ADVERTISEMENT

ಖ್ಯಾತ ಸಂಗೀತ ನಿರ್ದೇಶಕ ವನರಾಜ್ ಭಾಟಿಯಾ ನಿಧನ

ಪಿಟಿಐ
Published 7 ಮೇ 2021, 7:53 IST
Last Updated 7 ಮೇ 2021, 7:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಖ್ಯಾತ ನಿರ್ದೇಶಕ ಶ್ಯಾಂ ಬೆನಗಲ್‌ ಸಿನಿಮಾಗಳು ಹಾಗೂ ‘ಭಾರತ್‌ ಏಕ್ ಖೋಜ್‌’ ನಂತಹ ದೂರದರ್ಶನದ ಜನಪ್ರಿಯ ಧಾರಾವಾಹಿಗಳಿಗೆ ಸಂಗೀತ ಸಂಯೋಜಿಸಿದ್ದ ಖ್ಯಾತ ಸಂಗೀತ ನಿರ್ದೇಶಕ ವನರಾಜ್ ಭಾಟಿಯಾ(94) ಅವರು ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಅವರ ಸಹೋದ್ಯೋಗಿಯೊಬ್ಬರು ತಿಳಿಸಿದ್ದಾರೆ.

ಭಾಟಿಯಾ ಅವರು ಮುಂಬೈನ ನೇಪಿಯನ್ ಸೀ ರಸ್ತೆಯ ರುಂಗ್ಟಾ ಹೌಸಿಂಗ್‌ ಕಾಲೊನಿಯಲ್ಲಿರುವ ಅಪಾರ್ಟ್‌ಮೆಂಟ್‌ ವೊಂದರಲ್ಲಿ ಒಬ್ಬರೇ ವಾಸಿಸುತ್ತಿದ್ದರು.

‌ಮುಂಬೈನ ಎಲ್ಫಿನ್‌ಸ್ಟೋನ್ ಕಾಲೇಜಿನಲ್ಲಿ ಪದವಿ ಪಡೆದ ವನರಾಜ ಬಾಟಿಯಾ, ಮುಂದೆ ಲಂಡನ್‌ ಮತ್ತು ಪ್ಯಾರಿಸ್‌ನಲ್ಲಿರುವ ಪಾಶ್ಚಿಮಾತ್ಯ ಕ್ಲಾಸಿಕಲ್ ಸಂಗೀತ ಶಾಲೆಗಳಲ್ಲಿ ತರಬೇತಿ ಪಡೆದಿದ್ದರು.

ADVERTISEMENT

ಲಂಡನ್‌ನಿಂದ ಭಾರತಕ್ಕೆ ವಾಪಸಾದ ನಂತರ, ಜಾಹೀರಾತು ಕ್ಷೇತ್ರದಲ್ಲಿ ಉದ್ಯೋಗಕ್ಕೆ ಸೇರಿದರು. ಸುಮಾರು 6 ಸಾವಿರ ಜಿಂಗಲ್ಸ್‌ಗಳಿಗಾಗಿ ಕೆಲಸ ಮಾಡಿದ್ದಾರೆ.

ಬಾಟಿಯಾ ಅವರು ಲಿರಿಲ್ ಸೋಪ್ ಜಾಹೀರಾತಿನ ‘ಲಾ ಲಲಲಾ..’ ಎಂಬ ಪಲ್ಲವಿ ಹಾಡಿಗಾಗಿ ಮಾಡಿದ್ದ ಸಂಗೀತ ಸಂಯೋಜನೆ ಅತ್ಯಂತ ಖ್ಯಾತಿ ಪಡೆದಿತ್ತು. ಜಲಪಾತದ ಹಿನ್ನೆಲೆಯಲ್ಲಿ ಚಿತ್ರೀಕರಣಗೊಂಡಿರುವ ಆ ಸೋಪ್‌ ಜಾಹೀರಾತಿನ ಸಂಗೀತ ತುಂಬಾ ಜನಪ್ರಿಯವೂ ಆಗಿತ್ತು.

ಜಾಹೀರಾತು ಕ್ಷೇತ್ರದ ನಂತರ ಸಿನಿಮಾ ರಂಗ ಪ್ರವೇಶಿಸಿದ ವನರಾಜ ಅವರು, ಖ್ಯಾತ ನಿರ್ದೇಶಕ ಶ್ಯಾಮ್‌ ಬೆನಗಲ್ ಅವರ ನಿರ್ದೇಶನದ ‘ಅಂಕುರ್’ ಮತ್ತು ‘ಭೂಮಿಕಾ’ ಸಿನಿಮಾಗಳಿಗೆ ಹಾಗೂ ದೂರದರ್ಶನದ ಪ್ರಸಿದ್ಧ ಧಾರಾವಾಹಿ ‘ಭಾರತ್‌ ಏಕ್ ಖೋಜ್‌(ಡಿಸ್ಕವರಿ ಆಫ್ ಇಂಡಿಯಾ)ಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಶ್ಯಾಂ ಬೆನೆಗಲ್ ಅವರ ಸಿನಿಮಾಗಳಲ್ಲಿ ಪಾಶ್ಚಾತ್ಯ ಸಂಗೀತ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತದೊಂದಿಗೆ ಸಂಯೋಜಿಸಿದ್ದರು. ಅಪರ್ಣಾ ಸೇನ್ ಅವರ ‘36 ಚೌರಿಂಗಿ ಹಿಲೇನ್’ ಮತ್ತು ಕುಂದನ್ ಷಾ ಅವರ ‘ಜಾನೆ ಭಿ ದೋ ಯಾರೊ’ ಚಿತ್ರಕ್ಕಾಗಿ ಸೌಂಡ್‌ ಟ್ರಾಕ್‌ಗಳನ್ನು ರಚಿಸಿದ್ದರು. ಭಾಟಿಯಾ ಅವರು ಕೊನೆಯದಾಗಿ ಸಿದ್ಧಪಡಿಸಿದ ‘ಅಗ್ನಿ ವರ್ಷಾ‘ ಎಂಬ ಸಂಗೀತ – ನೃತ್ಯ ರೂಪಕ ನ್ಯೂಯಾರ್ಕ್‌ನಲ್ಲಿ ಪ್ರದರ್ಶನಗೊಂಡಿತು.

ವನರಾಜ್ ಭಾಟಿಯಾ ಅವರ ‘ಸಂಗೀತ ಕ್ಷೇತ್ರದ ಸಾಧನೆ’ ಗುರುತಿಸಿ ಭಾರತ ಸರ್ಕಾರ 2012ರಲ್ಲಿ ದೇಶದ ನಾಲ್ಕನೇ ಅತ್ಯನ್ನತ ನಾಗರಿಕ ಗೌರವ ಪ್ರಶಸ್ತಿ ‘ಪದ್ಮ ಶ್ರೀ’ ನೀಡಿ ಗೌರವಿಸಿತ್ತು. ಭಾಟಿಯಾ ಅವರು ಗೋವಿಂದ್ ನಿಹಲಾನಿಯವರ ‘ತಾಮಸ್‌’ ದೂರದರ್ಶನ ಸರಣಿಗೆ ನೀಡಿದ್ದ ಸಂಗೀತ ಸಂಯೋಜನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಜತೆಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನೂ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.