ADVERTISEMENT

‘ಮಹಾಲಕ್ಷ್ಮಿ’ ತಮನ್ನಾ ಬಾರಮ್ಮ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 15:30 IST
Last Updated 20 ಫೆಬ್ರುವರಿ 2019, 15:30 IST
ತಮನ್ನಾ ಭಾಟಿಯಾ
ತಮನ್ನಾ ಭಾಟಿಯಾ   

ಬಹುಭಾಷಾ ನಟಿ ತಮನ್ನಾ ಭಾಟಿಯಾ ‘ಮಹಾಲಕ್ಷ್ಮಿ’ಯಾಗಿ ಮನೆಗೆ ಬರಲು ಸಜ್ಜಾಗಿದ್ದಾರೆ. ಕಂಗನಾ ರನೌತ್‌ ನಟನೆಯ ‘ಕ್ವೀನ್‌’ಹಿಂದಿ ಚಿತ್ರ ತೆಲುಗು ರಿಮೇಕ್‌ನಲ್ಲಿ ಈ ಸುಂದರಿ ಮಹಾಲಕ್ಷ್ಮಿಯಾಗಿ ನಟಿಸಲಿದ್ದಾರೆ.

‘ಕ್ವೀನ್‌’ ತೆಲುಗಿನಲ್ಲಿ ‘ದಟ್‌ ಈಸ್‌ ಮಹಾಲಕ್ಷ್ಮಿ’ ಎಂಬ ಶೀರ್ಷಿಕೆಯಲ್ಲಿ ತೆರೆಕಾಣಲಿದೆ. ಕಂಗನಾಗೆ ಬಹುದೊಡ್ಡ ಹೆಸರು ತಂದುಕೊಟ್ಟ ಚಿತ್ರ ‘ಕ್ವೀನ್‌’. ಹಾಗಾಗಿ ತೆಲುಗಿನ ‘ರಾಣಿ’ಯ ಮೇಲೆ ಕಾಲಿವುಡ್‌ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಇಷ್ಟೇ ಅಲ್ಲ, ‘ದಟ್‌ ಈಸ್‌ ಮಹಾಲಕ್ಷ್ಮಿ’ ತಮಿಳು ಮತ್ತು ಮಲಯಾಳಂನಲ್ಲೂ ತೆರೆ ಕಾಣಲಿರುವುದು, ತಮನ್ನಾ ಮೇಲೆ ದೊಡ್ಡ ಸವಾಲನ್ನೇ ಹೊರಿಸಿದೆ.

ಹಿಂದಿಯ ‘ಜಬ್‌ ವಿ ಮೆಟ್‌’ನ ತೆಲುಗು ರೀಮೇಕ್‌ನಲ್ಲಿ ಈಗಾಗಲೇ ನಟಿಸಿದ್ದರೂ ತಮನ್ನಾಗೆ ತಮ್ಮೊಳಗಿನ ಮಹಾ ರಾಣಿಯನ್ನು ಹೊರಗೆಳೆದು ಕ್ಯಾಮೆರಾ ಮುಂದೆ ನಿಲ್ಲಿಸುವ ಸವಾಲು ‘ದಟ್‌ ಈಸ್‌ ಮಹಾಲಕ್ಷ್ಮಿ’ ಯಲ್ಲಿದೆಯಂತೆ. ಆದರೂ ಒಂಟಿಯಾಗಿ ಪ್ರಯಾಣ, ಪ್ರವಾಸ ಮಾಡಿದವರಲ್ಲ ತಮನ್ನಾ. ಸ್ನೇಹಿತರೋ, ಕುಟುಂಬದ ಸದಸ್ಯರೋ ಇದ್ದರಷ್ಟೇ ಪ್ರವಾಸ ಹೋಗುತ್ತಾರೆ. ಮಹಾಲಕ್ಷ್ಮಿ ಪಾತ್ರದಲ್ಲಿ ಇದಕ್ಕೆ ತದ್ವಿರುದ್ಧವಾಗಿ ನಟಿಸಬೇಕಿದೆ. ಆದರೆ ಈ ಪಾತ್ರದ ಮೂಲಕ ತಾವು ಕಲಿಯುವುದು ಸಾಕಷ್ಟಿದೆ ಎನ್ನುತ್ತಾರೆ, ಈ ಬೆಳದಿಂಗಳ ಸುಂದರಿ.

ADVERTISEMENT

‘ಕ್ವೀನ್‌’ ತನ್ನ ಚಿತ್ರಕತೆ, ಕಂಗನಾ ರನೌತ್‌ ಮತ್ತು ಲಿಸಾ ಹೇಡನ್‌ ಅವರ ಅಮೋಘ ಅಭಿನಯದ ಮೂಲಕ ಗಮನ ಸೆಳೆದಿತ್ತು. ಮದುವೆಯ ಹಿಂದಿನ ದಿನ ವಿದೇಶಿ ಟೆಕ್ಕಿ ಮದುವೆ ಮುರಿದುಕೊಳ್ಳುತ್ತಾನೆ. ಇದರಿಂದ ವಿಚಲಿತಳಾದರೂ ನಾಯಕಿ, ಪ್ಯಾರಿಸ್‌ ಮತ್ತು ಆಮ್‌ಸ್ಟರ್‌ಡಾಮ್‌ಗೆ ನಿಗದಿಯಾಗಿದ್ದಮಧುಚಂದ್ರ ಪ್ರವಾಸಕ್ಕೆ ಒಂಟಿಯಾಗಿ ಹೊರಟುಬಿಡುತ್ತಾಳೆ. ಅವಳ ಏಕಾಂಗಿ ಪ್ರಯಾಣ, ಹೊಸ ನಗರದಲ್ಲಿ ಆಕೆ ಎದುರಿಸುವ ಸವಾಲು, ಸಮಸ್ಯೆಗಳು, ಸ್ವದೇಶಕ್ಕೆ ಮರಳಬೇಕಾದ ಪರಿಸ್ಥಿತಿ... ಹೀಗೆ ಪ್ರತಿ ನಡೆಯಲ್ಲೂ ಕಂಗನಾ ನಟನೆ ಅಸಾಮಾನ್ಯವಾಗಿತ್ತು.

ಪ್ರತಿ ಭಾರತೀಯ ಹೆಣ್ಣು ಮಗಳಲ್ಲೂ ಒಬ್ಬ ಕ್ವೀನ್‌ ಅಥವಾ ಮಹಾಲಕ್ಷ್ಮಿ ಇರುತ್ತಾಳೆ ಎಂದು ನಂಬುವ ತಮನ್ನಾ, ಮಹಾಲಕ್ಷ್ಮಿಯ ಪಾತ್ರಕ್ಕೆ ಹೇಗೆ ಜೀವ ತುಂಬುತ್ತಾರೆ ಎಂದು ಕಾದು ನೋಡಬೇಕಿದೆ. ಅಂದುಕೊಂಡಂತೆ ಆಗಿದ್ದಿದ್ದರೆ ‘ಮಹಾಲಕ್ಷ್ಮಿ’ 2014–15ರಲ್ಲೇ ತೆರೆಕಾಣಬೇಕಿತ್ತು. ಆರಂಭದಲ್ಲೇ ಹಲವು ವಿಘ್ನಗಳನ್ನು ಎದುರಿಸಿದ್ದ ಚಿತ್ರದ ಚಿತ್ರೀಕರಣ ಈಗ ಭರದಿಂದ ನಡೆದಿದೆ. ಪ್ರಶಾಂತ್‌ ವರ್ಮ ನಿರ್ದೇಶನದಲ್ಲಿ ಮನು ಕುಮಾರನ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.