ADVERTISEMENT

ಉಡುಂಬಾ 23ಕ್ಕೆ ತೆರೆಗೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 19:30 IST
Last Updated 22 ಆಗಸ್ಟ್ 2019, 19:30 IST
ಚಿರಶ್ರೀ ಅಂಚನ್‌
ಚಿರಶ್ರೀ ಅಂಚನ್‌   

ಶ್ರೀ ಚಂದ್ರ ಪ್ರೊಡಕ್ಷನ್ಸ್‌ನಡಿ ನಿರ್ಮಿಸಿರುವ, ಶಿವರಾಜ್ ನಿರ್ದೇಶನದ `ಉಡುಂಬಾ' ಇದೇ 23ರಂದುತೆರೆಗೆ ಬರಲಿದೆ.ಈಗಾಗಲೇ ಬಿಡುಗಡೆಯಾಗಿರುವ ಉಡುಂಬಾ ಸಿನಿಮಾದ ಟ್ರೇಲರ್, ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿಕುತೂಹಲ ಹುಟ್ಟಿಸಿದೆ.

ತೆಲುಗಿನ ಹಲವು ನಿರ್ದೇಶಕರ ಬಳಿ ಕೆಲಸ ಮಾಡಿರುವ ಅನುಭವಿ ಶಿವರಾಜ್‌, ಈ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಗೆ ಹಾಜರಾಗಿದ್ದರು.

ಸಿನಿಮಾದ ಕಥೆ ಹುಟ್ಟಿಕೊಂಡಿದ್ದರ ಹಿಂದೊಂದು ಸೋಜಿಗದ ಕಥೆಯಿರುವುದಾಗಿ ನೆನಪಿಸಿಕೊಳ್ಳುವ ನಿರ್ದೇಶಕರು,‘ತೆಲುಗು ಚಿತ್ರವೊಂದರ ಚಿತ್ರೀಕರಣಕ್ಕಾಗಿ ಒಡಿಶಾಗೆ ಹೋಗಿದ್ದೆ.ಚಿತ್ರೀಕರಣದ ಬಿಡುವಿನ ವೇಳೆ ಸಮುದ್ರದ ದಡದಲ್ಲಿ ಸ್ನೇಹಿತರೊಂದಿಗೆ ವಿಹಾರ ನಡೆಸುವಾಗ, ಅಲ್ಲಿನ ವಾತಾವರಣವೇ ನೂರೆಂಟು ಕಥೆಗಳನ್ನು ಹೇಳುತ್ತಿರುವಂತೆ ಭಾಸವಾಯಿತು. ಬೆಸ್ತರ ಗುಡಿಸಲುಗಳು, ಹಿಂದೆ ಅಳೆಯಲು ಅಸಾಧ್ಯವಾದ ಸಾಗರ, ಹಿಡಿದು ತಂದ ಮೀನುಗಳನ್ನುಗುಡಿಸಲುಗಳ ಮುಂದೆ ನೇತುಹಾಕಿದ್ದ ರೀತಿ, ಮೀನು ಮಾರುತ್ತಾ ಬದುಕು ಸಾಗಿಸುವ ಬೆಸ್ತರ ಕುಟುಂಬಗಳು, ವಾರಗಟ್ಟಲೇ ಸಮುದ್ರದಲ್ಲಿದ್ದು, ಬಲೆ ಹಾಕಿ ತಂದ ಮೀನನ್ನು ಪಡೆದುಕೊಳ್ಳಲು ನಿಂತ ಒಬ್ಬ ಯಜಮಾನ, ಮೀನಿನ ವ್ಯಾಪಾರಕ್ಕೊಂದು ಮಾರುಕಟ್ಟೆ...ಹೀಗೆ ಪ್ರತಿಯೊಂದು ಸಂಗತಿಗಳು ಮನಸಿನಲ್ಲಿ ಕಥೆ ಮೂಡಿಸಿದವು’ ಎಂದರು.

ADVERTISEMENT

ಒಮ್ಮೆ ಮೀನಿನ ಶಿಕಾರಿಗೆ ಸಮುದ್ರಕ್ಕಿಳಿದರೆಂದರೆ ಬೆಸ್ತರು ಮತ್ತೆ ಭೂಮಿಗೆ ವಾಪಸಾಗುತ್ತಾರೆನ್ನುವುದಕ್ಕೆ ಯಾವ ಗ್ಯಾರೆಂಟಿಯೂ ಇಲ್ಲ. ದೋಣಿಗಳಿಗೆ ಎದುರಾಗಿ ಬರುವ ರಾಕ್ಷಸ ಅಲೆಗಳು, ಆಪೋಷನ ತೆಗೆದುಕೊಳ್ಳಲು ಬಾಯ್ತೆರೆದು ಬರುವ ನರಭಕ್ಷಕ ತಿಮಿಂಗಿಲಗಳು, ಶಾರ್ಕ್‌ಗಳು, ಗೊತ್ತೂ ಗುರಿಯಿಲ್ಲದೆ ಶುರುವಾಗುವ ಮಳೆ… ಇವೆಲ್ಲದರ ನಡುವೆಯೂ ಮೀನು ಹಿಡಿದು ತಂದರಷ್ಟೇ ಬೆಸ್ತರ ಬದುಕಿನ ದೋಣಿ ಮುನ್ನಡೆಯೋದು. ಇಂಥ ಪರಿಸರದಲ್ಲಿ ಹುಂಬ ಹುಡುಗನೊಬ್ಬ ಇದ್ದರೆ ಹೇಗೆ? ಅವನ ಮನಸ್ಸಿನಲ್ಲೂ ಪ್ರೀತಿ ಚಿಗುರೊಡೆದರೆ ಏನಾಗಬಹುದು? ಬಯಸಿದ್ದನ್ನು ಪಡೆಯಲು ಈ ಹುಂಬ ಹುಡುಗ ಶಕ್ತಿಶಾಲಿ ಉಡದ ಅವತಾರವೆತ್ತಿಬರಬಹುದಲ್ಲವಾ? ಎಂಬೆಲ್ಲಾ ಕಲ್ಪನೆಗಳು ತೆರೆ ಮೇಲೆ ಬಂದರೆ ಹೇಗಿರಬಹುದು? ಈವರೆಗೂ ಇಷ್ಟು ಆಳವಾಗಿ ಯಾರೂ ಮುಟ್ಟದ ಕಥಾವಸ್ತುವೊಂದನ್ನು ಸಿದ್ಧಪಡಿಸಿರುವ ಖುಷಿ ಇದೆ ಎನ್ನುತ್ತಾರೆ ಶಿವರಾಜ್‌.

ಇದು ನನಗೆ ಮೂರನೇ ಸಿನಿಮಾ ಎನ್ನುತ್ತಾ ಮಾತಿಗೆ ಇಳಿದ ನಾಯಕ ನಟ ಪವನ್‌ ಶೌರ್ಯ,ಶಂಕರನಾಗ್ ನಿರ್ದೇಶನದ ಒಂದು ಮುತ್ತಿನ ಕಥೆ ಸಿನಿಮಾದಲ್ಲಿ ಅಣ್ಞಾವ್ರು ಮಾಡಿರುವ ಪಾತ್ರದಂತೆಯೇ ನನ್ನ ಪಾತ್ರವೂ ಇದೆ. ಅಣ್ಣಾವ್ರ ನಂತರ ಅಷ್ಟೊಂದು ಇನ್ವಾಲ್‌ಮೆಂಟ್‌ ಇರುವಂತಹ ಪಾತ್ರವನ್ನು ಯಾರೂ ಅಷ್ಟಾಗಿ ಮಾಡಿರುವುದನ್ನು ನಾನು ನೋಡಿಲ್ಲ. ನಿರ್ದೇಶಕರು ಜಿಮ್‌ನಲ್ಲಿ ವರ್ಕೌಟ್‌ ಮಾಡದೆ, ಸಹಜವಾಗಿ ರೂಢಿಸಿಕೊಂಡ ಸಿಕ್ಸ್‌ ಪ್ಯಾಕ್‌ ಬಾಡಿ ಇರಬೇಕೆಂದಾಗ, ನಾನು ಮಾಂಸಾಹಾರವನ್ನೇ ಬಿಟ್ಟು, ಬರೀ ಶಾಖಾಹಾರಕ್ಕೆ ಒಗ್ಗಿಕೊಂಡೆ. ನಾನು ಮೂಲತಃ ಜಿಮ್‌ ತರಬೇತುದಾರ ಮತ್ತು ಯೋಗ ಶಿಕ್ಷಕ. ಅಲ್ಲದೆ, ಗರಡಿ ಮನೆಯ ಪೈಲ್ವಾನ. ಹಲವು ಕುಸ್ತಿ‍ಪಂದ್ಯಗಳಲ್ಲಿ ಭಾಗವಹಿಸಿದ್ದೇನೆ. 2011ರಲ್ಲಿ ರಾಜ್ಯಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ, ‘ಮಿಸ್ಟರ್ ಕೇಸರಿ’ ಕಿರೀಟ ಧರಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಬೆಸ್ತರ ಹುಡುಗನ ಪಾತ್ರ ನನ್ನದು. ಯಾವುದೇ ಡೂಪ್‌ ಬಳಸದೆ, ಫೈಟ್‌ಗಳನ್ನು ಮಾಡಿದ್ದೇನೆ. ಒಮ್ಮೆ ಸಮುದ್ರಕ್ಕೆ ಜಿಗಿಯುವ ದೃಶ್ಯದಲ್ಲೂ ಪೆಟ್ಟು ತಿಂದಿದ್ದೇನೆ, ಫೈಟ್‌ ದೃಶ್ಯದಲ್ಲೂ ಕುತ್ತಿಗೆ ಉಳುಕಿಸಿಕೊಂಡಿದ್ದೇನೆ. ಪ್ರತಿ ದೃಶ್ಯಕ್ಕೂ ಸಾಕಷ್ಟು ಶ್ರಮ ಹಾಕಿದ್ದೇನೆ.ತಮಿಳಿನ ವಿಐಪಿ ಸಿನಿಮಾದಲ್ಲಿ ಧನುಷ್ ಹೇಳಿರುವಒಂದು ದೀರ್ಘ ಸಾಲಿನಡೈಲಾಗ್‌ ನೆನಪಿಸುವಂತೆ, ನಾನು ಕೂಡ ಈ ಸಿನಿಮಾದಲ್ಲಿ ಒಂದು ಡೈಲಾಗ್‌ ಹೇಳಿದ್ದೇನೆ. ನಿರ್ದೇಶಕರು ಒಂದು ದೀರ್ಘ ಡೈಲಾಗ್‌ ಹೇಳಬೇಕಿದೆಯಲ್ಲಾ ಎಂದಾಗ, ಪ್ರಯತ್ನಿಸುತ್ತೇನೆ ಎಂದು ಹಗಲು– ರಾತ್ರಿ ಅದನ್ನು ಅಭ್ಯಾಸ ಮಾಡಿ, ದೃಶ್ಯಕ್ಕೆ ತಕ್ಕಂತೆಹೇಳಿದ್ದೇನೆ. ಇದಕ್ಕಾಗಿ ಹೆಚ್ಚು ಸರ್ಕಸ್‌ ಮಾಡಲಿಲ್ಲ. ಒಂದೇ ಟೇಕ್‌ನಲ್ಲಿ ಪೂರ್ಣಗೊಳಿಸಿದೆ. ಈ ಡೈಲಾಗ್‌ ಕುರಿತು ಪ್ರೇಕ್ಷಕರಿಗೂ ಸ್ಪರ್ಧೆ ಇಟ್ಟಿದ್ದೆವು. ಅದು ಈಗಾಗಲೇ ಸಾಕಷ್ಟು ಚರ್ಚೆ, ಕುತೂಹಲ ಹುಟ್ಟು ಹಾಕಿದೆ. ಧೂಮಪಾನಿಗಳಿಂದ ಆ ಡೈಲಾಗ್‌ ಅನ್ನು ಒಂದೇ ಉಸಿರಿಗೆ ಹೇಳಲು ಸಾಧ್ಯವೇ ಇಲ್ಲ. ಯೋಗಪಟುಗಳು ಮತ್ತು ಪ್ರಾಣಯಾಮ ಮಾಡುವವರಿಂದ ಮಾತ್ರ ಆ ಡೈಲಾಗ್‌ ಒಂದೇ ಉಸಿರಿಗೆ ಹೇಳಲು ಸಾಧ್ಯ ಎನ್ನುವ ಮಾತು ಸೇರಿಸಿದರು ಪವನ್‌ ಸೌರ್ಯ.

ಹುಲಿರಾಯ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಚಿರಶ್ರೀ ಅಂಚನ್, ‘ಉಡುಂಬಾ’ನ ಕಥಾನಾಯಕಿ. ‘ನನ್ನದು ನರ್ಸಿಂಗ್‌ ವಿದ್ಯಾರ್ಥಿನಿಯ ಪಾತ್ರ. ನಾಯಕನ ಮೇಲೆ ಪ್ರೀತಿ ಅಂಕುರಿಸುತ್ತದೆ’ ಎಂದಷ್ಟೇ ಹೇಳಿದ ಚಿರಶ್ರೀ, ಪಾತ್ರದ ಬಗ್ಗೆ ಹೆಚ್ಚು ಗುಟ್ಟು ಬಿಟ್ಟುಕೊಡಲಿಲ್ಲ.

ನಟ ಶರತ್‌ ಲೋಹಿತಾಶ್ವ. ‘ಈ ಸಿನಿಮಾದಲ್ಲಿ ನನ್ನ ಪಾತ್ರ ನೆಗೆಟಿವ್‌ ಶೇಡ್‌ನದು. ಹೊಸಬರ ತಂಡವಾದರೂ ಅವರ ತಯಾರಿ ಮತ್ತು ಜೋಶ್‌ ಎಂತಹವರಿಗೂ ಖುಷಿ ನೀಡುತ್ತದೆ. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡಿದ ಖುಷಿ ಇದೆ. ಚಿತ್ರೀಕರಣದ ವೇಳೆ ಮಂಗಳೂರಿನಲ್ಲಿ ತುಂಬಾ ಬಿಸಿಲು, ಶೆಕೆ ಇತ್ತು. ನಿರ್ದೇಶಕರು ನಮಗೆ ಒಂದಿನಿತು ಸಮಸ್ಯೆಯಾಗದಂತೆ ನೋಡಿಕೊಂಡರು. ಸಣ್ಣ ಗೊಂದಲವೂ ಇಲ್ಲದಂತೆ ಚಿತ್ರೀಕರಣ ಮುಗಿಸಿದರು’ ಎಂದು ಶ್ಲಾಘಿಸಿದರು.

ಇರ್ಫಾನ್‌ ಖಳನಟನಾಗಿ ಕಾಣಿಸಿಕೊಂಡಿದ್ದಾರೆ. ಆಂಧ್ರದ ಹನುಮಂತರಾವ್-ವೆಂಕಟ್‍ರೆಡ್ಡಿ, ಮಾನಸ ಮಹೇಶ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.ಕಡಲ ತೀರಗಳಾದ ಉಡುಪಿ, ಗೋಕರ್ಣ, ಮಂಗಳೂರು ಸುತ್ತ ಚಿತ್ರೀಕರಣ ನಡೆಸಲಾಗಿದೆ. ವಿನೀತ್ ರಾಜ್ ಸಂಗೀತ, ಹಾಲೇಶ್ ಛಾಯಾಗ್ರಹಣ, ಧನ್ ಕುಮಾರ್ ನೃತ್ಯ ನಿರ್ದೇಶನ, ಉದ್ದವ್ ಸಂಕಲನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.