ADVERTISEMENT

‘ಕನ್ನೇರಿ’ಗೆ ಹನ್ನೆರಡು ಚಿತ್ರೋತ್ಸವಗಳ ಬೆನ್ನುಡಿ

ಕೆ.ಎಂ.ಸಂತೋಷಕುಮಾರ್
Published 23 ಡಿಸೆಂಬರ್ 2020, 8:47 IST
Last Updated 23 ಡಿಸೆಂಬರ್ 2020, 8:47 IST
ಕನ್ನೇರಿ ಚಿತ್ರದಲ್ಲಿ ಅರ್ಚನಾ ಮಧುಸೂದನ್‌
ಕನ್ನೇರಿ ಚಿತ್ರದಲ್ಲಿ ಅರ್ಚನಾ ಮಧುಸೂದನ್‌   

ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಸಿನಿಮಾ ಪರಿಣತರ ಗಮನ ಸೆಳೆಯುತ್ತಿರುವ ‘ಕನ್ನೇರಿ’ ಚಿತ್ರವು ಚಿತ್ರಮಂದಿರಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಬರುವ ಜನವರಿಯ ಸಂಕ್ರಾಂತಿಯ ವೇಳೆಗೆ ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದು ಚಿತ್ರ ತಂಡದ ಯೋಜನೆ.

ಕ್ಷೀರಸಾಗರ ಅವರ ‘ಜೇನು: ಆಕಾಶದ ಅರಮನೆ’ ಕಾದಂಬರಿ ಮತ್ತು ಕೋಟಿಗಾನಹಳ್ಳಿ ರಾಮಯ್ಯ ಅವರು ರಚಿಸಿದ ಕಥೆಯನ್ನು ಆಧರಿಸಿದ ಈ ಚಿತ್ರಕ್ಕೆ ನಿರ್ದೇಶಕ ನೀನಾಸಂ ಮಂಜು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಮಂಜು ಚಿತ್ರಕಥೆಯ ಜತೆಗೆ ಕಲಾನಿರ್ದೇಶನ ಕೂಡ ನಿಭಾಯಿಸಿದ್ದಾರೆ. ಕೋಟಿಗಾನಹಳ್ಳಿ ರಾಮಯ್ಯ ಈ ಚಿತ್ರಕ್ಕೆ ಸಾಹಿತ್ಯ ಮತ್ತು ಸಂಭಾಷಣೆಯನ್ನೂ ರಚಿಸಿದ್ದಾರೆ.

ಕೊಡಗಿನಲ್ಲಿ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟವನ್ನೇ ಕೇಂದ್ರವಾಗಿಸಿಕೊಂಡಿರುವ ಈ ಚಿತ್ರ ಬುಡಕಟ್ಟು ಜನರು ಬದುಕಿನಲ್ಲಿ ಎದುರಿಸುತ್ತಿರುವ ತಲ್ಲಣಗಳನ್ನು ತೆರೆದಿಡಲಿದೆ. 2 ಗಂಟೆ 3 ನಿಮಿಷ ಅವಧಿಯ ಈ ಚಿತ್ರದ ಚಿತ್ರೀಕರಣ ಸಾಗರ, ಕೊಡಗು, ಎಚ್‌.ಡಿ.ಕೋಟೆ, ಬೆಂಗಳೂರು, ಕೋಲಾರದಲ್ಲಿ 42 ದಿನಗಳ ಕಾಲ ನಡೆದಿದೆ.

ADVERTISEMENT

ಪ್ರಕೃತಿಯ ಮಡಿಲಿನಲ್ಲಿ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಜನರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸಿದ್ದರಿಂದ ಅವರ ಬದುಕು ಸಂಕಷ್ಟಕ್ಕೆ ಸಿಲುಕಿತು. ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳು ಪಟ್ಟಣದಲ್ಲಿ ಮನೆಗೆಲಸಕ್ಕೆ ಸೇರಿ ಅಲ್ಲಿಯೂ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಈ ರೀತಿ ಪಟ್ಟಣಕ್ಕೆ ಬಂದ ಬುಡಕಟ್ಟು ಜನಾಂಗದ ಬಾಲಕಿ ಮುತ್ತಮ್ಮ ಯಾನೆ ‘ಕನ್ನೇರಿ’ ಮನೆಗೆಲಸ ಮಾಡುವಾಗ ಮನೆಯ ಮಾಲೀಕಳ ದೌರ್ಜನ್ಯಕ್ಕೆ ತುತ್ತಾಗಿ ಜೈಲು ಸೇರುತ್ತಾಳೆ. ಆಕೆ ಜೈಲಿನಿಂದ ಹೊರಬರಲು ನಡೆಸುವ ಹೋರಾಟದ ಕಥಾಹಂದರವನ್ನು ‘ಕನ್ನೇರಿ’ ಎಳೆಎಳೆಯಾಗಿ ಬಿಚ್ಚಿಡಲಿದೆ ಎನ್ನುತ್ತಾರೆ ನಿರ್ದೇಶಕ ನೀನಾಸಂ ಮಂಜು.

ಕೋಲ್ಕತ್ತಾದಲ್ಲಿ ನಡೆದ ಟ್ಯಾಗೋರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಕನ್ನೇರಿ’ ಚಿತ್ರ ‘ಔಟ್‌ ಸ್ಟ್ಯಾಂಡಿಂಗ್‌ ಅಚೀವ್‌ಮೆಂಟ್‌’ ಅವಾರ್ಡ್‌ ಪಡೆದುಕೊಂಡಿದೆ. ಇನ್ನು ಅಮೆರಿಕ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ನಡೆಯುತ್ತಿರುವ 11 ಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶನವಾಗುತ್ತಿದೆ. ರಾಷ್ಟ್ರಮಟ್ಟ ಮತ್ತು ರಾಜ್ಯಮಟ್ಟದ ಪ್ರಶಸ್ತಿಗೂ ಈ ಚಿತ್ರವನ್ನು ಕಳುಹಿಸಿದ್ದೇವೆ ಎನ್ನುತ್ತಾರೆ ಅವರು.

ಮುಖ್ಯ ಪಾತ್ರದಲ್ಲಿ ಅರ್ಚನಾ ಮದುಸೂಧನ್‌, ವಿಲನ್‌ ಪಾತ್ರದಲ್ಲಿ ಅನಿತಾ ಭಟ್‌, ಪ್ರಮುಖ ಪಾತ್ರದಲ್ಲಿನೇಹಲ್‌ ಹಾಲೇಕಾಯ್‌, ವಕೀಲರಾಗಿಅರುಣ್‌ ಸಾಗರ್‌, ಮಧ್ಯವರ್ತಿ ಪಾತ್ರದಲ್ಲಿ ಕರಿಸುಬ್ಬು, ಇನ್ಸ್‌ಪೆಕ್ಟರ್‌ ಪಾತ್ರದಲ್ಲಿ ಸರ್ದಾರ್‌ ಸತ್ಯ, ಅಜ್ಜನ ಪಾತ್ರದಲ್ಲಿ ಎಂ.ಕೆ. ಮಠ್‌, ನ್ಯಾಯಾಧೀಶರ ಪಾತ್ರದಲ್ಲಿ ಸಿದ್ದರಾಜ್‌ ಕಲ್ಯಾಣಕರ್‌ ನಟಿಸಿದ್ದಾರೆ. ಛಾಯಾಗ್ರಹಣ ಗಣೇಶ್ ಹೆಗಡೆ, ಸಂಗೀತ ಕದ್ರಿ ಮಣಿಕಾಂತ್, ಸಂಕಲನ ಸಚಿನ್‌ ನಾಯಕ್‌ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.