ಫ್ರಾಂಕ್ ಬರ್ನಾಸ್
ಬೆಂಗಳೂರು: ‘ಕೆಲ ಚಿತ್ರಕಥೆಗಳನ್ನು ಎಷ್ಟೇ ಎಚ್ಚರಿಕೆಯಿಂದ ನಿರೂಪಿಸಿದರೂ ಅಪಾಯ ಇರುತ್ತದೆ. ಹಾಗಂತ ಸತ್ಯ ದರ್ಶನಕ್ಕೆ ಹಿಂಜರಿಯಬಾರದು’ ಎಂದು ಚಲನಚಿತ್ರ ನಿರ್ಮಾಪಕ ಫ್ರಾಂಕ್ ಬರ್ನಾಸ್ ಅಭಿಪ್ರಾಯಪಟ್ಟರು.
ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಸಂವಹನ ಮತ್ತು ಮಾಧ್ಯಮ ಅಧ್ಯಯನ ಶಾಲೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಕ್ಷ್ಯಚಿತ್ರ ನಿರ್ಮಾಪಕರು ಎದುರಿಸುವ ಸವಾಲುಗಳನ್ನು ವಿವರಿಸಿದರು.
‘ಸಾಕ್ಷ್ಯಚಿತ್ರಗಳ ಮೇಲೆ ಯಾವಾಗಲೂ ವಿರೋಧ ಇರುತ್ತದೆ. ಚಲನಚಿತ್ರ ನಿರ್ಮಾಪಕರು ಸೂತ್ರಗಳಿಂದ ದೂರ ಸರಿದು, ಸತ್ಯದ ಮೇಲೆ ಕೇಂದ್ರೀಕೃತರಾಗಬೇಕು. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಕಥೆಗಳನ್ನು ಹುಡುಕಿ, ಸಾಕ್ಷ್ಯಚಿತ್ರ ನಿರ್ಮಿಸಲು ಮುಂದಾಗಬೇಕು. ಸಾಕ್ಷ್ಯಚಿತ್ರಗಳು ದೊಡ್ಡ ಬಜೆಟ್ ಅಥವಾ ನಾಟಕೀಯ ವಿಷಯಗಳನ್ನು ಅವಲಂಬಿಸಿರುವುದಿಲ್ಲ. ಬದಲಾಗಿ, ವಿಷಯ ಸ್ಪಷ್ಟತೆಯನ್ನು ಬಯಸುತ್ತದೆ’ ಎಂದು ಹೇಳಿದರು.
ತಮ್ಮ ‘ಸೇವಿಂಗ್ ಮಿಷ್ಕಾ’ ಸಾಕ್ಷ್ಯಚಿತ್ರದ ಬಗ್ಗೆ ಮಾತನಾಡಿದ ಅವರು, ‘ಈ ಸಾಕ್ಷ್ಯಚಿತ್ರವು ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಯುದ್ಧ ಕಾಲದ ಸ್ಥಳಾಂತರಿಸುವಿಕೆ ವೇಳೆ ಉಕ್ರೇನ್ ಗಡಿಯಲ್ಲಿ ಬಿಟ್ಟುಹೋದ ಸಾಕು ಪ್ರಾಣಿಗಳನ್ನು ಸಾಕ್ಷ್ಯಚಿತ್ರ ಕೇಂದ್ರೀಕರಿಸುತ್ತದೆ. ಉಕ್ರೇನ್ ಜನರು ಓಡಿ ಹೋಗುವಾಗ ಗಡಿಯುದ್ದಕ್ಕೂ ನಾಯಿ ಮತ್ತು ಬೆಕ್ಕುಗಳನ್ನು ಬಿಟ್ಟು ಹೋಗಬೇಕಾಯಿತು’ ಎಂದು ಸ್ಮರಿಸಿಕೊಂಡರು.
ಸಂವಹನ ಮತ್ತು ಮಾಧ್ಯಮ ಅಧ್ಯಯನ ಶಾಲೆಯ ಡೀನ್ ಮೆಲ್ವಿನ್ ಪಿಂಟೊ, ವಿಭಾಗದ ಮುಖ್ಯಸ್ಥ ಮರುಧು ಪಾಂಡಿಯನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.