ್‌ ಪಿಡುಗು ಆರಂಭವಾದ ಸಂದರ್ಭದಲ್ಲಿ ದೊರಕಿದ್ದ ಪ್ರೊಜೆಕ್ಟ್‌ ಇದು.ಕನ್ನಡದಲ್ಲಿ ಸಾಕಷ್ಟು ಹಾರರ್ ಚಿತ್ರಗಳು ಬಂದಿವೆಯಾದರೂ ಇದರ ಕಥೆ ವಿಭಿನ್ನವಾಗಿದೆ. ಚಿತ್ರೀಕರಣವಾದ ಕೊಟ್ಟಿಗೆಹಾರದ ಪರಿಸರವಂತೂ ಅದ್ಭುತ’ ಎಂದು ಚಿತ್ರೀಕರಣದ ದಿನಗಳನ್ನು ಶಾನ್ವಿ ನೆನಪಿಸಿಕೊಂಡರು.

ADVERTISEMENT

ರಂಗಾಯಣ ರಘು, ಶೃತಿ ಪ್ರಕಾಶ್, ವತ್ಸಲಾ ಮೋಹನ್, ಕಾಶಿಮಾ, ನೀನಾಸಂ ಅಶ್ವಥ್ ಚಿತ್ರದ ತಾರಾಗಣದಲ್ಲಿದ್ದಾರೆ. ರಮೇಶ್ ಕೃಷ್ಣ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.