ADVERTISEMENT

ಗಿರೀಶ ಕಾಸರವಳ್ಳಿಯ ಚಿತ್ರಕ್ಕೆ ದಕ್ಕಿತು ಅಂತರರಾಷ್ಟ್ರೀಯ ಮನ್ನಣೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 3:57 IST
Last Updated 24 ಡಿಸೆಂಬರ್ 2020, 3:57 IST
Film director Girish Kasaravalli at his residence during an interview to Sudha in Bengaluru. -Photo/ M S MANJUNATHಗಿರೀಶ ಕಾಸರವಳ್ಳಿ
Film director Girish Kasaravalli at his residence during an interview to Sudha in Bengaluru. -Photo/ M S MANJUNATHಗಿರೀಶ ಕಾಸರವಳ್ಳಿ   

ಗಿರೀಶ ಕಾಸರವಳ್ಳಿ ನಿರ್ದೇಶಿಸಿ, ನಿರ್ಮಾಪಕ ಎಸ್.ವಿ. ಶಿವಕುಮಾರ್ ಸಂಗಮ ಫಿಲಂಸ್‌ ಲಾಂಛನದಲ್ಲಿ ನಿರ್ಮಿಸಿರುವ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಚಿತ್ರವು ರೋಮ್‌ನಲ್ಲಿ ನಡೆದ ಪ್ರತಿಷ್ಠಿತ ಏಷ್ಯಾಟಿಕಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಾತ್ಮಕ ವಿಭಾಗದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಭಾಜನವಾಗಿದೆ.

ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.

ಈ ಚಿತ್ರ ಜಯಂತ ಕಾಯ್ಕಿಣಿ ಅವರ ‘ಹಾಲಿನ ಮೀಸೆ’ ಕಥೆ ಆಧರಿಸಿದೆ. ಆ ಕಥೆಯಲ್ಲಿ ಬರುವ ಪಾತ್ರವೊಂದನ್ನು ಬೆಳೆಸಿ ಸಮಕಾಲೀನ ಸಾಮಾಜಿಕ ಜ್ವಲಂತ ಮತ್ತು ದ್ವಂದ್ವವನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ದಾಸ ಶ್ರೇಷ್ಠ ಪುರಂದರದಾಸರ ಹಾಡೊಂದರ ಶೀರ್ಷಿಕೆ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ಯನ್ನು ಚಿತ್ರದ ಶೀರ್ಷಿಕೆಯಾಗಿಸಲಾಗಿದೆ.

ADVERTISEMENT

ಬಾಲ್ಯದ ಹಳ್ಳಿಯ ವಾತಾವರಣ ತನ್ನ ಬೆಳವಣಿಗೆಗೆ ತೊಡಕಾಗಿದೆ ಎಂದು ಭಾವಿಸುವ ನಾಗರಾಜ ಸ್ಥಳಾಂತರವಾಗುವ ಕನಸು ಕಾಣುತ್ತಿರುತ್ತಾನೆ. ನಂತರ ದೊಡ್ಡವನಾಗಿ ನಗರ ಸೇರಿ ಗೃಹಸ್ಥನಾದ ನಾಗರಾಜ ಜೀವನದಲ್ಲಿ ಯಶಸ್ವಿಯಾಗುತ್ತಾ ಹೋದಂತೆ ಭವ ಜೀವನದ ಆಕರ್ಷಣೆ ಅವನನ್ನು ಬೇರೆಯೇ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಬಾಲ್ಯದಲ್ಲಿ ಅವನು ಅನುಭವಿಸಿದ ಅವಮಾನ, ನೋವು ಅವನ ಮನಸ್ಸನ್ನು ಹದಗೊಳಿಸಿತೇ? ಅಥವಾ ಅದು ಅವನನ್ನು ಅಸೂಕ್ಷ್ಮ ಮಾಡಿತೇ? ಸುಖ ಅರಸುತ್ತಾ ಹೋಗುವ ಈ ಕಾಲದ ನಮ್ಮ ಪಯಣ ಮನಶಾಂತಿಗೆ ಎರವಾಗುತ್ತಿದೆಯೇ ಎನ್ನುವುದನ್ನು ಈ ಚಿತ್ರತೆರೆದಿಡಲಿದೆ.

ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ ಇದರಲ್ಲಿದೆ. 60ರ ದಶಕದ ಕನಸು ಮತ್ತು ಈ ಕಾಲದ ಅಂದರೆ ಈ ಹೊಸ ಶತಮಾನದ ತಳಮಳ ಇವೆರೆಡೂ ಕಥಾನಾಯಕನ ಮನೋಗತಿಯನ್ನು ರೂಪಿಸುತ್ತಿರುವ ನೆಲೆಗಳು. ಕಾಲಘಟ್ಟ ಭಿನ್ನವಾದಂತೆ ಪರಿಸರವೂ ಬದಲಾಗುತ್ತದೆ. ಹಳ್ಳಿಯ ಪರಸರದಲ್ಲಿ ಬಾಲ್ಯ ಅನಾವರಣಗೊಂಡರೆ, ಬೆಂಗಳೂರಿನ ಮೆಟ್ರೋಪಾಲಿಟನ್ ಪರಿಸರ ಬೆಳೆದ ನಾಗರಾಜ ನೆಲೆಕಂಡ ತಾಣ. ಸ್ಥಳ ಬದಲಾಗಿದೆ. ಕಾಲ ಬದಲಾಗಿದೆ. ಆದರೆ ಮನುಷ್ಯನ ಹುಡುಕಾಟ ಅವಿರತ ಮುಂದುವರೆಯುತ್ತಲೇ ಇದೆ. ಹಾಗಿದ್ದರೆ ನಾಗರಾಜನ ಹುಡುಕಾಟ ಯಾವುದಕ್ಕಾಗಿ? ಹಳ್ಳಿ ಮತ್ತು ನಗರ, ರಮಣೀಯ ನಿಸರ್ಗದ ನಡುವಿನ ಜೀವನ ಮತ್ತು ನಗರದ ಯಾಂತ್ರೀಕೃತ ಜೀವನ ಶೈಲಿ, ಪರಕೇಂದ್ರಿತ ಬದುಕು ಮತ್ತು ಸ್ವಕೇಂದ್ರಿತ ಬದುಕು, ಈ ತರಹದ ದ್ವಂದ್ವಾತ್ಮಕ ಜೀವನವಿರುವ ನಮ್ಮ ಬದುಕು ಎತ್ತ ಸಾಗಿದೆ? ಇಂತಹ ಹತ್ತಾರು ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ಯಲ್ಲಿದೆ.

ತಾರಾಗಣದಲ್ಲಿ ದ್ರುಶಾ ಕೊಡಗು, ಆರಾಧ್ಯಾ, ಪ್ರವರ್ಥ ರಾಜು ಮತ್ತು ನಲ್ಮೆ, ಪವಿತ್ರಾ, ಮಾಲತೇಶ್, ಕೆ.ಜಿ. ಕೃಷ್ಣಮೂರ್ತಿ, ಚೆಸ್ವಾ, ರಶ್ಮಿ, ಬಿ.ಎಂ. ವೆಂಕಟೇಶ್, ಪುಷ್ಪಾ ರಾಘವೇಂದ್ರ, ಸುಜಾತ ಶೆಟ್ಟಿ ಇದ್ದಾರೆ.

ಛಾಯಾಗ್ರಹಣ ಎಚ್.ಎಂ.ರಾಮಚಂದ್ರ ಹಾಲ್ಕೆರೆ, ಸಂಗೀತ ಎಸ್.ಆರ್.ರಾಮಕೃಷ್ಣ, ಸಂಕಲನ ಎಸ್.ಗುಣ ಶೇಖರನ್, ಜಂಟಿ ನಿರ್ದೇಶನಅಪೂರ್ವ ಕಾಸರವಳ್ಳಿ, ವಸ್ತ್ರ ವಿನ್ಯಾಸ ಅನನ್ಯ ಕಾಸರವಳ್ಳಿ, ಸಹನಿರ್ದೇಶನಸಾವಂತ್, ಕಿರಣ್ ಕುಮಾರ್ ಹಾಗೂ ಯಶವಂತ ಯಾದವ್, ಕಲಾ ನಿರ್ದೇಶನಬಾಸುಮ ಕೊಡಗು, ಪ್ರಸಾಧನ ರಮೇಶ್ ಬಾಬು ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.