ADVERTISEMENT

ಪ್ರಜ್ಞಾಸ್ಥಿತಿಗೆ‌ ಮರಳಿದ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 16:02 IST
Last Updated 26 ಆಗಸ್ಟ್ 2020, 16:02 IST
ಎಸ್‌.ಪಿ.ಬಿ
ಎಸ್‌.ಪಿ.ಬಿ   

'ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿರವಾಗಿದ್ದು, ಅವರು ಪ್ರಜ್ಞಾಸ್ಥಿತಿಗೆ ಮರಳಿದ್ದಾರೆ' ಎಂದು ಚೆನ್ನೈನ ಎಂಜಿಎಂ ಹೆಲ್ತ್ ಕೇರ್ ತಿಳಿಸಿದೆ. ಎಸ್ ಪಿಬಿ ಅವರ ಆರೋಗ್ಯದ ಚೇತರಿಕೆಗೆ ಪ್ರಾರ್ಥಿಸುತ್ತಿದ್ದ ಲಕ್ಷಾಂತರ ಅಭಿಮಾನಿಗಳಿಗೆ ಇದು ಖುಷಿ ತಂದಿದೆ.

'ಕೋವಿಡ್-19 ಸೋಂಕಿಗೆ ತುತ್ತಾಗಿರುವುದರಿಂದ ಅವರ ಶ್ವಾಸಕೋಶಕ್ಕೆ ಹಾನಿಯಾಗಿದೆ. ಆದರೆ, ಉಳಿದ ಅಂಗಾಂಗಗಳು ಉತ್ತಮವಾಗಿ ಕಾರ್ಯ‌ ನಿರ್ವಹಿಸುತ್ತಿವೆ. ಅವರ ಪುತ್ರ ಎಸ್.ಪಿ. ಚರಣ್ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಅವರೊಟ್ಟಿಗೆ ಮಾತನಾಡಲು ಎಸ್ ಪಿಬಿ ಕೈಸನ್ನೆಗಳ ಮೂಲಕ ಪ್ರಯತ್ನಿಸಿದರು. ಆದರೆ, ಅವರಿಗೆ‌ ಮಾತನಾಡಲು ಸಾಧ್ಯವಾಗುತ್ತಿಲ್ಲ. ಅವರು ಪ್ರಜ್ಞಾಸ್ಥಿತಿಯಲ್ಲಿದ್ದು ಎಚ್ಚರವಾಗಿಯೇ ಇದ್ದಾರೆ' ಎಂದು ಎಂಜಿಎಂ ಹೆಲ್ತ್ ಕೇರ್ ನ ನಿರ್ದೇಶಕ ಡಾ.ಪ್ರಶಾಂತ್ ರಾಜಗೋಪಾಲನ್ ತಿಳಿಸಿರುವುದಾಗಿ 'ದಿ‌ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ‌ಮಾಡಿದೆ.

ಇಸಿಎಂಒ ಸಾಧನ ಅಳವಡಿಕೆ

ADVERTISEMENT

ಕೋವಿಡ್-19ನಿಂದ‌ ಬಳಲುತ್ತಿರುವ ರೋಗಿಗಳಿಗೆ ಹೆಚ್ಚುವರಿ ಆಕ್ಸಿಜನ್ ಪೂರೈಸಲು ಇಸಿಎಂಒ ಸಾಧನ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತದೆ. ಇತ್ತೀಚೆಗೆ‌ ಕೋವಿಡ್ ನಿರ್ವಹಣೆಯಲ್ಲಿ ಈ ಸಾಧನ‌ ಬಳಕೆಯಾಗುತ್ತಿದೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೂ ವೆಂಟಿಲೇಟರ್ ಜೊತೆಗೆ ಈ ಸಾಧನವನ್ನೂ ಅಳವಡಿಸಲಾಗಿದೆ.

'ಇತ್ತೀಚೆಗೆ 40 ವರ್ಷದ ಕೋವಿಡ್ ಸೋಂಕಿತ ರೋಗಿಯೊಬ್ಬರು ದೆಹಲಿಯಿಂದ ನಮ್ಮ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಅವರಿಗೂ ಈ ಸಾಧನ ಅಳವಡಿಸಲಾಗಿದೆ. ಅವರ ಶ್ವಾಸಕೋಶ ತೀವ್ರವಾಗಿ ಹದಗೆಟ್ಟಿತ್ತು. ಇಸಿಎಂಒ ಸಾಧನ ಅಳವಡಿಸಿ 10 ದಿನಗಳು ಕಳೆದಿದ್ದು ಅವರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ‌ ಕಂಡುಬಂದಿದೆ' ಎಂದು ಡಾ.ಪ್ರಶಾಂತ್ ರಾಜಗೋಪಾಲನ್ ತಿಳಿಸಿದ್ದಾರೆ.
'ಆರಂಭದಲ್ಲಿ ಆ ರೋಗಿಗೆ ಶೇಕಡ 100ರಷ್ಟು ಆಕ್ಸಿಜನ್ ಅಗತ್ಯವಿತ್ತು. ಈಗ ಅವರಿಗೆ ಶೇಕಡ 30ರಷ್ಟು ಆಕ್ಸಿಜನ್ ಪೂರೈಸಲಾಗುತ್ತಿದೆ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.