ADVERTISEMENT

ದೇವರು ಏಕೆ ನೋವು ಕೊಡುತ್ತಾನೋ ತಿಳಿದಿಲ್ಲ: ಶಿವರಾಂ ಸ್ಥಿತಿಯ ಬಗ್ಗೆ ಶಿವಣ್ಣ ಬೇಸರ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 8:25 IST
Last Updated 3 ಡಿಸೆಂಬರ್ 2021, 8:25 IST
ಶಿವರಾಜ್‌ಕುಮಾರ್‌
ಶಿವರಾಜ್‌ಕುಮಾರ್‌   

ಬೆಂಗಳೂರು: ನಟ ಶಿವರಾಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ನಗರದ ಪ್ರಶಾಂತ್‌ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿದ ನಟ ಶಿವರಾಜ್‌ಕುಮಾರ್‌, ಶಿವರಾಂ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರ ಬಳಿ ಸಮಾಲೋಚನೆ ನಡೆಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನನಗೇನೋ ಶಿವರಾಮಣ್ಣ ಚಿಕಿತ್ಸೆಗೆ ಸ್ಪಂದಿಸುತ್ತಾರೆ ಎನ್ನುವ ಭರವಸೆ ಇದೆ. ಇನ್ನು ದೇವರ ಇಚ್ಛೆ. ನನ್ನನ್ನು ಚಿಕ್ಕ ಮಗುವಿದ್ದಾಗಲಿಂದಲೂ ಶಿವರಾಮಣ್ಣ ನೋಡಿದ್ದಾರೆ. ಸಿನಿಮಾ ಬಿಟ್ಟು ನಮ್ಮ ಕುಟುಂಬದ ಭಾಗದಂತೆ ಅವರಿದ್ದರು. ಮೂರು ವರ್ಷದ ಹಿಂದೆಯಷ್ಟೇ ಜೊತೆಗೇ ಶಬರಿಮಲೆಗೆ ಹೋಗಿದ್ದೇವೆ. ಈ ಸಂದರ್ಭದಲ್ಲಿ ಅವರ ಬಗ್ಗೆ ಮಾತನಾಡಲು ನೋವಾಗುತ್ತದೆ. ನಾವು ಅವರ ಕುಟುಂಬಕ್ಕೆ ಧೈರ್ಯ ಹೇಳುವುದಕ್ಕಿಂತ ನಾವೇ ಅವರ ಕುಟುಂಬ. ನಾವು ತಮ್ಮನನ್ನು ಕಳೆದುಕೊಂಡು ಒಂದು ತಿಂಗಳಾಗಿದೆ. ಈ ನೋವಲ್ಲೇ ಇರಬೇಕಾದರೆ ದೇವರು ಏಕೆ ಈ ರೀತಿ ಪದೇ ಪದೇ ನೋವು ಕೊಡುತ್ತಾನೆ ಎಂದು ಗೊತ್ತಾಗುತ್ತಿಲ್ಲ’ ಎಂದರು.

‘ನಮ್ಮ ಕುಟುಂಬದ ಯಾವುದೇ ಸ್ಥಿತಿಯಾಗಲಿ ಶಿವರಾಮಣ್ಣ ಜೊತೆಗೇ ಇದ್ದರು. ದೇವರ ಪೂಜೆ ಮಾಡಲು ಹೋಗುವಾಗಲೇ ಹೀಗಾಗಿದೆ ಎಂದರೆ ಅಯ್ಯಪ್ಪ ಕೈಬಿಡಲ್ಲ ಎನ್ನುವ ನಂಬಿಕೆ ನನ್ನದು. ವೆಂಟಿಲೇಟರ್‌ನಲ್ಲಿ ಇರುವುದರಿಂದ ಎಲ್ಲರಿಗೂ ಆತಂಕವಿದೆ. ದೇವರು ಕೈಬಿಡಲ್ಲ. ಅಯ್ಯಪ್ಪಸ್ವಾಮಿ ಯಾವತ್ತೂ ಅವರ ಕೈಹಿಡಿಯುತ್ತಾರೆ. 81ನೇ ವರ್ಷದಲ್ಲಿ ಎರಡೇ ಗಂಟೆಯಲ್ಲಿ ಬೆಟ್ಟ ಹತ್ತಿದ್ದರು. ಅವರಲ್ಲಿ ಅಷ್ಟು ಸಾಮರ್ಥ್ಯವಿದೆ. ಕರ್ನಾಟಕ ಜನತೆಯ ಪ್ರೀತಿವಿಶ್ವಾಸ ಅವರನ್ನು ವಾಪಸ್‌ ಕರೆತರಲಿದೆ. ವರ್ಷಕ್ಕೆ ಮೂರ್ನಾಲ್ಕು ಬಾರಿ ಶಬರಿಮಲೆಗೆ ಅವರು ಹೋಗುತ್ತಿದ್ದರು. ಅಯ್ಯಪ್ಪಸ್ವಾಮಿ ಮೇಲೆ ಅವರಿಗೆ ವಿಶೇಷ ಪ್ರೀತಿ. ದೇವರು ಅವರನ್ನು ಕಾಪಾಡಬೇಕು ಎನ್ನುವುದೇ ನಮ್ಮ ಆಸೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.