‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬಳಿಕ ನಿರ್ದೇಶಕ ಹೇಮಂತ್ ಎಂ.ರಾವ್ ಶಿವರಾಜ್‌ಕುಮಾರ್ ಅವರಿಗೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿ ‘ಭೈರವನ ಕೊನೆ ಪಾಠ’ ಸಿನಿಮಾ ಕೈಗೆತ್ತಿಕೊಂಡಿದ್ದರು. ಸದ್ಯಕ್ಕೆ ಈ ಪ್ರಾಜೆಕ್ಟ್ ಅನ್ನು ಮುಂದೂಡಿರುವ ಹೇಮಂತ್ ಮತ್ತೊಂದು ಸಿನಿಮಾವನ್ನು ಇದೇ ವರ್ಷದಲ್ಲಿ ತೆರೆಗೆ ತರುವ ಸಿದ್ಧತೆಯಲ್ಲಿದ್ದಾರೆ.
‘ಶಿವರಾಜ್‌ಕುಮಾರ್ ಅವರ ಅನಾರೋಗ್ಯದ ಸುದ್ದಿ ತಿಳಿದ ಸಂದರ್ಭದಲ್ಲಿ ನಾವು ‘ಭೈರವನ ಕೊನೆ ಪಾಠ’ ಸಿನಿಮಾಗೆ ಸೆಟ್ ಸಿದ್ಧವಾಗುತ್ತಿತ್ತು. ಈ ಸಿನಿಮಾ ಕಥೆ 12ನೇ ಶತಮಾನದಲ್ಲಿ ನಡೆಯುವಂತಹದ್ದು. ಇದು ಪೂರ್ಣವಾದ ಕಾಲ್ಪನಿಕ ಕಥೆ. ಆದರೆ ಫ್ಯಾಂಟಸಿ ಕಥೆಯಲ್ಲ. ನಮ್ಮ ನಾಡಿನಲ್ಲಿ ಆಳಿದ ನೂರಾರು ರಾಜರ ಪೈಕಿ ಕೆಲವರ ಕಥೆಯಷ್ಟೇ ನಮಗೆ ತಿಳಿದಿದೆ. ‘ಭೈರವನ ಕೊನೆ ಪಾಠ’ ಒಂದು ಸಾಮ್ರಾಜ್ಯದ ಕಥೆ. ಇದು ದೊಡ್ಡ ಸ್ಕೇಲ್‌ನ ಪ್ರಾಜೆಕ್ಟ್. ಈ ಸಿನಿಮಾದಲ್ಲಿನ ಅವರ ಪಾತ್ರಕ್ಕೆ ಹೆಚ್ಚಿನ ದೈಹಿಕ ಶ್ರಮ ಅಗತ್ಯವಿತ್ತು. ಇದರಲ್ಲಿ ಕುದುರೆ ಓಡಿಸಬೇಕು, ತೂಕವುಳ್ಳ ವಸ್ತ್ರಗಳನ್ನು ಧರಿಸಬೇಕು. ಹೀಗಾಗಿ ಅವರು ಈ ಪಾತ್ರಕ್ಕೆ ದೈಹಿಕವಾಗಿ ಸಂಪೂರ್ಣ ಸಿದ್ಧರಿರುವವರೆಗೂ ಮುಂದೂಡಲು ನಾವೇ ನಿರ್ಧರಿಸಿದೆವು. ಅವರಿಗೂ ಡ್ಯೂಪ್ ಬಳಸುವುದು ಇಷ್ಟವಿರಲಿಲ್ಲ. ತಾವೇ ಆ ಪಾತ್ರವನ್ನು ಸಂಪೂರ್ಣವಾಗಿ ನಿಭಾಯಿಸಬೇಕು ಎಂದಿದ್ದರು. ಶಿವರಾಜ್‌ಕುಮಾರ್ ಅವರನ್ನು ಹೊಸದೊಂದು ಪಾತ್ರದಲ್ಲಿ ತೋರಿಸುವುದು ನಮ್ಮ ಉದ್ದೇಶ. ಹೀಗಾಗಿ ಇದೇ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ’ ಎಂದರು ಹೇಮಂತ್.
‘ಈ ನಡುವೆ ಹೊಸದೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದೇನೆ. ಇದು ಪ್ರಿ ಪ್ರೊಡಕ್ಷನ್ ಹಂತದಲ್ಲಿದೆ. ನಟ ಧನಂಜಯ ಸೇರಿದಂತೆ ಕಲಾವಿದರ ಜೊತೆ ಮಾತುಕತೆ ನಡೆಯುತ್ತಿದೆ. ಯಾವುದೂ ಅಧಿಕೃತಗೊಂಡಿಲ್ಲ. ಈ ಸಿನಿಮಾವನ್ನು ಇದೇ ವರ್ಷ ಪೂರ್ಣಗೊಳಿಸಿ, ತೆರೆಗೆ ತರುವ ಆಲೋಚನೆ ಇದೆ’ ಎಂದಿದ್ದಾರೆ.
ದಾಕ್ಷಾಯಣಿ ಟಾಕೀಸ್ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಹೇಮಂತ್, ಇತ್ತೀಚೆಗೆ ‘ಅಜ್ಞಾತವಾಸಿ’ ತೆರೆಗೆ ತಂದಿದ್ದರು. ‘ಹಲವು ಕಥೆಗಳನ್ನು ಕೇಳಿದ್ದು, ಮೂರ್ನಾಲ್ಕು ಕಥೆಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಇವುಗಳ ನಿರ್ಮಾಣ ಮಾಡಲಿದ್ದೇನೆ. ನನ್ನ ನಿರ್ಮಾಣ ಸಂಸ್ಥೆಯಡಿ ನನ್ನ ಸಿನಿಮಾಗಳೂ ಸೇರಿದಂತೆ ಇತರರ ಸಿನಿಮಾಗಳೂ ನಿರ್ಮಾಣವಾಗಲಿದೆ’ ಎಂದರು ಹೇಮಂತ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.