ADVERTISEMENT

ಸೆಟ್ಟೇರಲು ಸಜ್ಜಾದ ಶಿವಣ್ಣ ಹೊಸ ಚಿತ್ರ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 21:16 IST
Last Updated 31 ಆಗಸ್ಟ್ 2025, 21:16 IST
ಶಿವರಾಜ್‌ಕುಮಾರ್‌
ಶಿವರಾಜ್‌ಕುಮಾರ್‌   

ನಟ ಶಿವರಾಜ್‌ಕುಮಾರ್‌ ಕೈಯಲ್ಲಿ ಸಾಲು, ಸಾಲು ಸಿನಿಮಾಗಳಿವೆ. ಉಪೇಂದ್ರ ಜತೆ ನಟಿಸಿರುವ ‘45’ ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ‘ಎ ಫಾರ್‌ ಆನಂದ್‌’ ಚಿತ್ರೀಕರಣ ನಡೆಯುತ್ತಿದೆ. ‘131’ ಚಿತ್ರ ಸೆಟ್ಟೇರಿದೆ. ಹೇಮಂತ್‌ ರಾವ್‌ ನಿರ್ದೇಶನದ ‘666 ಆಪರೇಷನ್‌’ ಚಿತ್ರದಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳು, ತೆಲುಗು ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗಷ್ಟೇ ಆರೋಗ್ಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಶಿವಣ್ಣ ಅವರ ಎನರ್ಜಿ, ಸಿನಿಮಾ ಕುರಿತಾದ ಉತ್ಸಾಹ ಒಂಚೂರು ಕಡಿಮೆಯಾಗಿಲ್ಲ. ಇದೀಗ ಪವನ್ ಒಡೆಯರ್ ಜತೆ ಕೈಜೋಡಿಸಿದ್ದು, ಸೆಪ್ಟೆಂಬರ್ ಮೊದಲ ವಾರದಿಂದಲೇ ಈ ಚಿತ್ರದ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ. 

ಯಶ್ ನಟನೆಯ ‘ಟಾಕ್ಸಿಕ್’, ಧ್ರುವ ಸರ್ಜಾ ನಟನೆಯ ‘ಕೆಡಿ’, ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಸೇರಿ ಹಲವು ಬಹುನಿರೀಕ್ಷಿತ ಸಿನಿಮಾಗಳನ್ನು ನಿರ್ಮಿಸಿರುವ ‘ಕೆವಿಎನ್ ಪ್ರೊಡಕ್ಷನ್ಸ್’ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದರಿಂದ ನಿರೀಕ್ಷೆ ಹೆಚ್ಚಾಗಿದೆ. ಇತ್ತೀಚೆಗೆ ಈ ಸಿನಿಮಾದ ಸ್ಕ್ರಿಪ್ಟ್ ಪೂಜೆ ನೆರವೇರಿದೆ.

‘ಗೂಗ್ಲಿ’ ಖ್ಯಾತಿಯ ನಿರ್ದೇಶಕ ಪವನ್‌ ಒಡೆಯರ್‌ ಪುನೀತ್‌ ರಾಜ್‌ಕುಮಾರ್‌ ಅವರ ಎರಡು ಸಿನಿಮಾಗಳಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದರು. ಅವರು ಶಿವರಾಜ್‌ಕುಮಾರ್‌ಗೆ ಆ್ಯಕ್ಷನ್‌ ಕಟ್‌ ಹೇಳುವುದು ವರ್ಷಗಳ ಹಿಂದೆಯೇ ಖಚಿತವಾಗಿತ್ತು. ಇದೀಗ ಚಿತ್ರ ಸೆಟ್ಟೇರುವ ಹಂತಕ್ಕೆ ಬಂದಿದೆ. ನಿರ್ದೇಶನ ಮಾಡುವುದರ ಜೊತೆಗೆ ಪವನ್ ಒಡೆಯರ್ ಅವರು ನಿರ್ಮಾಣದಲ್ಲೂ ಕೈ ಜೋಡಿಸುತ್ತಿದ್ದಾರೆ. ‘ಕೆವಿಎನ್ ಪ್ರೊಡಕ್ಷನ್ಸ್’ ಮತ್ತು ಪವನ್ ಒಡೆಯರ್ ಅವರ ‘ಒಡೆಯರ್ ಮೂವೀಸ್’ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿವೆ.

ADVERTISEMENT

‘ಸೆಪ್ಟೆಂಬರ್ ‌3ರಂದು ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ. ನಂತರ ಮಂಡ್ಯ, ಮುಂಬೈ, ಹೈದರಾಬಾದ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ’ ಎಂದಿದೆ ಚಿತ್ರತಂಡ.

ಆ್ಯಕ್ಷನ್‌ ಜತೆಗೆ ಮನರಂಜನೆ ಹೊಂದಿರುವ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಶಶಾಂಕ್ ನಾರಾಯಣ್‌ ಸಂಕಲನವಿರಲಿದೆ. ಜಯರಾಮ್, ಗೋಪಾಲಕೃಷ್ಣ ದೇಶಪಾಂಡೆ, ಪ್ರಕಾಶ್ ಬೆಳವಾಡಿ, ಸಾಯಿ ಕುಮಾರ್, ಸಂಜನಾ ಆನಂದ್, ದೀಕ್ಷಿತ್ ಶೆಟ್ಟಿ ಮುಂತಾದವರು ತಾರಾಗಣದಲ್ಲಿದ್ದಾರೆ. 

ಚಿತ್ರತಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.