ADVERTISEMENT

ಜೋಗತಿ ವೇಷದಲ್ಲಿ ಶ್ರೀನಗರ ಕಿಟ್ಟಿ: ‘ವೇಷಗಳು’ ಎಂಬ ಸಣ್ಣ ಕಥೆಗೆ ಸಿನಿಮಾ ರೂಪ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 21:40 IST
Last Updated 10 ಜುಲೈ 2025, 21:40 IST
ಶ್ರೀನಗರ ಕಿಟ್ಟಿ 
ಶ್ರೀನಗರ ಕಿಟ್ಟಿ    

ನಾಯಕನಾಗಿ, ಖಳನಾಯಕನಾಗಿ ಮಿಂಚಿರುವ ನಟ ಶ್ರೀನಗರ ಕಿಟ್ಟಿ ಇದೀಗ ಜೋಗತಿಯಾಗಿ ತೆರೆ ಮೇಲೆ ಬರಲಿದ್ದಾರೆ. ರವಿ ಬೆಳಗೆರೆ ಅವರ ಜೋಗತಿಯರ ಜೀವನದ ಆಗು ಹೋಗುಗಳ ಬಗ್ಗೆ ಬರೆದಿರುವ ‘ವೇಷಗಳು’ ಎಂಬ ಸಣ್ಣ ಕಥೆಯು ಸಿನಿಮಾ ರೂಪ ಪಡೆಯುತ್ತಿದೆ. 

ಗ್ರೀನ್ ಟ್ರೀ ಸ್ಟುಡಿಯೋಸ್ ಅಡಿಯಲ್ಲಿ ಕಿಶನ್ ರಾವ್ ದಳವಿ ಅವರು ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಟೀಸರ್‌ ಶ್ರೀನಗರ ಕಿಟ್ಟಿ ಅವರ ಜನ್ಮದಿನದಂದು ಬಿಡುಗಡೆಯಾಗಿದೆ. 

ಭಾವನಾ ಬೆಳಗೆರೆ ಹಾಗೂ ಶ್ರೀನಗರ ಕಿಟ್ಟಿ ಅರ್ಪಿಸುವ ‘ವೇಷಗಳು’ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ADVERTISEMENT

‘ಈ ಚಿತ್ರದಲ್ಲಿ ಜೋಗತಿಯರ ಬಗ್ಗೆ ಹಾಗೂ ಅವರ ಜೀವನ ಶೈಲಿಯ ಬಗ್ಗೆ ಹೇಳಲಾಗುತ್ತಿದೆ. ಇಲ್ಲಿ  ಶ್ರೀನಗರ ಕಿಟ್ಟಿ ಅವರು ಬಸಪ್ಪ ಹಾಗೂ ಬಸಮ್ಮ ಜೋಗತಿಯಾಗಿ ಎರಡು ಗೆಟಪ್‌ಗಳಲ್ಲಿ ಇರಲಿದ್ದಾರೆ. ಈಗಾಗಲೇ ಶ್ರೀನಗರ ಕಿಟ್ಟಿ ಅವರು ಜೋಗತಿ ಪಾತ್ರಕ್ಕಾಗಿ ಮಂಜಮ್ಮ ಜೋಗತಿ ಅವರನ್ನು ಸಂಪರ್ಕಿಸಿ ಜೋಗತಿಯರ ನಡೆ, ನುಡಿಯ ಬಗ್ಗೆ ಸಾಕಷ್ಟು ಮಾಹಿತಿ ಪಡೆದುಕೊಂಡು ಸಿದ್ಧತೆ ಮಾಡಿಕೊಂಡಿದ್ದಾರೆ.‌ ಚಿತ್ರದಲ್ಲಿ ಬಸಪ್ಪ ಪಾತ್ರವೇ ಬಹುತೇಕ ಆವರಿಸಿಕೊಂಡಿದೆ. ಮುಂದಿನ ತಿಂಗಳಿಂದ ‘ವೇಷಗಳು’ ಚಿತ್ರದ ಚಿತ್ರೀಕರಣ ಆರಂಭಿಸಿ ಮಧ್ಯಪ್ರದೇಶದ ಮಹಾಕಾಲೇಶ್ವರ, ಉತ್ತರ ಕರ್ನಾಟಕ, ಬೆಂಗಳೂರು ಹಾಗೂ ಮೈಸೂರಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಚಿತ್ರದ ಉಳಿದ ಕಲಾವಿದರ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದಿದ್ದಾರೆ ಕಿಶನ್ ರಾವ್. ‌

ಚಿತ್ರಕ್ಕೆ ಕೌಶಿಕ್ ಹರ್ಷ ಸಂಗೀತ, ರಾಜ್‌ಗುರು ದತ್ತರಾಜ್ ಸಂಭಾಷಣೆ, ಅಕ್ಷಯ್ ಪಿ.ರಾವ್ ಸಂಕಲನವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.