ADVERTISEMENT

ಆಗಸ್ಟ್ 7ಕ್ಕೆ ಒಟಿಟಿಯಲ್ಲಿ ‘ಶಿವಾಜಿ ಸುರತ್ಕಲ್‌’ ಸಿನಿಮಾ ಪ್ರಸಾರ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 11:26 IST
Last Updated 30 ಜುಲೈ 2020, 11:26 IST
‘ಶಿವಾಜಿ ಸುರತ್ಕಲ್‌’ ಚಿತ್ರದಲ್ಲಿ ರಮೇಶ್‌ ಅರವಿಂದ್‌
‘ಶಿವಾಜಿ ಸುರತ್ಕಲ್‌’ ಚಿತ್ರದಲ್ಲಿ ರಮೇಶ್‌ ಅರವಿಂದ್‌   

ರಮೇಶ್‌ ಅರವಿಂದ್‌ ಅಭಿನಯದ 101ನೇ ಚಿತ್ರ ‘ಶಿವಾಜಿ ಸುರತ್ಕಲ್‌’. ಮೊದಲ ಬಾರಿಗೆ ಅವರು ಈ ಚಿತ್ರದಲ್ಲಿ ಪತ್ತೇದಾರಿಯಾಗಿ ನಟಿಸಿದ್ದಾರೆ. ಆಕಾಶ್ ಶ್ರೀವತ್ಸ ನಿರ್ದೇಶಿಸಿದ ರೊಮ್ಯಾಂಟಿಕ್‌, ಆ್ಯಕ್ಷನ್‌, ಥ್ರಿಲ್ಲರ್‌ ಕಥನ ಹೊಂದಿದ್ದ ಈ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಉತ್ತಮವಾಗಿ ಪ್ರದರ್ಶನ ಕಾಣುತ್ತಿದ್ದ ವೇಳೆಯೇ ಕೊರೊನಾ ಲಾಕ್‌ಡೌನ್‌ ಬಿಸಿಯು ಇದಕ್ಕೂ ತಟ್ಟಿತು.

ಒಳ್ಳೆಯ ಕಲೆಕ್ಷನ್ ಕೂಡ ಇತ್ತು. ಪ್ರದರ್ಶನ ರದ್ದಾದ ಪರಿಣಾಮ ಚಿತ್ರತಂಡಕ್ಕೆ ತೀವ್ರ ನಿರಾಶೆಯಾಯಿತು. ಪ್ರೇಕ್ಷಕರು ಕೂಡ ನಿರಾಶೆ ಅನುಭವಿಸುವಂತಾಯಿತು. ಚಿತ್ರಮಂದಿರಗಳ ಪ್ರದರ್ಶನ ಮತ್ತೆ ಆರಂಭಗೊಂಡಾಗ ಸಿನಿಮಾದ ಮರು ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿತ್ತು. ಆದರೆ, ಚಿತ್ರಮಂದಿರಗಳು ಯಾವಾಗ ತೆರೆಯುತ್ತವೆ ಎಂಬುದು ಅನಿಶ್ಚಿತತೆಯಿಂದ ಕೂಡಿದೆ.

ಈಗ ಒಟಿಟಿ ವೇದಿಕೆ ಮೂಲಕ ಸಿನಿಮಾ ಪ್ರಸಾರಕ್ಕೆ ಚಿತ್ರತಂಡ ನಿರ್ಧರಿಸಿದೆ. ಈ ವೇದಿಕೆ ಮೂಲಕ ಮತ್ತಷ್ಟು ಜನರಿಗೆ ಸಿನಿಮಾವನ್ನು ತಲುಪಿಸುವುದು ತಂಡದ ಉದ್ದೇಶ. ಆಗಸ್ಟ್ 7ರಂದು ಜೀ5ನಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಜೀ 5ನಲ್ಲಿ ಪ್ರಸಾರವಾದ ಒಂದು ವಾರದ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆಯಂತೆ. ಇನ್ನೂ ಇದರ ದಿನಾಂಕ ಅಧಿಕೃತಗೊಂಡಿಲ್ಲ.

ADVERTISEMENT

ಇದಕ್ಕೆ ಗುರುಪ್ರಸಾದ್ ಎಂ.ಜಿ. ಅವರ ಛಾಯಾಗ್ರಹಣವಿದೆ. ರೇಖಾ ಕೆ.ಎನ್. ಮತ್ತು ಅನೂಪ್ ಗೌಡ ಬಂಡವಾಳ ಹೂಡಿದ್ದಾರೆ.ರಾಧಿಕಾ ನಾರಾಯಣ್‌, ಆರೋಹಿ ನಾರಾಯಣ್‌ ತಾರಾಗಣದಲ್ಲಿದ್ದಾರೆ.

ಅಂದಹಾಗೆ ಈ ಚಿತ್ರದ ಸ್ವೀಕೆಲ್‌ ಕೂಡ ಬರಲಿದ್ದು, ನಿರ್ದೇಶಕರು ಸ್ಕ್ರಿಪ್ಟ್‌ ಸಿದ್ಧಪಡಿಸುತ್ತಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.