ADVERTISEMENT

ಜ.31ಕ್ಕೆ ‘ಲವ್ ಮಾಕ್‌ಟೆಲ್‌’ ಚಿತ್ರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 15:41 IST
Last Updated 23 ಜನವರಿ 2020, 15:41 IST
ಲವ್ ಮಾಕ್‌ಟೆಲ್
ಲವ್ ಮಾಕ್‌ಟೆಲ್   

ದಾವಣಗೆರೆ: ಮದರಂಗಿ, ಚಾರ್ಲಿ, ಹುಚ್ಚ–2 ಮುಂತಾದ ಚಿತ್ರಗಳ ನಾಯಕ ನಟ ಡಾರ್ಲಿಂಗ್ ಕೃಷ್ಣ ಇದೇ ಮೊದಲ ಬಾರಿಗೆ ನಿರ್ದೇಶಿಸಿರುವ ‘ಲವ್ ಮಾಕ್‌ಟೆಲ್’ ಚಿತ್ರ ಜ.31ರಂದು ರಾಜ್ಯದಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣ ‘ನನಗೆ ಜಾಕಿ ಹಾಗೂ ಹುಡುಗರು ಚಿತ್ರಗಳಲ್ಲಿ ಸಹ ನಿರ್ದೇಶನ ಮಾಡಿದ ಅನುಭವ ಇದ್ದು, ಒಂದು ವಾರದಲ್ಲೇ ಚಿತ್ರಕಥೆ ತಯಾರು ಮಾಡಿ, 20 ದಿನಗಳದಲ್ಲಿ ಶೂಟಿಂಗ್ ಆರಂಭಿಸಿದೆ. ನಮ್ಮದು ಚಿಕ್ಕ ತಂಡ. ಹಣ ಇಟ್ಟುಕೊಂಡು ಸಿನಿಮಾ ಮಾಡಲು ಸಾಧ್ಯವಿಲ್ಲ. ಉತ್ತಮ ಆಲೋಚನೆಯೂ ಇರಬೇಕು’ ಎಂದು ಹೇಳಿದರು.

‘ಈ ಚಿತ್ರಕ್ಕೆ ನಟ ಸುದೀಪ್ ಹಿನ್ನೆಲೆ ಧ್ವನಿ ನೀಡಿದ್ದಾರೆ. ಅಲ್ಲದೇ ಧ್ವನಿ ಸುರುಳಿ ಬಿಡುಗಡೆ ಮಾಡಿದ್ದು, ಚಿತ್ರವನ್ನು ವೀಕ್ಷಿಸಿ ಖುಷಿ ಪಟ್ಟಿದ್ದಾರೆ. ಮಾಡ್ರನ್ ಹಾಲು ಜೇನು ಸಿನಿಮಾ ಇದ್ದ ಹಾಗೆ ಎಂದು ಅವರು ಶ್ಲಾಘಿಸಿದ್ದಾರೆ. ನಾಯಕನ ಜೀವನದ ಹಲವು ಮಜಲುಗಳು ಹಾಗೂ ಪ್ರೀತಿಯ ಕಥೆಯನ್ನು ಇಲ್ಲಿ ಹೇಳಲಾಗಿದೆ’ ಎಂದರು.

ADVERTISEMENT

ಚಿತ್ರದ ನಿರ್ಮಾಪಕಿ ಹಾಗೂ ನಾಯಕಿ ಮಿಲನ ನಾಗರಾಜ್ ಮಾತನಾಡಿ, ‘ಮೈಸೂರು, ಬೆಂಗಳೂರು, ಉಡುಪಿ, ಮಂಗಳೂರು ಹಾಗೂ ಕಳಸ ಸುತ್ತಮುತ್ತ ಚಿತ್ರಿಸಲಾಗಿದ್ದು, ಇದೊಂದು ಸಂವೇದನಾಶೀಲ ಚಿತ್ರವಾಗಿದ್ದು, ಕುಟುಂಬ ಸಮೇತ ಈ ಚಿತ್ರ ವೀಕ್ಷಿಸಬಹುದು. ರಘು ದೀಕ್ಷಿತ್ ಸಂಗೀತ ನಿರ್ದೇಶನವಿದ್ದು, 5 ಹಾಡುಗಳಿವೆ. ಜ.27ಕ್ಕೆ ಮತ್ತೊಂದು ಥೀಮ್‌ ಸಾಂಗ್ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಹೇಳಿದರು.

ಚಿತ್ರದ ಮತ್ತೊಬ್ಬ ನಾಯಕಿ ಅಮೃತಾ ಅಯ್ಯಂಗಾರ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.