ADVERTISEMENT

ಹಿರಿಯ ಛಾಯಾಗ್ರಾಹಕ ಎಸ್.ವಿ ಶ್ರೀಕಾಂತ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 8 ಮೇ 2020, 9:27 IST
Last Updated 8 ಮೇ 2020, 9:27 IST
ಎಸ್.ವಿ. ಶ್ರೀಕಾಂತ್
ಎಸ್.ವಿ. ಶ್ರೀಕಾಂತ್   

ಬೆಂಗಳೂರು:ವರನಟ ರಾಜ್‌ಕುಮಾರ್‌ ನಟನೆಯ ‘ಬಬ್ರುವಾಹನ’, ‘ಸಾಕ್ಷಾತ್ಕಾರ’ ಸೇರಿದಂತೆ ಹಲವು ಸಿನಿಮಾಗಳಿಗೆ ಛಾಯಾಗ್ರಾಹಕರಾಗಿದ್ದ ಎಸ್.ವಿ. ಶ್ರೀಕಾಂತ್(87) ಇಲ್ಲಿನ ಸ್ವಗೃಹದಲ್ಲಿ ಗುರುವಾರ ಸಂಜೆ ನಿಧನರಾದರು.

ಮೃತರಿಗೆ ಪತ್ನಿ ಮತ್ತು ಪುತ್ರ ಇದ್ದಾರೆ. ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಅರವತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿರುವುದು ಅವರ ಹೆಗ್ಗಳಿಕೆ. ‘ಗೆಜ್ಜೆಪೂಜೆ’, ‘ಉಪಾಸನೆ’ ಹಾಗೂ ‘ಮಾರ್ಗದರ್ಶಿ’ ಸಿನಿಮಾಗಳಲ್ಲಿನ ಕ್ಯಾಮೆರಾ ಕೈಚಳಕಕ್ಕಾಗಿ ಅವರು ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದರು.

ಶ್ರೀಕಾಂತ್‌ ಅವರ ಹುಟ್ಟೂರು ಮಂಡ್ಯ ಜಿಲ್ಲೆಯ ಮದ್ದೂರು. ಬಿಎಸ್‌ಪಿ ಪದವಿ ಪೂರೈಸಿದ ಬಳಿಕ ಮೈಸೂರಿನ ಪ್ರೀಮಿಯರ್ ಸ್ಟುಡಿಯೊದಲ್ಲಿ ಫೋಟೊಗ್ರಫಿ ಆರಂಭಿಸಿದರು. ಬಳಿಕ ಮದ್ರಾಸ್‌ನ ಗೋಲ್ಡನ್ ಸ್ಟುಡಿಯೊಗೆ ಸೇರಿದ್ದರು. ಅವರು ಮೊದಲ ಬಾರಿಗೆ ಸ್ವತಂತ್ರವಾಗಿ ಛಾಯಾಗ್ರಹಣ ಮಾಡಿದ ಚಿತ್ರ ‘ಜೀವನತರಂಗ’.

ADVERTISEMENT

ಅರವತ್ತರ ದಶಕದ ವೇಳೆ ಕನ್ನಡ ಚಿತ್ರರಂಗದಲ್ಲಿ ತಂತ್ರಜ್ಞಾನದ ಬೇರುಗಳು ಅಷ್ಟೊಂದು ಆಳವಾಗಿ ಬೇರೂರಿರಲಿಲ್ಲ. ಅಂತಹ ಕಾಲದಲ್ಲಿಯೇ ದ್ವಿಪಾತ್ರಗಳ ಪ್ರಯೋಗ ಮಾಡಿ ಸೈ ಎನಿಸಿಕೊಂಡಿದ್ದು ಅವರ ಹಿರಿಮೆ. ಹಾಗಾಗಿಯೇ, ಅವರು ‘ಟ್ರಿಕ್ ಫೋಟೊಗ್ರಫಿ ಎಕ್ಸ್‌ಪರ್ಟ್’ ಎಂದೇ ಪ್ರಸಿದ್ಧರಾಗಿದ್ದರು. ಇದಕ್ಕೆ ‘ಬಬ್ರುವಾಹನ’ ಸಿನಿಮಾ ಅತ್ಯುತ್ತಮ ಉದಾಹರಣೆ. ಈ ಚಿತ್ರದಲ್ಲಿ ಬಳಸಿರುವ ಟ್ರಿಕ್ ಶಾಟ್ಸ್ ಇಂದಿಗೂ ಸಿನಿಪ್ರಿಯರ ಮನದಲ್ಲಿ ಅಚ್ಚಳಿಯದೆ ಉಳಿದಿವೆ.

‘ಪ್ರೇಮಮಯಿ’, ‘ಜೀವನ ಚೈತ್ರ’, ‘ಆಕಸ್ಮಿಕ’, ‘ತ್ರಿಮೂರ್ತಿ’, ‘ಸ್ವರ್ಣ ಗೌರಿ’, ‘ಮನಸಿದ್ದರೆ ಮಾರ್ಗ’, ‘ಬಹದ್ದೂರ್ ಗಂಡು’, ‘ನಾ ನಿನ್ನ ಬಿಡಲಾರೆ’, ‘ಹಣ್ಣಲೇ ಚಿಗುರಿದಾಗ’, ‘ಅದೇ ಕಣ್ಣು’, ‘ಶ್ರಾವಣ ಬಂತು’, ‘ರಾಣಿ ಮಹಾರಾಣಿ’, ‘ವಿಜಯ್ ವಿಕ್ರಮ್’, ‘ಎಡಕಲ್ಲು ಗುಡ್ಡದ ಮೇಲೆ’ –ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಪ್ರಮುಖ ಸಿನಿಮಾಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.