ADVERTISEMENT

ವಿಜಯ್‌ಗೆ 45 ಫ್ಯಾನ್ಸ್‌ಗೆ ದೊಡ್ಡ ಗಿಫ್ಟ್‌ ‘ಬಿಗಿಲ್‌’

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 19:45 IST
Last Updated 24 ಜೂನ್ 2019, 19:45 IST
‘ಬಿಗಿಲ್‌’ ಪೋಸ್ಟರ್‌
‘ಬಿಗಿಲ್‌’ ಪೋಸ್ಟರ್‌   

ದುಂಡು ಮಾರಿ, ಕುರುಚಲು ಗಡ್ಡ, ಆಗಾಗ ಕ್ಲೀನ್‌ ಶೇವ್ಡ್‌ ಲುಕ್‌ನಲ್ಲಿ ಕನ್ಯೆಯರ ಕಂಗೆಡಿಸುವ ತಮಿಳು ಸ್ಟಾರ್‌ ವಿಜಯ್‌ಗೆ ಈಗ 45ರ ಹರೆಯ! ಹೇಗೆ ನೋಡಿದರೂ ವಯಸ್ಸು 45 ಅನ್ನಿಸುವುದೇ ಇಲ್ಲ. ಈಗಷ್ಟೇ ಚಿತ್ರರಂಗಕ್ಕೆ ಬಂದ 20ರ ತಾಜಾ ಹುಡುಗನನ್ನೂ ನಾಚಿಸುವಂಥ ಮೈಮಾಟ ವಿಜಯ್‌ ಅವರದ್ದು. ಹೀಗಾಗಿಯೇ ವಿಜಯ್‌ಗೆ ತಮಿಳು ಚಿತ್ರರಂಗದಲ್ಲಿ ದೊಡ್ಡ ಫ್ಯಾನ್‌ ಪಡೆ ಇದೆ.

ತಮ್ಮ 45ನೇ ಹುಟ್ಟು ಹಬ್ಬದ ನೆನಪಿಗೆ ಅಭಿಮಾನಿಗಳನ್ನು ಖುಷಿ ಪಡಿಸಲು ವಿಜಯ್‌ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಅದರ ಭಿನ್ನ ಪೋಸ್ಟರ್‌ ಒಂದನ್ನು ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸೀನಿಯರ್‌ ಮತ್ತು ಜ್ಯೂನಿಯರ್‌ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವಂತೆ ಕಾಣುವ ಈ ಪೋಸ್ಟರ್‌ ಅಭಿಮಾನಿಗಳಲ್ಲಿ ಭಾರಿ ಸಂಭ್ರಮ, ಖುಷಿ ಮೂಡಿಸಿದೆ. ಜೊತೆಗೆ ಸಿನಿಮಾದ ಟೈಟಲ್‌ ‘ಬಿಗಿಲ್‌’ ಸಾಕಷ್ಟು ಗೊಂದಲವನ್ನೂ ಮೂಡಿಸಿದೆ. ’ಬಿಗಿಲ್‌’ ಶೀರ್ಷಿಕೆಯ ಅರ್ಥ ಇಂಗ್ಲಿಷ್‌ನ ಬ್ಯುಗಲ್‌, ವ್ಹಿಸಲ್‌ (ಸೀಟಿ, ಸಿಳ್ಳೆ) ಎಂದರ್ಥವೇನೋ? ಬಹುಶಃ ಚೆನ್ನೈ ತಮಿಳು ಭಾಷೆಯಲ್ಲಿ ‘ಬಿಗಿಲ್‌’ ಎನ್ನುವುದು ಕ್ಯಾಚೀ ಎನ್ನುವಂಥ ಬಳಕೆ ಪದವಿರಬಹುದು. ಕ್ಯಾಚೀ ಅನ್ನುವ ಕಾರಣಕ್ಕೆ ಬಹುಶಃ ಟೈಟಲ್‌ ಆಗಿ ಹೊರಹೊಮ್ಮಿರಬಹುದು. ಈ ಹಿಂದೆ ಇದೇ ಚಿತ್ರಕ್ಕೆ ‘ತಲಪದಿ’ ಶೀರ್ಷಿಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದೀಗ ‘ಬಿಗಿಲ್‌’ ಶೀರ್ಷಿಕೆ ಪಕ್ಕಾ ಆಗಿದೆ. ಪೋಸ್ಟರ್‌ನಲ್ಲಿ ಜ್ಯೂನಿಯರ್‌ ವಿಜಯ್‌ ಫುಟ್‌ಬಾಲ್‌ ದಿರಿಸಿನಲ್ಲಿದ್ದರೆ ಸೀನಿಯರ್‌ ವಿಜಯ್‌ ಕಾಲ ಬುಡದಲ್ಲಿ ಒಂದು ಮಚ್ಚು (ಅರುವಾಲ್‌) ಇಟ್ಟುಕೊಂಡು ಗಂಭೀರವದನರಾಗಿ ಆಸೀನರಾದ ಚಿತ್ರವಿದೆ.

ಈ ಕುತೂಹಲಕಾರಿ ಪೋಸ್ಟರ್‌ ಅನ್ನು ಸ್ವತಃ ವಿಜಯ್‌ ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದು ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ ತಂದಿದೆ. ಈ ಚಿತ್ರವನ್ನು ಎಜಿಎಸ್‌ ಸಿನೆಮಾ ಬ್ಯಾನರ್‌ ಅಡಿ ಘೋಷಿಸಲಾಗಿತ್ತು. ಪ್ರೊಡಕ್ಷನ್‌ ಪರವಾಗಿ ಅರ್ಚನಾ ಕಲಪದಿ ಅವರು ಕೆಲವು ದಿನಗಳ ಹಿಂದೆ ಸಿನಿಮಾದ ಫಸ್ಟ್‌ ಲುಕ್‌ ಜೂನ್‌ 21ರಂದು ಮತ್ತು ಎರಡನೇ ಲುಕ್‌ ಸರಿಯಾಗಿ ಮಧ್ಯರಾತ್ರಿ 12 ಅಂದರೆ ಜೂನ್‌ 22ರಂದು ವಿಜಯ್‌ ಹುಟ್ಟಿದ ಹಬ್ಬದ ದಿನದಂದು ಬಹಿರಂಗಪಡಿಸುವುದಾಗಿ ಹೇಳಿದ್ದರು.

ADVERTISEMENT

ಅವರ ಟ್ವೀಟ್‌ ಹೀಗಿದೆ:

ಬಿಗಿಲ್‌ ಸಿನಿಮಾದಲ್ಲಿ ವಿಜಯ್‌ ಫುಟ್‌ಬಾಲ್‌ ಕೋಚ್‌ ಅವತಾರದಲ್ಲಿ ತೆರೆಯ ಮೇಲೆ ಮೂಡಿಬರಲಿದ್ದಾರೆ. ಅವರ ಜೊತೆ ನಯನತಾರಾ, ವಿವೇಕ್‌, ಯೋಗಿ ಬಾಬು ಮತ್ತು ರೊಬೊ ಶಂಕರ್‌ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಎ.ಆರ್‌. ರೆಹಮಾನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಡುಗಳನ್ನು ರೂಪಿಸಲು ತೀವ್ರ ಕಾತುರನಾಗಿದ್ದಾಗಿ ರೆಹಮಾನ್‌ ಹೇಳಿಕೊಂಡಿದ್ದಾರೆ. ಈ ಸಿನಿಮಾ, ಟ್ವಿಟರ್‌ನಲ್ಲಿ ವಿವಿಧ ಹ್ಯಾಶ್‌ಟ್ಯಾಗ್‌ ಅಡಿ ಸದ್ದು ಮಾಡಲಿದೆ. #ಬಿಗಿಲ್‌ ಮತ್ತು #ಹ್ಯಾಪಿ ಬರ್ತಡೇ ತಲಪದಿ ಇತ್ಯಾದಿ. ವಿಜಯ್‌ ಅವರನ್ನು ‘ತಲಪದಿ’ ಎಂದೇ ಅವರ ಅಭಿಮಾನಿಗಳು ಆದರಿಸುತ್ತಾರೆ. ‘ಬಿಗಿಲ್‌’ ಬರುವ ಅಕ್ಟೋಬರ್‌ 26ರಂದು ತೆರೆಗೆ ಬರಲಿದೆ.

* * *

ವಿಜಯ್‌ ಇದೀಗ ದಕ್ಷಿಣ ಭಾರತದ ಸೂಪರ್‌ ಸ್ಟಾರ್‌. ತಮ್ಮ ಹತ್ತನೇ ವಯಸ್ಸಿನಲ್ಲೇ ‘ವೆಟ್ರಿ’ (1984ರಲ್ಲಿ ತೆರೆಕಂಡಿದ್ದು) ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡಿದ ವಿಜಯ್‌ ಅತ್ಯಂತ ಯಶಸ್ವಿ ಸ್ಟಾರ್‌ ನಟನಾಗಿ ತಮಿಳು ಚಿತ್ರರಂಗದಲ್ಲಿ ಈಗಲೂ ಮಿಂಚುತ್ತಿದ್ದಾರೆ. ನಾಳೈಯ್‌ತೀರ್ಪು (1992), ಪೂವೇ ಉಣಕ್ಕಾಗ (1996), ತಮಿಳನ್‌ (2002), ವಸೀಗರ, ತಿರುಮಲೈ, ಕುರ್ವಿ, ನನ್ಬನ್‌, ಶಿವಕಾಶಿ, ಕಾದಲಕ್ಕ ಮರ್ಯಾದೈ, ವೇಲಾಯುದಂ, ತುಪಾಕಿ, ಮೆರ್ಸಲ್‌, ಗಿಲ್ಲಿ, ಸರ್ಕಾರ್‌, ತಿರುಪಾಕ್ಷಿ.. ಮತ್ತಿತರ ಹಲವಾರು ಭರ್ಜರಿ ಹಿಟ್‌ ಚಿತ್ರಗಳನ್ನು ನೀಡಿದ ವಿಜಯ್‌ ದಕ್ಷಿಣ ಭಾರತದ ಅತ್ಯಂತ ಬೇಡಿಕೆಯ ನಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.