ಸೂಕ್ತವಾದ ನಿರ್ವಹಣೆ, ಸಿಬ್ಬಂದಿ ಇಲ್ಲದ ಪಾರಂಪರಿಕ ಸ್ಥಳಗಳಲ್ಲಿರುವ ಕಟ್ಟಡ, ಕಲ್ಲುಗಳು, ಮರಗಳಲ್ಲಿ ಪ್ರವಾಸಿಗರು ತಮ್ಮ ಹೆಸರುಗಳನ್ನು ಗೀಚುವುದು, ಗ್ರಫೀಟಿ ಬಿಡಿಸುವುದು ಸಾಮಾನ್ಯ ಎಂಬಂತಾಗಿದೆ. ಇಂತಹ ಸ್ಥಳಗಳ ರಕ್ಷಣೆ ಏಕೆ ಮುಖ್ಯ ಎನ್ನುವ ಕುರಿತ ಸಾಕ್ಷ್ಯಚಿತ್ರವೊಂದು ಆ.23ರಂದು ಆನ್‌ಲೈನ್ ಮೂಲಕ ಬಿಡುಗಡೆಯಾಗುತ್ತಿದೆ.
ಮೇಲುಕೋಟೆಯಲ್ಲಿರುವ ‘ಧನುಷ್ಕೋಟಿ’ಗೆ ಒಂದು ಕಥೆಯಿದೆ. ಶ್ರೀರಾಮ ವನವಾಸದ ದಿನಗಳಲ್ಲಿ ಸೀತೆ ನೀರು ಬೇಕೆಂದು ಕೇಳಿದಾಗ ಬಾಣ ಬಿಟ್ಟು ನೀರು ಬರುವಂತೆ ಮಾಡಿದ ಸ್ಥಳವನ್ನು ‘ಧನುಷ್ಕೋಟಿ’ ಎಂದು ಕರೆಯುತ್ತಾರೆ. ಇಲ್ಲಿದ್ದ ಕಲ್ಲುಗಳ ಮೇಲೆ ನೂರಾರು ಪ್ರವಾಸಿಗರು ಹೆಸರು ಬರೆದು ಆ ಸ್ಥಳದ ನೈಸರ್ಗಿಕ ಸೌಂದರ್ಯ ಕೆಡಿಸಿದ್ದರು. ಈ ಕಲ್ಲುಗಳನ್ನು ಸ್ವಚ್ಛಗೊಳಿಸಿ ಆ ಜಾಗದ ಪ್ರಾಮುಖ್ಯತೆ ಮತ್ತು ನೈಸರ್ಗಿಕ ಸೌಂದರ್ಯವನ್ನು ಕಾಪಾಡಲು ಸಜ್ಜಾಗಿದ್ದು ಮೊಹಮ್ಮದ್ ಸುಹೈಬ್, ರಷ್ಮಿ ಗೌರಿ, ಗೌತಮ್ ವಿ ಹಾಗೂ ಪ್ರಣವ್ ಜಿ.ಭಟ್ ನೇತೃತ್ವದ ‘ಅಫೆಕ್ಷನೇಟ್ ಹ್ಯಾಂಡ್ಸ್’, ಲಕ್ಷ್ಮೀಶ ಗೌಡ ಮತ್ತು ಸುರಭಿ ಮಂಜುನಾಥ್ ನೇತೃತ್ವದ ‘ಎಕ್ಸ್‌ಪ್ಲೋರ್ ನೇಷನ್’ ಹಾಗೂ ಮೇಲುಕೋಟೆ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಅವರ ‘ಪುಟ್ಟಣ್ಣಯ್ಯ ಫೌಂಡೇಶನ್’. ‘ಪ್ರಾಜೆಕ್ಟ್ ವಿರಾಸತ್’ನಡಿ ಸುಮಾರು 25 ಜನ ಐಟಿ ಉದ್ಯೋಗಿಗಳ ತಂಡವು ಜೊತೆಗೂಡಿ ಕಾಸ್ಟಿಕ್ ಸೋಡಾ ಬಳಸಿ ಕಲ್ಲುಗಳನ್ನು ಸಂಪೂರ್ಣ ಸ್ವಚ್ಛಗೊಳಿಸಿತು. ಈ ಕೆಲಸವನ್ನು ಚಿತ್ರೀಕರಿಸಿ ಅದಕ್ಕೆ ಸಾಕ್ಷ್ಯಚಿತ್ರದ ರೂಪ ನೀಡಿತು.
‘ರಶ್ಮಿ ಜೇಟ ಎನ್ನುವವರು ಈ 12 ನಿಮಿಷಗಳ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ. ಆ ಸ್ಥಳಕ್ಕೆ ಯಾವುದೇ ಚ್ಯುತಿ ಬರದಂತೆ ನಾವು ಆ ಕಲ್ಲನ್ನು ಸ್ವಚ್ಛಗೊಳಿಸಿದೆವು. ಧನುಷ್ಕೋಟಿಯಂತೆ ಗ್ರಫೀಟಿ ಇರುವ ಸ್ಥಳಗಳು ವಿಶ್ವದಾದ್ಯಂತ ಹಲವು ಇವೆ. ಇವುಗಳನ್ನು ನೋಡಿದಾಗ ಇದನ್ನು ಸ್ವಚ್ಛಗೊಳಿಸುವ ಜವಾಬ್ದಾರಿ ನಮ್ಮದಲ್ಲ ಎಂದುಕೊಳ್ಳುವವರೇ ಹೆಚ್ಚು. ಆದರೆ ಸಣ್ಣ ತಂಡವೊಂದು ದೊಡ್ಡ ಬದಲಾವಣೆಯನ್ನು ತರಲು ಸಾಧ್ಯ ಎನ್ನುವುದನ್ನು ನಾವು ಈ ಸಾಕ್ಷ್ಯಚಿತ್ರದಲ್ಲಿ ತೋರಿಸಿದ್ದೇವೆ. ಈಗಾಗಲೇ ಎರಡು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿಯನ್ನು ಈ ಸಾಕ್ಷ್ಯಚಿತ್ರ ಪಡೆದಿದೆ’ ಎಂದರು ‘ಅಫಕ್ಷನೇಟ್ ಹ್ಯಾಂಡ್ಸ್’ನ ಮೊಹಮ್ಮದ್ ಸುಹೈಬ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.