ADVERTISEMENT

ತ್ರಯಂಬಕಂ: ಅಪ್ಪ, ಮಗಳ ಬಾಂಧವ್ಯ ಕಥಾನಕ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 13:52 IST
Last Updated 8 ಏಪ್ರಿಲ್ 2019, 13:52 IST
ದಯಾಳ್‌ ಪದ್ಮನಾಭನ್
ದಯಾಳ್‌ ಪದ್ಮನಾಭನ್   

‘ಹಗ್ಗದ ಕೊನೆ’, ‘ಆ ಕರಾಳ ರಾತ್ರಿ’ಯಂತಹ ಪರ್ಯಾಯ ಸಿನಿಮಾ ಮಾಡಿ ಗೆದ್ದಿದ್ದರು ನಿರ್ದೇಶಕ ದಯಾಳ್ ಪದ್ಮನಾಭನ್‌. ಈಗ ‘ತ್ರಯಂಬಕಂ’ ಸಿನಿಮಾ ಮೂಲಕ ಕ್ಲಾಸಿಕ್‌ ಕಮರ್ಷಿಯಲ್‌ ಜಾಡಿಗೆ ಹೊರಳಿದ್ದಾರೆ. ಅವರು ನಿರ್ದೇಶಿಸಿದ ಹಿಂದಿನ ಚಿತ್ರಗಳಿಗೆ ಒಂದು ಸೀಮಿತ ಚೌಕಟ್ಟಿತ್ತು. ಈ ಚಿತ್ರದಲ್ಲಿ ಫ್ಯಾಂಟಸಿ ಮತ್ತು ರಿಯಾಲಿಟಿ ಮಧ್ಯೆ ಥ್ರಿಲ್ಲರ್‌ ಕಥೆ ಹೇಳಲು ಹೊರಟಿದ್ದಾರೆ. ಇದರಲ್ಲಿ ಅಪ್ಪ ಮತ್ತು ಮಗಳ ಬಾಂಧವ್ಯದ ಕಥನವೂ ಇದೆ.

ಚಿತ್ರ ಇದೇ 19ರಂದು ಬಿಡುಗಡೆಯಾಗುತ್ತಿದ್ದು, ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.

‘ಐದು ಸಾವಿರ ವರ್ಷಗಳ ಹಿಂದೆಯೇ ನವಪಾಷಾಣ ಔಷಧಿ ಚಾಲ್ತಿಯಲ್ಲಿತ್ತು. ಇದಕ್ಕೆ ಎಲ್ಲಾ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ. ಇದು ಆಧುನಿಕ ಯುಗದಲ್ಲಿ ಬಂದಾಗ ಏನೆಲ್ಲಾ ಸಂಭವಿಸುತ್ತದೆ ಎನ್ನುವುದೇ ಚಿತ್ರದ ಕಥಾಹಂದರ. ಸಿನಿಮಾದಲ್ಲಿ ಸಿದ್ಧಪುರುಷರ ಬಗ್ಗೆಯೂ ಹೇಳಿದ್ದೇವೆ’ ಎಂದರು ದಯಾಳ್. ಅಂದಹಾಗೆ ವಂಡರ್‌ಫುಲ್‌ ಥ್ರಿಲ್ಲರ್‌ ಜೊತೆಗೆ ಭಾವನಾತ್ಮಕ ಸನ್ನಿವೇಶಗಳೂ ಇವೆಯಂತೆ.

ADVERTISEMENT

‘ಆ ಕರಾಳ ರಾತ್ರಿ ಚಿತ್ರದ ವೇಳೆಯೇ ಈ ಸಿನಿಮಾ ನಿರ್ದೇಶಿಸುವ ಕನಸು ಹುಟ್ಟಿತು. ಅದು ಈಗ ಈಡೇರಿದೆ. ರಾಘಣ್ಣ, ಅನು‍‍ಪಮಾ ಗೌಡ ಮತ್ತು ರೋಹಿತ್‌ ಪಾತ್ರಗಳು ಚೆನ್ನಾಗಿ ಮೂಡಿಬಂದಿವೆ’ ಎಂದರು.

‘ಚಿತ್ರದ ಟ್ರೇಲರ್‌ನಲ್ಲಿ ನಾನು ಭ್ರಮೆಯೋ ಅಥವಾ ನಿಜವೋ ಎಂದು ಹೇಳುತ್ತೇನೆ. ಇಂದಿಗೂ ನಾನು ಭ್ರಮೆಯಲ್ಲಿಯೇ ಇದ್ದೇನೆ. ಸಿನಿಮಾದಲ್ಲಿ ನಾನು ನಟಿಸಲು ಸಾಧ್ಯವೇ ಎಂದು ಪ್ರಶ್ನಿಸಿಕೊಳ್ಳುತ್ತೇನೆ. ಇದು ರಾಘಣ್ಣನ ಸಿನಿಮಾವಲ್ಲ. ದಯಾಳ್‌ ಸಿನಿಮಾದಲ್ಲಿ ರಾಘಣ್ಣ ಇದ್ದಾರೆ’ ಎಂದು ಅರ್ಥಗರ್ಭಿತವಾಗಿ ಹೇಳಿದರು ನಟ ರಾಘವೇಂದ್ರ ರಾಜ್‌ಕುಮಾರ್.

ನಾಯಕಿ ಅನುಪಮಾ ಗೌಡ ಅವರು ರಾಘಣ್ಣ ಅವರ‍ಪುತ್ರಿಯಾಗಿ ಬಣ್ಣ ಹಚ್ಚಿದ್ದಾರೆ. ‘ರಾಘಣ್ಣ ಅವರೊಟ್ಟಿಗೆ ನಟಿಸುವಾಗ ಮೊದಲು ನನಗೆ ಭಯವಾಗುತ್ತಿತ್ತು’ ಎಂದರು.

ಆ ಕರಾಳ ರಾತ್ರಿ ಸಿನಿಮಾಗಿಂತಲೂ ಇದರಲ್ಲಿ ನಟಿಸುವುದು ಅವರಿಗೆ ಸವಾಲಾಗಿತ್ತಂತೆ. ‘ಈ ಸಿನಿಮಾದ ಸ್ಕ್ರಿಪ್ಟ್‌ ಬೇರೆಯದೆ ಆಗಿದೆ. ಉದ್ದನೆಯ ಡೈಲಾಗ್‌ಗಳು ಇದ್ದ ಪರಿಣಾಮ ಕಷ್ಟವಾಗಿತ್ತು’ ಎಂದು ಹೇಳಿಕೊಂಡರು.

ನಾಯಕ ಆರ್‌ಜೆ ರೋಹಿತ್ ಅವರದು ಡಿಟೆಕ್ಟಿವ್‌ ಪಾತ್ರವಂತೆ. ‘ಪತ್ತೆದಾರಿ ಮಾಡುವುದು ನನ್ನ ಕೆಲಸ. ಉಳಿದಂತೆ ಅನುಪಮಾ ಅವರ ಹಿಂದೆ ತಿರುಗಾಡುವುದೇ ನನ್ನ ಡ್ಯೂಟಿ’ ಎಂದು ನಕ್ಕರು.

ನಿರ್ದೇಶಕ ಶಿವಮಣಿ, ಕಾರ್ಯಕಾರಿ ನಿರ್ಮಾಪಕ ಅವಿನಾಶ್ ಶೆಟ್ಟಿ, ನವೀನ್‌ ಕೃಷ್ಣ, ಶ್ರುತಿ ನಾಯಕ್‌ ಅನುಭವ ಹಂಚಿಕೊಂಡರು. ಆರ್‌.ಎಸ್. ಗಣೇಶ್‌ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ. ಬಿ. ರಾಕೇಶ್‌ ಅವರ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.