ADVERTISEMENT

‘ದಿ ವಿಲನ್’ ದರ ಸಮರ: ಮಲ್ಟಿಪ್ಲೆಕ್ಸ್‌ನಲ್ಲಿ ₹400, ಉಳಿದಂತೆ ಕನಿಷ್ಠ ₹150

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 12:02 IST
Last Updated 15 ಅಕ್ಟೋಬರ್ 2018, 12:02 IST
ದಿ ವಿಲನ್
ದಿ ವಿಲನ್   

‘ದಿ ವಿಲನ್ ದೊಡ್ಡ ಬಜೆಟ್‌ ಚಿತ್ರವಾಗಿರುವುದರಿಂದ ನಿರ್ಮಾಪಕರ ಉಳಿವಿನ ಹಿತದೃಷ್ಟಿಗಾಗಿ ಮಲ್ಟಿಪ್ಲೆಕ್ಸ್‌ ಟಿಕೆಟ್ ದರವನ್ನು 4 ದಿನಗಳ ಮಟ್ಟಿಗೆ ಹೆಚ್ಚಿಸಲಾಗಿದೆ. ಕನ್ನಡ ಚಿತ್ರರಸಿಕರು ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ’ –ಗೋಪಾಲನ್ ಸಿನಿಮಾಸ್‌ನಲ್ಲಿ ಅಂಟಿಸಿರುವ ಇಂಥದ್ದೊಂದು ಮನವಿಪತ್ರದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಟಿಕೆಟ್ ದರವನ್ನು ಏರಿಸುತ್ತಿರುವುದಕ್ಕೆ ಸಾಕಷ್ಟು ಟೀಕೆಗಳೂ ಕೇಳಿಬಂದಿವೆ. ‘ದೊಡ್ಡ ಬಜೆಟ್ ಸಿನಿಮಾ ಮಾಡಿ ಎಂದು ನಾವು ಹೇಳಿದ್ದೇವೆಯೇ? ಅದಕ್ಕಾಗಿ ವೀಕ್ಷಕರ ಮೇಲೆ ಹೊರೆಯನ್ನು ಹಾಕುವುದು ಎಷ್ಟು ಸರಿ?’ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಅ. 18ರಂದು ಚಿತ್ರ ಬಿಡುಗಡೆಯಾಗಲಿದೆ. 11ರಿಂದಲೇ ಬುಕ್‌ಮೈ ಷೋನಲ್ಲಿ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವ ಅವಕಾಶ ಕಲ್ಪಿಸಲಾಗುವುದು ಎಂದು ಚಿತ್ರತಂಡ ಹೇಳಿಕೊಂಡಿತ್ತು. ಆದರೆ ಸೋಮವಾರ ಸಂಜೆಯವರೆಗೆ ಬುಕ್‌ಮೈಷೋದಲ್ಲಿ ಏಕಪರದೆ ಚಿತ್ರಮಂದಿರಗಳು ಮತ್ತು ಗೋಪಾಲನ್‌ ಸಿನಿಮಾಸ್‌ ಮಲ್ಟಿಪ್ಲೆಕ್ಸ್‌ನಲ್ಲಿ ಮಾತ್ರವೇ ಬುಕ್ಕಿಂಗ್ ಲಭ್ಯವಿತ್ತು. ಉಳಿದ ಮಲ್ಟಿಪ್ಲೆಕ್ಸ್‌ ಪಟ್ಟಿ ಲಭ್ಯವಿರಲಿಲ್ಲ. ಗೋಪಾಲನ್‌ ಸಿನಿಮಾಸ್‌ನಲ್ಲಿ ₹400 ಟಿಕೆಟ್‌ ದರ ನಿಗದಿಪಡಿಸಲಾಗಿದೆ.

ಮೂಲಗಳ ಪ್ರಕಾರ ಟಿಕೆಟ್ ದರದ ಶೇರಿಂಗ್‌ಗೆ ಸಂಬಂಧಿಸಿದಂತೆ ‘ದಿ ವಿಲನ್’ ವಿತರಕರು/ನಿರ್ಮಾಪಕರು ಮತ್ತು ಮಲ್ಟಿಪ್ಲೆಕ್ಸ್‌ ಮಾಲೀಕರ ನಡುವೆ ಮಾತುಕತೆ ಇನ್ನೂ ನಡೆಯುತ್ತಿದೆ.

ADVERTISEMENT

‘ಟಿಕೆಟ್‌ ದರವನ್ನು ನಿಗದಿ ಮಾಡುವುದು ಮಲ್ಟಿಪ್ಲೆಕ್ಸ್‌ನವರಲ್ಲ; ನಿರ್ಮಾಪಕರ ಬೇಡಿಕೆಗೆ ಅನುಗುಣವಾಗಿ ದರ ನಿಗದಿಪಡಿಸಲಾಗುತ್ತದೆ. ಸಿನಿಮಾ ಬಿಡುಗಡೆಯಾದ ಮೊದಲವಾರ ಟಿಕೆಟ್ ದರದ ಅರ್ಧದಷ್ಟು ಶೇರ್‌ ನಿರ್ಮಾಪಕರಿಗೆ ಹೋಗುತ್ತದೆ. ಉಳಿದರ್ಧ ಮಲ್ಟಿಪ್ಲೆಕ್ಸ್‌ಗೆ ಬರುತ್ತದೆ. ‘ದಿ ವಿಲನ್’ ದೊಡ್ಡ ಬಜೆಟ್‌ನ ಸಿನಿಮಾ ಆಗಿರುವುದರಿಂದ ಸಾಮಾನ್ಯ ಟಿಕೆಟ್ ದರದ ಶೇರಿಂಗ್‌ನಲ್ಲಿ ಬಂಡವಾಳ ವಾಪಸ್ ಪಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಅವರು ಹೆಚ್ಚಿನ ಶೇರ್ ನಿರೀಕ್ಷೆ ಮಾಡುತ್ತಿದ್ದಾರೆ. ಹೆಚ್ಚು ಶೇರ್ ಬೇಕು ಎಂದಾಗ ಸಹಜವಾಗಿ ಟಿಕೆಟ್ ದರ ದುಪ್ಪಟ್ಟು ಮಾಡಲೇಬೇಕಾಗುತ್ತದೆ’ ಎಂದು ಮಲ್ಟಿಪ್ಲೆಕ್ಸ್‌ನ ನಿರ್ವಾಹಕರೊಬ್ಬರು ಮಾಹಿತಿ ನೀಡುತ್ತಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಜಾವಾಣಿ ಜತೆ ಮಾತನಾಡಿದ ನಿರ್ದೇಶಕ ಪ್ರೇಮ್‌ ‘ಪಿವಿಆರ್ ಮತ್ತು ಐನಾಕ್ಸ್‌ ಬಿಟ್ಟರೆ ಉಳಿದೆಲ್ಲ ಪ್ರದರ್ಶಕ ಸಂಸ್ಥೆಗಳು ಹೆಚ್ಚಿನ ಶೇರಿಂಗ್ ನೀಡಲು ಒಪ್ಪಿಕೊಂಡಿದ್ದಾರೆ. ಪಿವಿಆರ್ ಮತ್ತು ಐನಾಕ್ಸ್‌ ಜತೆ ಮಾತುಕತೆ ನಡೆಯುತ್ತಿದೆ. ಶೀಘ್ರವೇ ಒಂದು ನಿರ್ಧಾರಕ್ಕೆ ಬರಲಾಗುತ್ತದೆ’ ಎಂದರು.

‘ಟಿಕೆಟ್‌ ದರದಲ್ಲಿ ಕೊಂಚ ಹೆಚ್ಚಳವಾಗುತ್ತದೆ. ತೆಲುಗು– ತಮಿಳು ಸಿನಿಮಾಗಳಂತೆ ಐನೂರು ಸಾವಿರ ರೂಪಾಯಿಗಳಷ್ಟೇನೂ ಹೆಚ್ಚು ಮಾಡುವುದಿಲ್ಲ. ಮಲ್ಟಿಪ್ಲೆಕ್ಸ್‌ನಲ್ಲಿ ನೂರು ರೂಪಾಯಿ, ಜಿಲ್ಲಾಕೇಂದ್ರಗಳಲ್ಲಿ ಐವತ್ತು ರೂಪಾಯಿ, ಜಿಲ್ಲಾ ಕೇಂದ್ರಗಳಲ್ಲಿ ಇಪ್ಪತ್ತೈದು ರೂಪಾಯಿಗಳಷ್ಟು ಜಾಸ್ತಿ ಮಾಡುತ್ತೇವೆ’ ಎಂದು ಪ್ರೇಮ್‌ ಸ್ಪಷ್ಟಪಡಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಸಿನಿಮಾ ನಿರ್ಮಾಪಕ ಸಿ.ಆರ್. ಮನೋಹರ್ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.