ADVERTISEMENT

ಮಿಲ್ಕಿ ಬ್ಯೂಟಿ ತಮನ್ನಾ ಐಟಂ ಹಾಡಿನ ಸಖ್ಯ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 6:53 IST
Last Updated 30 ಡಿಸೆಂಬರ್ 2019, 6:53 IST
   

ಐಟಂ ಸಾಂಗ್‌ ಎಂದರೆ ದೇಹಸಿರಿಯ ಪ್ರದರ್ಶನವಲ್ಲ; ಅದಕ್ಕೊಂದು ಲಾಲಿತ್ಯವಿದೆ ಎಂದು ನಂಬಿದ ಹಲವು ನಟಿಯರಿದ್ದಾರೆ. ಹಂಸದಂತೆ ನಡು ಬಳುಕಿಸುತ್ತಲೇ ಪ್ರೇಕ್ಷಕರ ಹೃದಯದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ.

ಒಂದು ಕಾಲದಲ್ಲಿ ಕನ್ನಡ ಸೇರಿದಂತೆ ಎಲ್ಲಾ ಭಾಷೆಯಲ್ಲೂ ಐಟಂ ಸಾಂಗ್‌ ಇಲ್ಲದ ಸಿನಿಮಾಗಳು ತೆರೆ ಕಾಣುತ್ತಿದ್ದುದು ವಿರಳ. ಬಿಗ್‌ಬಜೆಟ್‌ ಸಿನಿಮಾಗಳಲ್ಲಿ ಖಳನಟನ ಎಂಟ್ರಿಗೋ ಅಥವಾ ನಾಯಕ ಹೊಡೆದಾಟಕ್ಕೆ ಇಳಿಯುವುದಕ್ಕೂ ಮೊದಲು ಐಟಂ ಸಾಂಗ್‌ವೊಂದರನ್ನು ತುರುಕುವುದು ಸರ್ವೇ ಸಾಮಾನ್ಯ. ಇಂತಹ ಹಾಡುಗಳಲ್ಲಿ ಇತ್ತೀಚೆಗೆ ಜನಪ್ರಿಯ ನಟಿಯರೇ ಹೆಚ್ಚಾಗಿ ಸೊಂಟ ಬಳುಕಿಸುತ್ತಾರೆ. ಅವರು ಸುಖಾಸುಮ್ಮನೆ ಕುಣಿಯುವುದಿಲ್ಲ. ಕಲರ್‌ಫುಲ್‌ ಉಡುಪು ಧರಿಸಿ, ಮಾದಕವಾಗಿ ಕುಣಿದು ದುಬಾರಿ ಸಂಭಾವನೆಯನ್ನೂ ಕಿಸೆಗಿಳಿಸಿಕೊಳ್ಳುತ್ತಾರೆ.

ಬಿಗ್‌ಬಜೆಟ್‌ ಸಿನಿಮಾಗಳಲ್ಲಿ ಐಟಂ ಸಾಂಗ್‌ಗೆ ನಡು ಕುಣಿಸುವುದರಲ್ಲಿ ‘ಮಿಲ್ಕಿ ಬ್ಯೂಟಿ’ ತಮನ್ನಾ ಭಾಟಿಯಾ ಒಂದು ಹೆಜ್ಜೆ ಮುಂದಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಅವರು ಕಳೆದ ವರ್ಷ ತೆರೆಕಂಡ ಕನ್ನಡದ ‘ಕೆಜಿಎಫ್‌ ಚಾಪ್ಟರ್‌ 1’ ಚಿತ್ರದಲ್ಲಿ ‘ಜೋಕೆ ನಾನು ಬಳ್ಳಿಯ ಮಿಂಚು...’ ಹಾಡಿಗೂ ಸೊಂಟ ಕುಲುಕಿಸಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದರು. ಈ ಹಿಂದೆ ತಮನ್ನಾ ಜ್ಯೂನಿಯರ್‌ ಎನ್‌ಟಿಆರ್‌ ನಟನೆಯ ‘ಜೈ ಲವಕುಶ’ ಚಿತ್ರದಲ್ಲೂ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು.

ADVERTISEMENT

2014ರಲ್ಲಿ ತೆರೆಕಂಡ ತೆಲುಗಿನ ‘ಸೂಪರ್‌ ಸ್ಟಾರ್’ ಮಹೇಶ್‌ಬಾಬು ನಟನೆಯ ‘ಅಗಡು’ ಚಿತ್ರದಲ್ಲಿ ತಮನ್ನಾ ನಾಯಕಿಯಾಗಿ ನಟಿಸಿದ್ದರು. ಆ ನಂತರ ಮಹೇಶ್‌ಬಾಬು ನಟನೆಯ ಯಾವುದೇ ಚಿತ್ರದಲ್ಲಿ ಅವರು ನಟಿಸಿರಲಿಲ್ಲ. ಈಗ ‘ಸರಿಲೇರು ನೀಕೆವ್ವರು’ ಚಿತ್ರದಲ್ಲಿ ‘ಆಜ್ ಮೇರಾ ಘರ್ ಮೇ ಪಾರ್ಟಿ ಹೈ’ ಸಾಂಗ್‌ಗೆ ಅವರು ಕುಣಿದಿದ್ದಾರೆ. ಇದು ಖಳನಟನ ಎಂಟ್ರಿಯ ಐಟಂ ಸಾಂಗ್‌ ಅಂತೆ.

ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರದ ಆವಂತಿಕಾ ಪಾತ್ರದಲ್ಲಿನ ಮನೋಜ್ಞ ನಟನೆ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಈ ವರ್ಷದ ತೆರೆಕಂಡ ‘ಮೆಗಾಸ್ಟಾರ್‌’ ಚಿರಂಜೀವಿ ನಟನೆಯ ‘ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲೂ ಅವರು ಲಕ್ಷ್ಮಿಯಾಗಿ ಬಣ್ಣ ಹಚ್ಚಿದ್ದರು. ನೃತ್ಯದ ಮೂಲಕ ನರಸಿಂಹ ರೆಡ್ಡಿಯ ಹೋರಾಟಕ್ಕೆ ಸ್ಫೂರ್ತಿ ತುಂಬುವ ಪಾತ್ರವದು.

ತಮನ್ನಾ ದಕ್ಷಿಣ ಭಾರತದ ಶ್ರೇಷ್ಠ ನಟಿಯರ ಪೈಕಿ ಒಬ್ಬರು. ಅವರಿಗೆ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದಾರೆ. ಆದರೂ, ಯಾವುದೇ ಹಿಂಜರಿಕೆ ಇಲ್ಲದೆ ಐಟಂ ಸಾಂಗ್‌ನಲ್ಲಿ ಕುಣಿಯುವುದಕ್ಕೆ ಅವರು ಹಿಂದೆಮುಂದೆ ಯೋಚಿಸುವುದಿಲ್ಲ. ಆಕೆಯ ಮಾದಕ ನೋಟಕ್ಕೆ ಮರುಳಾಗದವರು ಕಡಿಮೆ. ಆದರೆ, ‘ಸರಿಲೇರು ನೀಕೆವ್ವರು’ ಚಿತ್ರದ ಹಾಡಿನಲ್ಲಿ ಅವರು ಗ್ಲಾಮರಸ್‌ ಆಗಿ ಹೆಜ್ಜೆ ಹಾಕಿಲ್ಲವಂತೆ. ಅನಿಲ್‌ ರವಿಪುಡಿ ನಿರ್ದೇಶನದ ಈ ಚಿತ್ರಕ್ಕೆ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿ. ದೇವಿಶ್ರೀಪ್ರಸಾದ್‌ ಸಂಗೀತ ಸಂಯೋಜಿಸಿದ್ದಾರೆ. ಜನವರಿ 11ರಂದು ಈ ಚಿತ್ರ ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.