ADVERTISEMENT

‘ಟ್ರಂಕ್’ನಲ್ಲಿ ಪ್ರೇತ ಚೇಷ್ಟೆ

ಸಿನಿಮಾ ಬಿಡುಗಡೆಗೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 26 ಜೂನ್ 2018, 7:21 IST
Last Updated 26 ಜೂನ್ 2018, 7:21 IST
ರಿಷಿಕಾ ಶರ್ಮ
ರಿಷಿಕಾ ಶರ್ಮ   

‘ನನ್ನ ಸುತ್ತಲೂ ಮೂವತ್ತೈದು ಹುಡುಗರಿದ್ದರು. ನಾನು ಕೆಲಸ ಹೇಳಿದ್ರೆ ಎಲ್ಲರೂ ನಗುತ್ತಿದ್ದರು. ಇವಳ ಮಾತನ್ನು ನಾವು ಕೇಳಬೇಕೆ ಎನ್ನುತ್ತಿದ್ದರು. ಈಗ ಮೇಡಂ ಯಾವಾಗ ಮತ್ತೊಂದು ಸಿನಿಮಾ ಮಾಡೋಣ ಎನ್ನುತ್ತಿದ್ದಾರೆ’ ಎಂದು ಹಿಂಬದಿ ಸಾಲಿನಲ್ಲಿ ನಿಂತಿದ್ದ ತಂತ್ರಜ್ಞರತ್ತ ವಾರೆನೋಟ ಬೀರಿದರು ಜಿ.ವಿ. ಅಯ್ಯರ್‌ ಅವರ ಮೊಮ್ಮಗಳಾದ ನಿರ್ದೇಶಕಿ ರಿಷಿಕಾ ಶರ್ಮ. ಆಗ ನಗುವ ಸರದಿ ಎಲ್ಲರದಾಗಿತ್ತು.

ಉತ್ತರ ಕರ್ನಾಟಕದ ಮನೆಯೊಂದರಲ್ಲಿ ನಡೆದ ನೈಜ ಘಟನೆ ಆಧರಿಸಿ ರಿಷಿಕಾ ನಿರ್ದೇಶಿಸಿರುವ ‘ಟ್ರಂಕ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡದೊಂದಿಗೆ ಅವರು ಸುದ್ದಿಗೋಷ್ಠಿಗೆ ಸಜ್ಜಾಗಿ ಬಂದಿದ್ದರು.

ಹಾಲಿವುಡ್‌ನ ‘ಕಾಂಜುರಿಂಗ್’ ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ಗೋಸ್ಟ್‌ ಹಂಟರ್‌ಗಳು ಕೆಲಸ ಮಾಡಿದ್ದಾರೆ. ಮೊದಲ ಬಾರಿಗೆ ಕನ್ನಡದಲ್ಲಿ ಇಂತಹ ಪ್ರಯತ್ನ ಮಾಡಲಾಗಿದೆ. ಉತ್ತರ ಕರ್ನಾಟಕದ ಗೋಸ್ಟ್‌ ಹಂಟರ್‌ಗಳು ಇದರಲ್ಲಿ ಕೆಲಸ ಮಾಡಿದ್ದಾರೆ. ಅಕಾಲಿಕ ಮರಣ ಹೊಂದಿದರೆ ಅತೃಪ್ತ ಆತ್ಮಗಳು ಹುಟ್ಟಿಕೊಳ್ಳುತ್ತವೆ ಎಂಬ ನಂಬಿಕೆ ಇದೆ. ಅದು ನಿಜವೋ ಅಥವಾ ಸುಳ್ಳೋ ಎನ್ನುವುದನ್ನು ಚಿತ್ರದಲ್ಲಿ ವೈಜ್ಞಾನಿಕ ತಳಹದಿ ಮೇಲೆ ಹೇಳಲು ಹೊರಟಿದ್ದಾರೆ ರಿಷಿಕಾ.

ADVERTISEMENT

‘ಹೊಸಬರ ತಂಡ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಇದಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕು’ ಎಂದು ಕೋರಿದರು ರಿಷಿಕಾ.

ಚಿತ್ರದಲ್ಲಿ ಬೆಳಕಿನ ಸಂಯೋಜನೆ ಮಹತ್ವದ್ದಾಗಿದೆ. ಇದಕ್ಕೆ ನಿರ್ದೇಶಕಿಯ ತಂದೆ ವೆಂಕಟೇಶ್‌ ಕೊಡುಗೆ ದೊಡ್ಡದು. ಚಿತ್ರದಲ್ಲಿ ಟ್ರಂಕ್‌ ಪ್ರಮುಖ ಪಾತ್ರವಹಿಸುತ್ತದೆಯಂತೆ. ಹಾಗಾಗಿ, ಅದರ ಸುತ್ತವೇ ಕಥೆ ಸಾಗಲಿದೆ ಎನ್ನುವುದು ಚಿತ್ರತಂಡದ ವಿವರಣೆ.

ಇದು ಹಾರರ್‌ ಚಿತ್ರ. ಹಾಲಿವುಡ್‌ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಆಲ್ಬಿನ್‌ ಡೊಮಿನಿಕ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

ನಟಿ ಸ್ವಾತಿ, ‘ನನ್ನದು ಟಾಮ್‌ಬಾಯ್‌ ತರದ ವ್ಯಕ್ತಿತ್ವ. ಗೋಸ್ಟ್‌ ಹಂಟರ್‌ ಪಾತ್ರ ನಿರ್ವಹಿಸಲು ಹರಸಾಹಸಪಡಬೇಕಾಯಿತು’ ಎಂದಷ್ಟೇ ಹೇಳಿದರು.

ರಾಜೇಶ್‌ ಭಟ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದ ನಾಲ್ಕು ಹಾಡುಗಳಿಗೆ ಕಾರ್ತಿಕ್‌, ಪ್ರದೀಪ್‌, ಗಣೇಶನ್‌ ಸಂಗೀತ ಸಂಯೋಜಿಸಿದ್ದಾರೆ. ಭಜರಂಗ್‌ ಕೊನಥಮ್‌ ಮತ್ತು ಸಂದೀಪ್‌ ಅಲುರಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಇದೇ ವೇಳೆ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಾಯಿತು. ನಟ ಕಿಶೋರ್‌ ನಿರೂಪಕರಾಗಿ ಟ್ರಂಕ್‌ನ ಒಂದು ಭಾಗವಾಗಿದ್ದಾರೆ. ನಿಹಾಲ್‌, ವೈಶಾಲಿ ದೀಪಕ್‌, ಸುಂದರಶ್ರೀ, ಅರುಣಾ ಬಾಲರಾಜ್‌ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.