ADVERTISEMENT

ಈ ಹೀರೊ ಜೊತೆ ಚುಂಬನಕ್ಕೆ ನಟಿ ತಮನ್ನಾಗೆ ಇಷ್ಟವಂತೆ!

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 11:32 IST
Last Updated 16 ನವೆಂಬರ್ 2019, 11:32 IST
   

‘ಚಂದ್‌ ಸಾ ರೋಶನ್‌ ಚೆಹ್ರಾ’ ಎಂಬ ಹಿಂದಿ ಚಿತ್ರ ತೆರೆಕಂಡಿದ್ದು 2005ರಲ್ಲಿ. ಇದು ನಟಿ ತಮನ್ನಾ ಭಾಟಿಯ ನಟನೆಯ ಮೊದಲ ಚಿತ್ರ. ಆಗ ಆಕೆಗೆ ಹದಿನೈದು ವರ್ಷ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತು. ಅದೇ ವರ್ಷ ತೆಲುಗಿನ ‘ಶ್ರೀ’ ಚಿತ್ರದಲ್ಲೂ ಆಕೆ ನಟಿಸಿದ್ದರು. ಇದನ್ನು ನಿರ್ದೇಶಿಸಿದ್ದು ದಶರಥ್‌. ಚಿತ್ರದಲ್ಲಿನ ತಮನ್ನಾ ನಟನೆಯು ಸಿನಿಪ್ರಿಯರ ಮನ ಸೆಳೆಯಿತು.

ಬಳಿಕ ಈ ‘ಮಿಲ್ಕಿ ಬ್ಯೂಟಿ’ ತೆಲುಗು, ತಮಿಳಿನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದರು. ಬಿಡುವು ಸಿಕ್ಕಿದಾಗಲೆಲ್ಲಾ ಬಿಟೌನ್‌ ಅಂಗಳಕ್ಕೂ ಜಿಗಿದು ಅಲ್ಲಿಯೂ ಸೊಂಟ ಬಳುಕಿಸಿದರು. ಹಾಗಾಗಿಯೇ, ಅವರು ಬಹುಬೇಗ ಅಭಿಮಾನಿಗಳ ಪಾಲಿಗೆ ಸೂಜಿಗಲ್ಲಾಗಿದ್ದು.

ನಿಖಿಲ್‌ ಕುಮಾರಸ್ವಾಮಿ ನಾಯಕರಾಗಿದ್ದ ‘ಜಾಗ್ವಾರ್‌’ ಚಿತ್ರದ ಮೂಲಕ ಕನ್ನಡಕ್ಕೂ ಕಾಲಿಟ್ಟರು. ಕಳೆದ ವರ್ಷ ತೆರೆಕಂಡ ಸೂಪರ್‌ ಹಿಟ್‌ ಚಿತ್ರ ‘ಕೆಜಿಎಫ್‌ ಚಾಪ್ಟರ್ 1’ರಲ್ಲೂ ರೆಟ್ರೊ ಶೈಲಿ ಹಾಡಿಗೆ ಹೆಜ್ಜೆ ಹಾಕಿ ಪಡ್ಡೆಗಳ ನಿದ್ದೆಗೆ ಭಂಗ ತಂದರು. ಕ್ಯಾಮೆರಾದ ಮುಂದೆ ಮಾದಕವಾಗಿ ಹೆಜ್ಜೆ ಹಾಕುವ ಈ ನಟಿ ತೆರೆಯ ಮೇಲೆ ‘ಚುಂಬನ’ದ ದೃಶ್ಯಗಳಿಗೆ ಮಾತ್ರ ಒಪ್ಪಿಗೆಯ ಮುದ್ರೆ ಒತ್ತುವುದಿಲ್ಲ. ಬಣ್ಣದ ಲೋಕಕ್ಕೆ ಕಾಲಿಟ್ಟ ಆರಂಭದಲ್ಲಿಯೇ ಕೈಗೊಂಡಿದ್ದ ಈ ಪ್ರತಿಜ್ಞೆಯನ್ನು ಇಂದಿಗೂ ಮುರಿದಿಲ್ಲ.

ADVERTISEMENT

ತಮನ್ನಾ ಬೆಳ್ಳಿತೆರೆ ಪ್ರವೇಶಿಸಿ ಒಂದು ದಶಕ ಉರುಳಿದೆ. ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರದ ಆವಂತಿಕಾ ಪಾತ್ರದ ಮನೋಜ್ಞ ನಟನೆಯು ಅವರನ್ನು ಪ್ರೇಕ್ಷಕರ ಹತ್ತಿರ ಮತ್ತಷ್ಟು ಕರೆದೊಯ್ದಿದ್ದು ಸುಳ್ಳಲ್ಲ.

ಪರದೆ ಮೇಲಿನ ಚುಂಬನದ ದೃಶ್ಯ ಕುರಿತು ಕೆಲವು ವರ್ಷದ ಹಿಂದೆ ಅವರು ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆ ಅಚ್ಚರಿ ಮೂಡಿಸಿತ್ತು. ‘ಎಂದಿಗೂ ನಾನು ಚುಂಬನದ ದೃಶ್ಯದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದು ನಾನು ನಿರ್ಮಾಪಕರಿಗೆ ಚಿತ್ರ ಒಪ್ಪಿಕೊಳ್ಳುವ ಮೊದಲು ವಿಧಿಸುವ ಷರತ್ತು. ಆದರೆ, ಬಾಲಿವುಡ್ ನಟ ಹೃತಿಕ್‌ ರೋಷನ್‌ಗಾಗಿ ಈ ಷರತ್ತು ಮುರಿಯಲು ಸಿದ್ಧಳಿದ್ದೇನೆ’ ಎಂದಿದ್ದರು ತಮನ್ನಾ. ಅವರ ಈ ಮಾತು ಅಭಿಮಾನಿಗಳಲ್ಲೂ ಕುತೂಹಲ ಮೂಡಿಸಿತ್ತು.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲೂ ತಮನ್ನಾ ಹಳೆಯ ಮಾತನ್ನೇ ಪುನರುಚ್ಚರಿಸಿದ್ದಾರೆ. ಆಕೆಯ ಷರತ್ತು ಕೇಳಿ ಅಭಿಮಾನಿಗಳು ಪುಳಕಿತರಾಗಿದ್ದಾರೆ. ‘ನಾನು ಬೆಳ್ಳಿತೆರೆ ಪ್ರವೇಶಿಸುವಾಗಲೇ ಲಿಪ್‌ಲಾಕ್‌ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಖಡಕ್ಕಾಗಿ ಹೇಳಿರುವೆ. ನನ್ನ ನಿರ್ಧಾರ ಅಚಲ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದಿದ್ದಾರೆ ತಮನ್ನಾ.

ಆದರೆ, ಎಲ್ಲಿಯೂ ಅವರುಹೃತಿಕ್‌ ರೋಷನ್‌ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ. ಹಳೆಯ ಷರತ್ತಿಗೆ ಅವರು ಈಗಲೂ ಬದ್ಧರಾಗಿದ್ದಾರಂತೆ. ಹಾಗಾಗಿ,ಹೃತಿಕ್‌ ಜೊತೆಗೆ ತೆರೆ ಹಂಚಿಕೊಂಡರೆ ಲಿಪ್‌ಲಾಕ್‌ ಗ್ಯಾರಂಟಿ. ಅಂತಹ ಅದೃಷ್ಟಹೃತಿಕ್‌ ಪಾಲಿಗೆ ಒಲಿಯಲಿದೆಯೇ? ಎಂಬ ಚರ್ಚೆಯು ಟಾಲಿವುಡ್‌ನ ಪಡಶಾಲೆಯಲ್ಲಿ ರಂಗೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.