ADVERTISEMENT

ನೀರಿನ ಬಿಂದ್ಗಿ...ಹಿಡ್ಕೊಂಡು ಬಂದ ಬೆಡಗಿ

ಶಶಿಕುಮಾರ್ ಸಿ.
Published 1 ಜನವರಿ 2019, 19:30 IST
Last Updated 1 ಜನವರಿ 2019, 19:30 IST
ಸುಪ್ರಿಯಾ ಲೋಹಿತ್
ಸುಪ್ರಿಯಾ ಲೋಹಿತ್   

ಹೆಸರಿಗೆ ತಕ್ಕಂತೆ ಬಲುಪ್ರಿಯವಾಗಿ, ಕಿವಿಗಿಂಪು ನೀಡುವಂತೆ ಹಾಡುವ ಗಾಯಕಿ ಸುಪ್ರಿಯಾ ಲೋಹಿತ್. ಸಂಗೀತ ಕ್ಷೇತ್ರದಲ್ಲಿ ಹೊಸತನಕ್ಕೆ ತುಡಿಯವ ವ್ಯಕ್ತಿತ್ವ ಅವರದ್ದು. ಆ ತುಡಿತದಿಂದಲೇ ಹುಟ್ಟಿದ ಹಾಡು ‘ನೀರಿನ ಬಿಂದ್ಗಿ...’. ಜನಪದ ಹಾಗೂ ಪಾಶ್ಚಿಮಾತ್ಯ ಸಂಗೀತದ ಮಿಶ್ರ ಹೂರಣದ ಈ ಹಾಡು ಯೂಟ್ಯೂಬ್‌ನಲ್ಲಿ ಈಗಾಗಲೇ ಸದ್ದು ಮಾಡುತ್ತಿದೆ.

ಡಿಸೆಂಬರ್ 29ರಂದು ಬಿಡುಗಡೆಗೊಂಡ ಸುಪ್ರಿಯಾ ಅವರ ಹೊಸ ಪ್ರಯೋಗಕ್ಕೆ ವೀಕ್ಷಕರು, ಸೆಲೆಬ್ರಿಟಿಗಳು, ಸಂಗೀತ ಹಾಗೂ ಚಿತ್ರರಂಗದ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

200ಕ್ಕೂ ಅಧಿಕ ಸಿನಿಮಾಗಳಿಗೆ ಕಂಠಸಿರಿ ನೀಡಿದ ಖ್ಯಾತಿ ಸುಪ್ರಿಯಾ ಅವರದ್ದು.ಚಮಕ್ ಸಿನಿಮಾದ ‘ನೀ ನನ್ನ ಒಲವು’, ರಥಾವರ ಸಿನಿಮಾದ ‘ನೀ ಮುದ್ದಾದ ಮಾಯಾವಿ’ ಹಾಗೂ ಸವಾರಿ –2 ಸಿನಿಮಾದ ‘ನಿನ್ನ ದನಿಗಾಗಿ’ ಹಾಡುಗಳು ಜನರ ಬಾಯಲ್ಲಿ ಗುನುಗುತ್ತಲೇ ಇವೆ.

ADVERTISEMENT

ತಮ್ಮ ಕಂಠಸಿರಿಯಲ್ಲಿ ಮೂಡಿಬಂದು, ಹಿಟ್ ಆದಂತಹ ಹಾಡುಗಳಿಗೆ ತಾನೇ ನರ್ತಿಸಿ ವಿಡಿಯೊ ಆಲ್ಬಂ ಹೊರತಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡುವುದು ಅವರ ಹವ್ಯಾಸ.ವರ್ಷದ ಹಿಂದೊಮ್ಮೆ ಮದ್ರಾಸ್‌ಗೆ ಹೋಗಿದ್ದಾಗ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ಅವರು, ‘ನಿಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಾಡುಗಳನ್ನು ನೋಡಿದ್ದೇನೆ. ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ. ಅದರ ಜೊತೆಗೆ, ಜನರಿಗೆ ಹೊಸ ಪ್ರಕಾರದ ಹಾಡನ್ನು ಪರಿಚಯಿಸಿ’ ಎಂದು ಸುಪ್ರಿಯಾ ಅವರಿಗೆ ಸಲಹೆ ನೀಡಿದ್ದರಂತೆ.

ಅವರ ಮಾತನ್ನು ಗಂಭೀರವಾಗಿ ಸ್ವೀಕರಿಸಿದ ಸುಪ್ರಿಯಾ, ಸಾಕಷ್ಟು ಪ್ರಯೋಗ ಮಾಡಿ ಜನಪದ ಹಾಡೊಂದಕ್ಕೆ ಪಾಶ್ಚಿಮಾತ್ಯ ಸಂಗೀತದ ಸ್ಪರ್ಶ ನೀಡಿ, ತಾವೇ ಸೊಗಸಾಗಿ ನೃತ್ಯ ಮಾಡಿದ್ದಾರೆ. 2 ನಿಮಿಷ 59 ಸೆಕೆಂಡ್‌ಗಳುಳ್ಳ ಈ ಹಾಡು ಅದ್ಧೂರಿಯಾಗಿಯೇ ಮೂಡಿಬಂದಿದ್ದು, ಅದಕ್ಕಾಗಿ ಬರೋಬ್ಬರಿ ₹ 10 ಲಕ್ಷ ಖರ್ಚು ಮಾಡಿದ್ದಾರಂತೆ.

‘ಫೆಬ್ರುವರಿಯಲ್ಲಿ ಹೊಸ ರೀತಿಯ ಹಾಡಿನ ಆಲ್ಬಂ ರೂಪಿಸಲು ಯೋಚಿಸಿದೆ. ಅಲ್ಲಿಂದ ಡಿಸೆಂಬರ್‌ ವರೆಗೆ ಸಾಕಷ್ಟು ಶ್ರಮ ಹಾಕಿದ್ದೇನೆ. ನಾನು ಅಂದುಕೊಂಡಂತೆ ಹಾಡು ಮೂಡಿ ಬರಲು ಹಲವು ಪ್ರಯೋಗ ಸಹ ಮಾಡಿದ್ದೇನೆ’ ಎನ್ನುತ್ತಾರೆ ಸುಪ್ರಿಯಾ.

‘ಸಂತೋಷ್ ನಾಯಕ್ ಅವರಿಂದ ಈ ಹಾಡನ್ನು ಬರೆಸಿದೆ. ನಾನು ಹಾಡಿದ ‘ನೀ’ ಇಂದ ಶುರುವಾಗುವ ಬಹುತೇಕ ಹಾಡುಗಳು ಹಿಟ್ ಆಗಿವೆ. ಹೀಗಾಗಿ, ಆ ಅಕ್ಷರ ನನ್ನ ಲಕ್ ಎಂದೇ ಭಾವಿಸಿರುವೆ. ಸಂತೋಷ್ ಅವರಿಗೂ ‘ನೀ’ ಹಾಡು ಶುರುವಾಗುವಂತೆ ಸಾಹಿತ್ಯ ಬರೆಯಲು ಮನವಿ ಮಾಡಿದ್ದೆ. ಅದರಂತೆ ಅವರು ಗ್ರಾಮೀಣ ಸೊಗಡಿನ ಹಾಡೊಂದನ್ನು ಅದ್ಭುತವಾಗಿ ಬರೆದುಕೊಟ್ಟಿದ್ದಾರೆ.’

‘ಆ ಹಾಡಿಗೆ ಮೊದಲು,ಬ್ಯಾಂಡ್ ಸಂಗೀತ ಸಂಯೋಜಿಸಿ ಪ್ರಯೋಗ ಮಾಡಿದ್ದೆವು. ಆದರೆ, ಅದನ್ನು ಕೇಳಿದಾಗ ಅಷ್ಟೊಂದು ಇಷ್ಟವಾಗಲಿಲ್ಲ. ಅದಾದ ಬಳಿಕ ಸಂಗೀತ ಸಂಯೋಜಕ ಜುಡಾ ಸ್ಯಾಂಡಿ ಜೊತೆಗೆ ಈ ಬಗ್ಗೆ ಚರ್ಚಿಸಿದೆ. ಎಲೆಕ್ಟ್ರಾನಿಕ್ ಡಾನ್ಸ್ ಮ್ಯೂಸಿಕ್ ಪ್ರಕಾರದಲ್ಲಿ ಹಾಡು ರಚಿಸುವಂತೆ ಸಲಹೆ ನೀಡಿದ್ದರು. ಅವರೊಟ್ಟಿಗೆ ಸೇರಿ ಈ ಹಾಡನ್ನು ರೂಪಿಸಿದೆ’ ಎನ್ನುತ್ತಾರೆ ಅವರು.

ಹಾಡಿಗೆ ಕಲಾನಿರ್ದೇಶಕರಾಗಿ ವಿಶ್ವಾಸ್ ಕೆಲಸ ಮಾಡಿದ್ದು, ನೃತ್ಯ ಸಂಯೋಜನೆಯನ್ನು ಸುಚಿನ್ ಮಾಡಿದ್ದಾರೆ. ಸುಪ್ರಿಯಾ ಅವರ ಈ ಹಾಡಿಗೆ 36,585 ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.