
‘ಉಪಾಧ್ಯಕ್ಷ’ ಸಿನಿಮಾ ಮೂಲಕ ನಾಯಕನಾಗಿ ತೆರೆ ಮೇಲೆ ಮಿಂಚಿದ ನಟ ಚಿಕ್ಕಣ್ಣ ನಟನೆಯ ಹೊಸ ಸಿನಿಮಾ ‘ಲಕ್ಷ್ಮೀಪುತ್ರ’ ನಾಯಕಿಯನ್ನು ಚಿತ್ರತಂಡ ಭಿನ್ನವಾಗಿ ಘೋಷಿಸಿದೆ. ‘ಚಿಕ್ಕಣ್ಣನಿಗೆ ನಾಯಕಿ ಸಿಕ್ಕಿಲ್ವಂತೆ’ ಎಂಬುವುದನ್ನೇ ಇಟ್ಟುಕೊಂಡು ನಾಯಕಿಯನ್ನು ಪರಿಚಯಿಸಿದೆ ತಂಡ. ‘ನಮೋ ಭೂತಾತ್ಮ–2’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮೋನಿಕಾ ಗೌಡ ಇದೀಗ ಹೆಸರು ಬದಲಾಯಿಸಿಕೊಂಡು ವಂದಿತಾ ಆಗಿ ‘ಲಕ್ಷ್ಮೀಪುತ್ರ’ನಿಗೆ ಜೋಡಿಯಾಗಿದ್ದಾರೆ.
‘ಅಂಬಾರಿ’, ‘ಅದ್ಧೂರಿ’, ‘ಐರಾವತ’, ‘ರಾಟೆ’ಯಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಎ.ಪಿ.ಅರ್ಜುನ್ ತಮ್ಮದೇ ಎಪಿ ಅರ್ಜುನ್ ಫಿಲ್ಮ್ಸ್‌ನಡಿ ಈ ಸಿನಿಮಾ ನಿರ್ಮಾಣ ಮಾಡಿದ್ದು, ವಿಜಯ್ ಸ್ವಾಮಿ ನಿರ್ದೇಶಿಸಿದ್ದಾರೆ. ತಮ್ಮ ಹೊಸ ಪ್ರಾಜೆಕ್ಟ್ ಕುರಿತು ಮಾತಿಗಿಳಿದ ವಂದಿತಾ, ‘ಮನೆಯವರ ನಿರ್ಧಾರದಿಂದ, ನನ್ನ ಮುಂದಿನ ಸಿನಿಮಾ ಪಯಣದ ದೃಷ್ಟಿಯಿಂದ ಹೆಸರು ಬದಲಾಯಿಸಿಕೊಂಡೆ. ಮೈಸೂರಿನ ನಾನು ಎಂಜಿನಿಯರಿಂಗ್ ಓದಿದ್ದೇನೆ. ಎರಡು ವರ್ಷ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿ ನಂತರದಲ್ಲಿ ಈ ಬಣ್ಣದ ಲೋಕಕ್ಕೆ ಇಳಿದೆ. 2022ರಲ್ಲಿ ‘ನಮೋ ಭೂತಾತ್ಮ–2’ ಪ್ರಾಜೆಕ್ಟ್ ಮಾಡಿದ್ದೆ. ಇದರಲ್ಲಿ ಎರಡನೇ ನಾಯಕಿಯಾಗಿದ್ದೆ. ಇದಾದ ಬಳಿಕ ಧ್ರುವ ಸರ್ಜಾ ಅವರ ನಟನೆಯ ‘KD’ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ಇದರಲ್ಲಿ ಧ್ರುವ ಅವರ ತಂಗಿಯಾಗಿ ನಟಿಸಿದ್ದೇನೆ. ಇದೊಂದು ಬಿಗ್ ಪ್ರಾಜೆಕ್ಟ್. ಈ ಪ್ಯಾನ್ ಇಂಡಿಯಾ ಸಿನಿಮಾ ಮೇಲೆ ನಿರೀಕ್ಷೆಯೂ ಹೆಚ್ಚಿದೆ. ಇದೀಗ ನಾಯಕಿಯಾಗಿ ‘ಲಕ್ಷ್ಮೀಪುತ್ರ’ ಸಿನಿಮಾ ಮೂಲಕ ತೆರೆ ಮೇಲೆ ಬರುತ್ತಿದ್ದೇನೆ’ ಎಂದರು.
‘ಲಕ್ಷ್ಮೀಪುತ್ರ ಸಿನಿಮಾದ ಆಡಿಷನ್ ಕರೆದಾಗಲೇ ತುಂಬಾ ಉತ್ಸುಕಳಾಗಿದ್ದೆ. ಏಕೆಂದರೆ ಚಿಕ್ಕಣ್ಣ ಅವರ ‘ಉಪಾಧ್ಯಕ್ಷ’ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಹೀಗಾಗಿ ಎಲ್ಲರಿಗೂ ನಿರೀಕ್ಷೆ ಹೆಚ್ಚು ಇದೆ. ನಾಯಕಿಯಾಗಿ ಮೊದಲ ಚಿತ್ರವಾದ ಕಾರಣ ಆಡಿಷನ್‌ನಲ್ಲಿ ಆಯ್ಕೆಯಾದ ಬಳಿಕ ಕೊಂಚ ಒತ್ತಡಕ್ಕೆ ಸಿಲುಕಿದ್ದೆ. ಇದಕ್ಕಾಗಿ ಪೂರ್ವಸಿದ್ಧತೆ ಮಾಡಿಕೊಂಡೆ. ತಂಡದ ಜೊತೆಗೂಡಿ ನಟನೆಯ ಕಾರ್ಯಾಗಾರಗಳೂ ನಡೆದವು. ಚಿಕ್ಕಣ್ಣ ಅವರ ಹಾಸ್ಯಪ್ರಜ್ಞೆ ಎಲ್ಲರಿಗೂ ತಿಳಿದಿದೆ. ಅವರೆದುರು ನಟಿಸುವುದು ಸವಾಲಿನ ವಿಷಯ. ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈಗ ರಿಲೀಸ್ ಮಾಡಿರುವ ವಿಡಿಯೊದಲ್ಲಿರುವ ಪಾತ್ರಕ್ಕೂ, ಸಿನಿಮಾದೊಳಗಿನ ಪಾತ್ರಕ್ಕೂ ಸಂಬಂಧವಿಲ್ಲ. ಅದು ಕೇವಲ ಪರಿಚಯಿಸಲು ಮಾಡಿದ ವಿಡಿಯೊ’ ಎನ್ನುತ್ತಾರೆ ವಂದಿತಾ.
‘ಹೊಸ ಕಥೆಗಳನ್ನು ಕೇಳುತ್ತಿದ್ದೇನೆ. ‘KD’ ಏ.30ಕ್ಕೆ ತೆರೆಗೆ ಬರುತ್ತಿದೆ. ‘ಲಕ್ಷ್ಮೀಪುತ್ರ’ ಒಪ್ಪಿಕೊಂಡ ಬಳಿಕ ಜವಾಬ್ದಾರಿ ಹೆಚ್ಚಾಗಿದೆ. ಜನರ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇನೆ’ ಎನ್ನುತ್ತಾ ಮಾತಿಗೆ ವಿರಾಮವಿತ್ತರು ವಂದಿತಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.