ADVERTISEMENT

ಸಿನಿಮಾ ಬಿಡುಗಡೆ ಮುಂದೂಡಿಕೆ: ಶೀಘ್ರವೇ ಒಟಿಟಿಯಲ್ಲಿ 'ಪೆಪ್ಪೆರೆರೆ ಪೆರೆರೆರೆ'

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 10:57 IST
Last Updated 16 ಡಿಸೆಂಬರ್ 2020, 10:57 IST

ಮಂಗಳೂರು: ಪೆಪ್ಪೆರೆರೆ ಪೆರೆರೆರೆ ಸಿನಿಮಾವನ್ನು ಒಟಿಟಿ ಮೂಲಕ ವಿಶ್ವದಾದ್ಯಂತ ಇರುವ ತುಳುವರಿಗೆ ಏಕಕಾಲದಲ್ಲಿ ತೋರಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು , ಸಿನಿಮಾ ಬಿಡುಗಡೆಯ ದಿನಾಂಕವನ್ನು ಮುಂದೂಡುತ್ತಿದ್ದೇವೆ . ಇದಕ್ಕೆ ತುಳು ಸಿನಿಪ್ರಿಯರು ಸಹಕಾರ ನೀಡಬೇಕು ಎಂದು ಸಿನಿಮಾ ನಿರ್ದೇಶಕ ಶೋಭರಾಜ್ ಪಾವೂರು ಮನವಿ ಮಾಡಿದರು.

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಿನಿಮಾದ ಟಿಕೆಟ್ ತೆಗೆದುಕೊಂಡು, ಹಣ ಪಾವತಿಸಿದವರಿಗೆ ಪ್ರತಿ ಮಾಹಿತಿಯನ್ನು ಕಳುಹಿಸುತ್ತಿದ್ದೇವೆ. ಟಿಕೆಟ್ ಖರೀದಿಸಿದವರಿಗೆ ಒಟಿಟಿ ಮೂಲಕ ಲಿಂಕ್ ಮತ್ತು ಒಟಿಪಿ ಕಳುಹಿಸಿ, ಸಿನಿಮಾ ತೋರಿಸುವ ಯೋಜನೆ ನಮ್ಮದಾಗಿದೆ ಎಂದರು.

ಮಾರಾಟಕ್ಕಾಗಿ ನಮ್ಮಿಂದ ಸಿನಿಮಾದ ಟಿಕೆಟ್ ಕೊಂಡೊಯ್ದ ಕೆಲವರು, ಪ್ರೇಕ್ಷಕರಿಗೆ ಟಿಕೆಟ್ ಮಾರಾಟ ಮಾಡಿದ್ದರೂ, ಆ ಹಣವನ್ನು ಚಿತ್ರತಂಡಕ್ಕೆ ತಲುಪಿಸದಿರುವ ಪರಿಣಾಮ ಅಂತವರ ಹೆಸರು ಇನ್ನೂ ನಮ್ಮಲ್ಲಿ ನೋಂದಣಿ ಆಗಿಲ್ಲ. ಇಂತಹ ಮೂರನೇ ವ್ಯಕ್ತಿಗಳಿಂದ ತುಂಬಾ ಜನ ಟಿಕೆಟ್ ಖರೀದಿಸಿದ್ದು, ಆದರೆ ಅದರಲ್ಲಿ ಕೆಲವರಿಗೆ ಸಿನಿಮಾ ತಂಡ ರವಾನಿಸಿದ ಮೆಸ್ಸೇಜುಗಳು ತಲುಪಿರುವುದಿಲ್ಲ. ಅವರ ಕಡೆಯಿಂದ ಚಿತ್ರ ತಂಡಕ್ಕೆ ಫೋನ್ ಕರೆಗಳು ಬಂದಿವೆ. ಟಿಕೆಟ್ ಖರೀದಿಸಿದವರಿಗೆ ನ್ಯಾಯ ಒದಗಿಸುವ ಸಲುವಾಗಿ ಎಲ್ಲರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ. ಈ ಎಲ್ಲಾ ಕಾರಣಗಳಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದೇವೆ ಎಂದು ವಿವರಿಸಿದರು.

ADVERTISEMENT

ಸಿನಿಮಾ ಸ್ಟ್ರೀಮಿಂಗ್ ಮಾಡುವ ವಿಚಾರದಲ್ಲಿ ಒಂದು ಪ್ರತಿಷ್ಠಿತ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೆವು. ಆದರೆ ಒಪ್ಪಿಕೊಂಡ ಸಂಸ್ಥೆಯಿಂದಲೂ, ಚಿತ್ರತಂಡದಿಂದಲೂ ನಿಗದಿತ ಗುರಿ ತಲುಪಲು ಅಸಾಧ್ಯವಾಗಿದ್ದು , ನಮ್ಮದೇ ನಿಶಾನ್ ವರುಣ್ ಮೂವೀಸ್ ಸಂಸ್ಥೆಯ ಮೂಲಕವೇ ಸ್ಟ್ರೀಮಿಂಗ್ ಮಾಡುವ ನಿರ್ಧಾರಕ್ಕೆ ಬರಬೇಕಾಯಿತು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.