ಬೆಂಗಳೂರು: ರಾಘವೇಂದ್ರ ರಾಜಕುಮಾರ್ ಅಭಿನಯದ ‘ಸ್ತಬ್ದ’ ಚಿತ್ರದ ಮುಹೂರ್ತ ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯಿತು.
ಚಿತ್ರದ ಮೊದಲ ಸನ್ನಿವೇಶಕ್ಕೆ ಶಾಸಕ ರಾಮಲಿಂಗಾ ರೆಡ್ಡಿ ಅವರ ಪುತ್ರ ಶ್ರೀರಾಜ್ ಆರಂಭ ಫಲಕ ತೋರಿದರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಕ್ಯಾಮೆರಾ ಚಾಲನೆ ಮಾಡಿದರು.
ವೈದ್ಯರಾಗಿರುವ ಡಾ.ಡಿ.ವಿ.ವಿದ್ಯಾಸಾಗರ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಲಾಲಿರಾಘವ ನಿರ್ದೇಶಿಸುತ್ತಿದ್ದಾರೆ.
‘ತಮಿಳಿನಲ್ಲಿ ಒಂದು ಚಿತ್ರ ನಿರ್ದೇಶಿಸಿರುವ ನನಗೆ ಇದು ಎರಡನೇ ಚಿತ್ರ. ಈ ಚಿತ್ರವು, ಮನುಷ್ಯನ ಮನಸ್ಸು, ಸ್ಥಿಮಿತತೆ ಕಳೆದುಕೊಂಡು ಭ್ರಮಾಲೋಕಕ್ಕೆ ಪಯಣಿಸಿದಾಗ ಆಗುವಂತಹ ಪರಿಣಾಮಗಳನ್ನು ಮತ್ತು ಅದರಿಂದ ಹೊರಬರಲು ನಾಯಕ ನಡೆಸುವ ಹೋರಾಟವನ್ನು ಪ್ರತಿಬಿಂಬಿಸುತ್ತದೆ’ ಎಂದರು ಲಾಲಿ ರಾಘವ.
ಚಿತ್ರದಲ್ಲಿ ಉದಯೋನ್ಮುಖ ನಟ ಪ್ರತಾಪ್ ಸಿಂಹ ಅವರೊಂದಿಗೆ, ರಾಘವೇಂದ್ರ ರಾಜಕುಮಾರ್ ಮತ್ತು ಹರ್ಷಿಕಾ ಪೂಣಚ್ಚಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ಪ್ರಶಾಂತ್ ಸಿದ್ದಿ, ಶ್ರುತಿ ರಾಜ್, ಬೇಬಿ ಅಂಕಿತ, ಮಾ.ಚಿನ್ಮಯ್ ಮತ್ತು ಪ್ರಿಯಾಂಕಾರ ದೊಡ್ಡ ತಾರಾಬಳಗವೇ ಇದೆ.ಪಿ.ವಿ.ಆರ್. ಸ್ವಾಮಿ ಛಾಯಾಗ್ರಹಣ, ಹಂಸಲೇಖ ಅವರ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಆರವ್ ರಿಷಿಕ್ (ಹಂಸಲೇಖ) ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವಿರಲಿ’ ಎಂದರು ನಿರ್ದೇಶಕ ಲಾಲಿ ರಾಘವ್.
ನಾನು ಈಗಾಗಲೇ ರಾಘಣ್ಣ ಅವರೊಂದಿಗೆ ‘ರಾಜತಂತ್ರ’, ‘ರಾಜಿ’ ಚಿತ್ರಗಳಲ್ಲಿ ನಟಿಸಿದ್ದೇನೆ. ರಾಘಣ್ಣ ಅವರೊಟ್ಟಿಗೆ ಅಭಿನಯಿಸುವುದೇ ಒಂದು ಸುಂದರ ಅನುಭವ. ಉತ್ತಮ ಕಥೆಯುಳ್ಳ ಚಿತ್ರ ನಮ್ಮೆಲ್ಲರ ಬೆಂಬಲವಿರಲಿ ಎನ್ನುತ್ತಾರೆ ನಟ ಪ್ರತಾಪ್‌ಸಿಂಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.