ADVERTISEMENT

ನನ್ನ ತಂದೆಯೇ ನನ್ನನ್ನು ‘ಪೋರ್ನ್‌ ಸ್ಟಾರ್‌‘ ಎಂದು ಕರೆಯುತ್ತಿದ್ದರು: ಉರ್ಫಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಏಪ್ರಿಲ್ 2023, 13:07 IST
Last Updated 9 ಏಪ್ರಿಲ್ 2023, 13:07 IST
ಉರ್ಫಿ ಜಾವೇದ್‌
ಉರ್ಫಿ ಜಾವೇದ್‌   

ತನ್ನ ವಿಶಿಷ್ಟ ಉಡುಗೆ ಶೈಲಿಯಿಂದಲೇ ಜನಪ್ರಿಯತೆ ಗಳಿಸಿರುವ ಉರ್ಫಿ ಜಾವೇದ್‌ ಇದೇ ಮೊದಲ ಬಾರಿಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಬಾಲ್ಯದಲ್ಲಿ ತನ್ನ ತಂದೆಯಿಂದಲೇ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳಕ್ಕೊಳಗಾಗಿದ್ದ ಉರ್ಫಿ, ತನ್ನ ತಂದೆ ತನ್ನನ್ನು ‘ಪೋರ್ನ್‌ ಸ್ಟಾರ್‌‘ ಎಂದು ಕರೆದಿರುವುದಾಗಿ ಹೇಳಿದ್ದಾರೆ.

ಯೂಟ್ಯೂಬ್‌ ಚಾನೆಲ್‌ವೊಂದು ನಡೆಸಿದ ಸಂದರ್ಶನದಲ್ಲಿ ಉರ್ಫಿ ಮನಬಿಚ್ಚಿ ಮಾತನಾಡಿದ್ದಾರೆ. ತನ್ನ ಬಾಲ್ಯ, ಯೌವನದಲ್ಲಿ ತಾನು ಪಟ್ಟಿರುವ ಹಿಂಸೆ ಹೀಗೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

‘ಲಖನೌದಲ್ಲಿ ನಾನು ಬೆಳೆದಿದ್ದು, ಅಲ್ಲಿರುವ ಸಮಯದಲ್ಲಿ ಕೆಲವೊಂದು ಬಟ್ಟೆಗಳನ್ನು ಧರಿಸುವುದಕ್ಕೆ ನನಗೆ ಅಡ್ಡಿಪಡಿಸುತ್ತಿದ್ದರು. ಯಾಕೆ ಹೀಗೆ ಮಾಡುತ್ತಿದ್ದರು ಎಂದು ನನಗೆ ತಿಳಿಯುತ್ತಿರಲಿಲ್ಲ. ಒಂದು ಬಾರಿ ನನ್ನ ತಂದೆ ನನಗೆ ಎಷ್ಟು ಹೊಡೆದಿದ್ದರೆಂದರೆ ನಾನು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದೆ. ಎಷ್ಟೋ ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದೇನೆ’ ಎಂದು ಹೇಳಿದ್ದಾರೆ.

ADVERTISEMENT

‘ನಾನು 15 ವರ್ಷದವಳಿದ್ದಾಗ ಯಾರೋ ಒಬ್ಬರು ನನ್ನ ಚಿತ್ರವನ್ನು ‘ಪೋರ್ನ್‌‘ ಸೈಟ್‌ ಹಾಕಿದ್ದರು. ಅದೊಂದು ಸಾಮಾನ್ಯ ಪೋಟೊ ಆಗಿದ್ದು, ಆ ಪೋಟೊವನ್ನು ನನ್ನ ಫೇಸ್‌ಬುಕ್‌ ಪೇಜ್‌ನಿಂದ ತೆಗೆದುಕೊಳ್ಳಲಾಗಿತ್ತು. ಈ ವಿಷಯ ಎಲ್ಲರಿಗೂ ತಿಳಿದು ನನ್ನನ್ನು ‘ಪೋರ್ನ್‌ ಸ್ಟಾರ್‌‘ ಎಂದು ಕರೆದರು. ಸ್ವತಃ ನನ್ನ ತಂದೆಯೇ ನನ್ನನ್ನು ‘ಪೋರ್ನ್‌ ಸ್ಟಾರ್‌‘ ಎಂದು ಕರೆಯುತ್ತಿದ್ದರು. ಇದರಲ್ಲಿ ನನ್ನ ತಪ್ಪೇನು ಇರಲಿಲ್ಲ‘ ಎಂದು ಹದಿಹರೆಯದ ವಯಸ್ಸಿನಲ್ಲಿ ಅನುಭವಿಸಿದ ನೋವನ್ನು ಹಂಚಿಕೊಂಡಿದ್ದಾರೆ.

‘ನನ್ನ ತಂದೆ ನೀಡುತ್ತಿರುವ ಕಿರುಕುಳವನ್ನು ತಡೆಯಲಾರದೆ ನಾನು ನನ್ನ 17ನೇ ವಯಸ್ಸಿಗೆ ಲಖನೌದಿಂದ ದೆಹಲಿಗೆ ಮನೆಬಿಟ್ಟು ಬಂದೆ. ದೆಹಲಿಗೆ ಬಂದ ಸ್ವಲ್ಪ ದಿನಗಳಲ್ಲಿಯೇ ನನ್ನ ತಂದೆ ನನ್ನ ಕುಟುಂಬವನ್ನು ಬಿಟ್ಟು ಹೋಗಿದ್ದರು ಎಂಬ ವಿಷಯ ತಿಳಿಯಿತು. ನಂತರ ನನ್ನ ಕುಟುಂಬವನ್ನು ನಾನೇ ನೋಡಿಕೊಳ್ಳುವ ಜವಬ್ದಾರಿ ತೆಗೆದುಕೊಂಡೆ. ಮುಂಬೈಯಲ್ಲಿ ಹಲವು ಆಡಿಷನ್‌ಗಳನ್ನು ಕೊಟ್ಟು ಅದೃಷ್ಟ ಪರೀಕ್ಷೆಗೆ ಇಳಿದೆ. ಆಗ ನನ್ನ ಬಳಿ ಒಂದು ರೂಪಾಯಿ ಕೂಡ ಇರಲಿಲ್ಲ.‘ ಎಂದು ಹೇಳಿದರು.

‘ನನಗೆ ಫ್ಯಾಷನ್‌ ಬಗ್ಗೆ ಆಸಕ್ತಿಯಿದ್ದು, ಆ ಕ್ಷೇತ್ರವನ್ನೇ ಆಯ್ದುಕೊಂಡೆ. ಬೇರೆಯವರ ಅಭಿಪ್ರಾಯಗಳಿಗೆ ನಾನು ಎಂದು ಬೆಲೆ ಕೊಡುವುದಿಲ್ಲ. ನಾನು ಬಟ್ಟೆ ಧರಿಸುವ ರೀತಿಗೆ ನನ್ನನ್ನು ಹಲವರು ಟ್ರೋಲ್‌ ಮಾಡಿದರು. ಆದರೆ, ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳದೇ ಮುಂದೆ ಸಾಗಿದೆ. ನಾನು ನನ್ನನ್ನು ಮತ್ತು ನನ್ನ ಆಯ್ಕೆಯನ್ನು ತುಂಬಾ ಗೌರವಿಸುತ್ತೇನೆ‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.