ADVERTISEMENT

ಕೊಕೇನ್ ಖರೀದಿಸಿದ ಆರೋಪ: ಪೊಲೀಸರಿಂದ ತಮಿಳು ನಟ ಶ್ರೀಕಾಂತ್ ವಿಚಾರಣೆ

ಪಿಟಿಐ
Published 23 ಜೂನ್ 2025, 15:47 IST
Last Updated 23 ಜೂನ್ 2025, 15:47 IST
   

ಚೆನ್ನೈ: ಕೊಕೇನ್ ಖರೀದಿಸಿದ ಆರೋಪದ ಮೇಲೆ ತಮಿಳು ಚಲನಚಿತ್ರ ನಟ ಶ್ರೀಕಾಂತ್ ಅವರನ್ನು ಸೋಮವಾರ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾದಕ ದ್ರವ್ಯ ಬಳಕೆಯಲ್ಲಿ ಮತ್ತೊಬ್ಬ ನಟನ ಹೆಸರೂ ಕೇಳಿಬಂದಿದ್ದು, ಮಾದಕ ದ್ರವ್ಯ ಮಾರಾಟಗಾರರೊಂದಿಗಿನ ಸಂಪರ್ಕಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ಬಂಧಿಸಲ್ಪಟ್ಟ ಮಾದಕ ದ್ರವ್ಯ ಮಾರಾಟಗಾರನೊಬ್ಬ ನಟ ಶ್ರೀಕಾಂತ್‌ ಅವರಿಗೆ ಕೊಕೇನ್ ಮಾರಾಟ ಮಾಡಿದ್ದಾಗಿ ತಪ್ಪೊಪ್ಪಿಕೊಂಡ ನಂತರ ಪೊಲೀಸರು ಶ್ರೀಕಾಂತ್ ಅವರನ್ನು ವಿಚಾರಣೆ ನಡೆಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಮಾದಕ ದ್ರವ್ಯಗಳ ಸೇವನೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ನಟನ ರಕ್ತದ ಮಾದರಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಪೊಲೀಸರು ಇನ್ನಷ್ಟೇ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಬೇಕಿದೆ.

ಕಳೆದ ವಾರ, ನುಂಗಂಬಾಕ್ಕಂ ಪೊಲೀಸರು ಸೇಲಂನ ಪ್ರದೀಪ್ ಕುಮಾರ್ ಎಂಬಾತನನ್ನು ಬಂಧಿಸಿದ್ದರು. ಆತ ನೀಡಿದ ಮಾಹಿತಿಯ ಆಧಾರದ ಮೇಲೆ ಹೊಸೂರಿನ ಘಾನಾದ ಜಾನ್ ಎಂಬಾತನನ್ನು ಬಂಧಿಸಿದ್ದರು. ಆತನಿಂದ ಸುಮಾರು 11 ಗ್ರಾಂ ಕೊಕೇನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.