ADVERTISEMENT

ಬೆಳ್ಳಗಿದ್ದರಷ್ಟೇ ಸುಂದರಿ ಎಂದಲ್ಲ: ಶಾರುಕ್ ಪುತ್ರಿ ಸುಹಾನಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 11:33 IST
Last Updated 30 ಸೆಪ್ಟೆಂಬರ್ 2020, 11:33 IST
ಸುಹಾನಾ ಖಾನ್
ಸುಹಾನಾ ಖಾನ್    

ಚರ್ಮದ ಬಣ್ಣ ಹಾಗೂ ವರ್ಣಭೇದದ ಕುರಿತು ಬಾಲಿವುಡ್ ನಟ ಶಾರುಕ್‌ ಖಾನ್ ಪುತ್ರಿ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದ ಪೋಸ್ಟ್ ಈಗ ಹೆಚ್ಚು ಸದ್ದು ಮಾಡುತ್ತಿದೆ. ಸುಹಾನಾ ಖಾನ್ ಪೋಸ್ಟ್ ಎಲ್ಲರ ಗಮನ ಸೆಳೆದಿದ್ದಲ್ಲದೇ ಈ ವಿಷಯದ ಬಗ್ಗೆ ಜನರು ಚರ್ಚೆ ಮಾಡುವಂತೆ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ವರ್ಣಭೇದದ ಬಗ್ಗೆ ಚರ್ಚೆ ಆರಂಭಿಸಿದ ಶಾರುಕ್ ಪುತ್ರಿ ‘ನನ್ನ ಸ್ಕಿನ್‌ ಟೋನ್ ಕಾರಣದಿಂದ ನಾನು ಬಾಲ್ಯದಿಂದಲೂ ಅವಹೇಳನಕಾರಿ ಹಾಗೂ ನೋವಿನ ಮಾತುಗಳನ್ನು ಕೇಳುತ್ತಾ ಬಂದಿದ್ದೇನೆ’ ಎಂದಿದ್ದಾರೆ. ಅಲ್ಲದೇ ‘ಈ ವರ್ಣಭೇದ ಎಂಬುದು ಕೊನೆಗಾಣಬೇಕು’ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

‘ಈ ಜಗತ್ತಿನಲ್ಲಿ ಅನೇಕ ವಿಷಯಗಳು ನಡೆಯುತ್ತಿವೆ, ನಾವು ಸರಿಪಡಿಸಬೇಕಾದ ವಿಷಯಗಳಲ್ಲಿ ವರ್ಣಭೇದ ಕೂಡ ಒಂದು. ಇದು ಕೇವಲ ನನ್ನೊಬ್ಬಳ ಮಾತಲ್ಲ. ಕಾರಣವಿಲ್ಲದೇ ಹಿಂಜರಿಕೆ ಪಟ್ಟುಕೊಂಡು ಬೆಳೆಯುತ್ತಿರುವ ಪ್ರತಿಯೊಬ್ಬ ಯವಕ/ಯುವತಿಯರ ಕತೆ. ಕೆಲವರು ನನ್ನ ಬಣ್ಣದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ನಾನು 12 ವರ್ಷದ ಹುಡುಗಿ ಇದ್ದಾಗಿನಿಂದ ನಾನು ಕಪ್ಪು ಎಂಬ ಕಾರಣಕ್ಕೆ ಅನೇಕರಿಗೆ ಸುಂದರವಾಗಿ ಕಾಣಿಸಿರಲಿಲ್ಲ. ಆದರೆ ನಾವೆಲ್ಲರೂ ಭಾರತೀಯರು.ನಾವು ದೊಡ್ಡವರಾದಂತೆಲ್ಲಾ ನಮ್ಮ ಬಣ್ಣದ ಛಾಯೆ ಬದಲಾಗುತ್ತದೆ. ನಾವೆಲ್ಲರೂ ಬೇರೆ ಬೇರೆ ಬಣ್ಣವನ್ನು ಹೊಂದಿರಬಹುದು ನಿಜ. ಆದರೆ ಮೆಲನಿನ್‌ನಿಂದ ನಿಮ್ಮನ್ನು ನೀವು ದೂರವಿರಿಸಲು ಪ್ರಯತ್ನಪಟ್ಟರೆ ಖಂಡಿತ ಅದು ಸಾಧ್ಯವಾಗುವುದಿಲ್ಲ’ ಎಂದು ಸುಹಾನಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

‘ನಾವು ನಮ್ಮ ಸ್ವಂತದವರನ್ನೇ ದ್ವೇಷಿಸುತ್ತೇವೆ ಎಂದರೆ ನಮ್ಮಲ್ಲಿ ವ್ಯಕ್ತಪಡಿಸಲಾಗದ ಅಸುರಕ್ಷತೆಯ ಭಾವವಿದೆ ಎಂಬ ಅರ್ಥ. ಸಾಮಾಜಿಕ ಜಾಲತಾಣ, ವಿವಾಹ ಸಂಬಂಧ ಹುಡುಕುವ ಮ್ಯಾಚ್ ಮೇಕಿಂಗ್ ಸೈಟ್‌ಗಳು ಹಾಗೂ ನಮ್ಮ ಸಂಬಂಧಿಕರು ನಾವು ಎತ್ತರವಿಲ್ಲ, ಸುಂದರವಾಗಿಲ್ಲ ಎಂಬ ಕಾರಣಕ್ಕೆ ನಮ್ಮನ್ನು ಸಾಮಾಧಾನ ಪಡಿಸಲು ಪ್ರಯತ್ನ ಮಾಡುತ್ತಾರೆ. ನಾನು 5‘3, ಕಂದು ಬಣ್ಣ ಹೊಂದಿದ್ದೇನೆ. ಆದರೆ ನನಗೆ ಈ ಬಗ್ಗೆ ಖುಷಿ ಇದೆ. ನೀವು ಖುಷಿಯಿಂದ ಇರಿ. #endcolourism’ ಎಂದು ಬರೆದಿದ್ದಾರೆ.

ತಮ್ಮ ಪೋಸ್ಟ್‌ನೊಂದಿಗೆ ಆಕೆಯ ಬಣ್ಣ ಹಾಗೂ ನೋಟದ ಬಗ್ಗೆ ಕಮೆಂಟ್ ಬಂದಿರುವ ಕಮೆಂಟ್‌ಗಳ ಸ್ಕ್ರೀನ್ ಶಾಟ್‌ಗಳನ್ನು ಲಗತ್ತಿಸಿದ್ದಾರೆ.

ಅಲ್ಲದೇ ‘ನಾನು ಚರ್ಮವನ್ನು ಬೆಳ್ಳಗೆ ಮಾಡಿಕೊಳ್ಳಲು ಪ್ರಯತ್ನ ಮಾಡಿಲ್ಲ, ಮುಂದೆ ಕೂಡ ಮಾಡುವುದಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ ಸುಹಾನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.