ADVERTISEMENT

ಸ್ಯಾಂಡಲ್‌ವುಡ್‌ನಲ್ಲಿ ಇಂದು ಆರು ಸಿನಿಮಾಗಳು ತೆರೆಗೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 22:27 IST
Last Updated 25 ಜುಲೈ 2024, 22:27 IST
ಬಿ.ವಿ ಭರತ್
ಬಿ.ವಿ ಭರತ್   

ಕಳೆದ ಶುಕ್ರವಾರದಿಂದ ಚಂದನವನದ ತೆರೆಗಳಿಗೆ ಸಿನಿಮಾಗಳ ಹರಿವು ಹೆಚ್ಚಾಗಿದೆ. ಜುಲೈ 19ರಂದು ಆರು ಸಿನಿಮಾಗಳು ತೆರೆಕಂಡಿದ್ದರೆ, ಇಂದು (ಜುಲೈ 26) ಆರು ಸಿನಿಮಾಗಳು ಬಿಡುಗಡೆಯಾಗುತ್ತಿವೆ. 

ಫ್ಯಾಮಿಲಿ ಡ್ರಾಮಾ: ಆಕರ್ಷ್‌ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ. ಡಾರ್ಕ್ ಕಾಮಿಡಿ ಜಾನರ್‌ನಲ್ಲಿರುವ ಈ ಸಿನಿಮಾ ಮುಗ್ಧ ಕುಟುಂಬವೊಂದು ಕೊಲೆ ಮಾಡಿ ಸಂಕಷ್ಟಕ್ಕೆ ಸಿಲುಕುವ ಕಥೆ ಹೊತ್ತಿದೆ. ಯುವ ಪ್ರತಿಭೆಗಳೇ ಸೇರಿಕೊಂಡು ಮಾಡಿರುವ ‘ಫ್ಯಾಮಿಲಿ ಡ್ರಾಮಾ’ದಲ್ಲಿ ಅಭಯ್, ಅನನ್ಯಾ ಅಮರ್, ಸಿಂಧು ಶ್ರೀನಿವಾಸಮೂರ್ತಿ, ರೇಖಾ, ಪೂರ್ಣಚಂದ್ರ ಮೈಸೂರು ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾಗೆ ಡಬ್ಬುಗುಡಿ ಮುರಳಿಕೃಷ್ಣ ಅವರು ತಮ್ಮ ಡಿಎಂಕೆ ಎಂಟರ್‌ಟೈನ್ಮೆಂಟ್‌ ಮೂಲಕ ಬಂಡವಾಳ ಹೂಡಿದ್ದಾರೆ. 

ಕೆಂಡ: ಸಹದೇವ್ ಕೆಲವಡಿ ನಿರ್ದೇಶನದ ಈ ಚಿತ್ರ ಭೂಗತ ಜಗತ್ತಿನ ಕಥೆ ಹೊತ್ತು ಬಂದಿದೆ. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಯುವಕನೋರ್ವ, ಪರಿಸ್ಥಿತಿಗಳ ಸುಳಿಗೆ ಸಿಕ್ಕಿ ಭೂಗತ ಜಗತ್ತಿನ ತೆಕ್ಕೆಗೆ ಬೀಳುವ ಕಥೆ ಇಲ್ಲಿದೆ ಎಂದಿದೆ ಚಿತ್ರತಂಡ. ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರ್‌ನಡಿ ರೂಪಾ ರಾವ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಬಿ.ವಿ.ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಷಿದಿ, ಶರತ್ ಗೌಡ, ಸತೀಶ್ ಕುಮಾರ್‌ ಸೇರಿದಂತೆ ದೊಡ್ಡ ತಾರಾಗಣವೇ ಇದೆ. 

ADVERTISEMENT

ರೂಪಾಂತರ: ಮಿಥಿಲೇಷ್‌ ಎಡವಲತ್‌ ನಿರ್ದೇಶಿಸಿರುವ ಈ ಸಿನಿಮಾ ನಾಲ್ಕು ಕಥೆಗಳ ಗುಚ್ಛ. ಈ ಕಥೆಗಳಲ್ಲಿನ ವ್ಯಕ್ತಿಗಳ ರೂಪಾಂತರಗೊಳ್ಳುವಿಕೆಯೇ ಸಿನಿಮಾದ ಕಥೆ. ಸಿನಿಮಾದಲ್ಲಿ ರಾಜ್ ಬಿ.ಶೆಟ್ಟಿ ನಟಿಸಿದ್ದು ಜೊತೆಗೆ ಸಂಭಾಷಣೆ ಹಾಗೂ ಹೆಚ್ಚುವರಿ ಚಿತ್ರಕಥೆ ಬರೆದಿದ್ದಾರೆ. ಸೋಮಶೇಖರ್ ಬೋಳೆಗಾಂವ್, ಲೇಖಾ ನಾಯ್ಡು, ಹನುಮ್ಮಕ್ಕ, ಭರತ್ ಜಿ.ಬಿ, ಅಂಜನ್ ಭಾರದ್ವಾಜ್‌ ಮತ್ತಿತರರು ತಾರಾಬಳಗದಲ್ಲಿದ್ದಾರೆ. ಮಿದುನ್‌ ಮುಕುಂದನ್‌ ಸಂಗೀತ, ಪ್ರವೀಣ್ ಶ್ರೀಯಾನ್ ಛಾಯಾಚಿತ್ರಗ್ರಹಣ, ಭುವನೇಶ್ ಮಣಿವಣ್ಣನ್ ಸಂಕಲನ ಚಿತ್ರಕ್ಕಿದೆ.

ರಕ್ತಾಕ್ಷ: ಮಾಡೆಲಿಂಗ್ ಲೋಕದಲ್ಲಿ ಹೆಸರು ಮಾಡಿರುವ ರೋಹಿತ್‌ ಈ ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿದ್ದಾರೆ. ನಾಯಕನಾಗಿ ನಟಿಸುವುದರ ಜೊತೆಗೆ ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ನಿರ್ಮಾಣ ಸಂಸ್ಥೆಯ ಮೂಲಕ ‘ರಕ್ತಾಕ್ಷ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವಾಸುದೇವ ಎಸ್. ಎನ್. ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಪ್ರಮೋದ್‌ ಶೆಟ್ಟಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ರೋಹಿತ್​ ರೀತಿಯಲ್ಲಿಯೇ ವಾಸುದೇವ್ ಅವರಿಗೂ ಇದು ಚೊಚ್ಚಲ ಸಿನಿಮಾ. ಆಕ್ಷನ್, ಥ್ರಿಲ್ಲರ್ ಜಾನರ್‌ನಲ್ಲಿ ಸಿನಿಮಾವಿದ್ದು, ಚಿತ್ರಕ್ಕೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ ಬರೆದಿದ್ದಾರೆ. ಧೀರೇಂದ್ರ ಡಾಸ್ ಸಂಗೀತ ಚಿತ್ರಕ್ಕಿದೆ. ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ನಿವೀಕ್ಷ ನಾಯ್ಡು, ಗುರುದೇವ ನಾಗರಾಜ, ಪ್ರಭು ಮುಂತಾದವರು ತಾರಾಬಳಗದಲ್ಲಿದ್ದಾರೆ. 

ಕುಬುಸ: ರಘುರಾಮ ಚರಣ್ ನಿರ್ದೇಶನದ ಈ ಚಿತ್ರ ಕುಂ.ವೀರಭದ್ರಪ್ಪ ಅವರ ಕಥೆ ಆಧರಿಸಿದೆ. ವಿ. ಶೋಭಾ ಸಿನಿಮಾಸ್ ಬ್ಯಾನರ್‌ನಡಿ ವಿ. ಶೋಭಾ ಆದಿನಾರಾಯಣ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆರ್. ಚಂದ್ರು ಅವರ ಜೊತೆ ಕೆಲಸ ಮಾಡಿದ ಅನುಭವವಿರುವ ರಘುರಾಮ ಚರಣ್ ಹೂವಿನಹಡಗಲಿ, ನಿರ್ದೇಶಕರಾದ ಟಿ.ಎಸ್. ನಾಗಾಭರಣ, ಪ್ರೇಮ್, ಸತ್ಯಪ್ರಕಾಶ್ ಜೊತೆ  ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇದು ಇವರ ಚೊಚ್ಚಲ ಚಿತ್ರ. ಸಿನಿಮಾದಲ್ಲಿ ‘ರಾಮ ರಾಮ ರೇ’ ಖ್ಯಾತಿಯ ನಟರಾಜ್ ಎಸ್. ಭಟ್, ಮಂಜು ಆರ್ಯ ಮೈಸೂರ್, ರಂಗಭೂಮಿ ಕಲಾವಿದೆ ಹನುಮಕ್ಕ, ಜೋಗತಿ ಮಂಜಮ್ಮ ಮುಂತಾದವರು ನಟಿಸಿದ್ದಾರೆ. 

ಸಾಂಕೇತ್‌: ಜ್ಯೋತ್ಸಾ ಕೆ.ರಾಜ್‌ ನಿರ್ದೇಶನದ ಈ ಸಿನಿಮಾದಲ್ಲಿ ಮೂಡಿಬಂದಿದ್ದು, ಚೈತ್ರಾ ಶೆಟ್ಟಿ, ವಿಕ್ಕಿ ರಾವ್‌ ಮುಖ್ಯಭೂಮಿಕೆಯಲ್ಲಿದ್ದಾರೆ. 

ಭರತ್ ಜಿ.ಬಿ
ಪೂರ್ಣಚಂದ್ರ ಮೈಸೂರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.