ADVERTISEMENT

ದಿ ವಿಲನ್‌ ದುಬಾರಿ ಸರಿಯೇ?

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 20:00 IST
Last Updated 16 ಅಕ್ಟೋಬರ್ 2018, 20:00 IST
   

ಅಭಿಮಾನದ ದುರುಪಯೋಗ
ದರ ಹೆಚ್ಚಿಸಿರುವುದು ತಪ್ಪು. ಮೊದಲಿನ ದರವೇ ಇರಬೇಕು. ಇದರಿಂದ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ನೋಡಬಹುದು. ದುಡ್ಡಿದ್ದವರು ಮಾತ್ರ ಸಿನಿಮಾ ನೋಡಲು ಸಾಧ್ಯವಾಗುತ್ತದೆ. ಸುದೀಪ್ ಮತ್ತು ಶಿವರಾಜ್‌ಕುಮಾರ್ ಅವರು ಮಾಸ್ ಹೀರೋಗಳು. ಇವರಿಬ್ಬರಿಗೆ ಎಲೈಟ್‌ಕ್ಲಾಸ್‌ ಮಂದಿಗಿಂತ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಪ್ರೇಕ್ಷಕರೇ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಮೊದಲನೇ ದಿನ, ಮೊದಲ ಷೋ ನೋಡಬೇಕೆಂದು ಅಭಿಮಾನಿಗಳಿಗೆ ಆಸೆ ಇರುತ್ತದೆ. ಆದರೆ, ಟಿಕೆಟ್ ದರ ಹೆಚ್ಚಿಸಿದರೆ ಅಭಿಮಾನಿಗಳ ಅಭಿಮಾನವನ್ನೇ ದುರುಪಯೋಗ ಪಡಿಸಿಕೊಂಡಂತೆ ಆಗುತ್ತದೆ. ಟಿಕೆಟ್ ದರ ಈ ಹಿಂದೆ ಇದ್ದಷ್ಟೇ ಇರಬೇಕು.

ಲಕ್ಷ್ಮಿ ಬಾವಗೆ, ಸಾಮಾಜಿಕ ಕಾರ್ಯಕರ್ತೆ

ನನ್ನ ವಿರೋಧ ಇದೆ

ಮಲ್ಟಿಪ್ಲೆಕ್ಸ್‌ಗಳಲ್ಲಿ ಈಗಿರುವ ಟಿಕೆಟ್‌ ದರವೇ ಹೆಚ್ಚು. ಅದನ್ನು ಕಡಿಮೆ ಮಾಡಬೇಕು ಎಂದು ನಾವೆಲ್ಲ ಹೋರಾಟ ಮಾಡಿದ್ದೆವು. ಈಗ ಕೆಲ ನಿರ್ಮಾಪಕರು ಹೆಚ್ಚು ಹಣ ಹೂಡಿ ಸಿನಿಮಾ ಮಾಡಿದ್ದೇವೆ ಎಂಬ ಕಾರಣಕ್ಕೆ ಟಿಕೆಟ್‌ ದರ ಏರಿಸಲು ಹೊರಟಿರುವುದು ಸರಿಯಲ್ಲ. ಇದಕ್ಕೆ ನನ್ನ ವಿರೋಧ ಇದೆ. ಸಾಮಾನ್ಯ ಜನರೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ನೋಡುವಂತೆ ದರ ಇರಬೇಕು. ಅಲ್ಲಿಂದ ಸಿನಿಮಾ ನಿರ್ಮಾಪಕರಿಗೆ ನಿಗದಿತ ಅನುಪಾತದಲ್ಲಿ ಶೇರು ದೊರೆಯುವಂತಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಏಕರೂಪ ಟಿಕೆಟ್‌ ದರ ನೀತಿಗಾಗಿ ಹೋರಾಡಬೇಕಾದ ನಿರ್ಮಾಪಕರೇ ಮನಸೋಇಚ್ಛೆ ದರ ಏರಿಸಲು ಅವಕಾಶ ಕಲ್ಪಿಸುತ್ತಿರುವುದು ಬೇಸರದ ಸಂಗತಿ. ಒಮ್ಮೆ ಮಲ್ಟಿಪ್ಲೆಕ್ಸ್‌ಗಳ ಮಾಲೀಕರು ಟಿಕೆಟ್‌ ದರಗಳನ್ನು ಏರಿಸಿದರೆ ಅದನ್ನು ಇಳಿಸುವುದು ಕಡಿಮೆ ಎಂಬುದು ನಿರ್ಮಾಪಕರಿಗೆ ಗೊತ್ತಿಲ್ಲವೇ?

ADVERTISEMENT
ಡಾ.ಜಯಮಾಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ

ಹಳೆಯ ದರವೇ ಇರಲಿ

‘ದಿ ವಿಲನ್’ ಸಿನಿಮಾಕ್ಕಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ಹೆಚ್ಚಿಸಿರುವುದು ಸರಿಯಲ್ಲ. ಸುದೀಪ್ ಮತ್ತು ಶಿವರಾಜ್‌ಕುಮಾರ್ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಹಾಗಂತ ಎಲ್ಲಾ ಅಭಿಮಾನಿಗಳು ₹ 400 ಕೊಟ್ಟು ಸಿನಿಮಾ ನೋಡಲಾಗದು. ಕನ್ನಡದ ಪ್ರೇಕ್ಷಕರು ಹಿಂದಿ ಸಿನಿಮಾಗಳ ಪ್ರೇಕ್ಷಕರಂತೆ ಅಷ್ಟೊಂದು ಹಣ ಖರ್ಚು ಮಾಡಲು ಸಿದ್ಧರಿಲ್ಲ ಅನ್ನೋದಕ್ಕಿಂತ ಸಿನಿಮಾಕ್ಕೆ ನ್ಯಾಯಯುತ ದರ ನಿಗದಿಪಡಿಸಬೇಕು.

ಡಾ.ತೇಜಸ್ವಿನಿ ಹಿರೇಮಠ, ಉಪನ್ಯಾಸಕಿ


ಪ್ರೇಕ್ಷಕರು ನಿರ್ಧರಿಸಲಿ

ಬೇರೆ ಭಾಷೆಯ ಚಿತ್ರಗಳು ಇದೇ ರೀತಿಯ ದರಗಳಲ್ಲಿ ಪ್ರದರ್ಶನ ಕಾಣುತ್ತಿರುವಾಗ ಕನ್ನಡದ ಚಿತ್ರ ಕೂಡ ಅವುಗಳಿಗೆ ಸರಿಸಾಟಿಯಾಗಿ ನಿಲ್ಲಲಿ ಬಿಡಿ. ಚಿತ್ರ ಚೆನ್ನಾಗಿದ್ದರೆ ನೋಡಲೇ ಬೇಕು ಎಂದು ಪ್ರೇಕ್ಷಕರು ನಿರ್ಧರಿಸುತ್ತಾರೆ. ಇಲ್ಲವೇ ಹಾಗೆಯೇ ತಿರಸ್ಕರಿಸುತ್ತಾರೆ.

ಕೆ. ಧನಪಾಲ್, ಬಿಎಂಟಿಸಿ ಸಿಬ್ಬಂದಿ

**

ಸ್ವಾಗತಾರ್ಹ
ಪರಭಾಷಾ ಚಿತ್ರಗಳ ಹಾಗೂ ಕನ್ನಡ ಸಿನಿಮಾಗಳ ಟಿಕೆಟ್ ದರದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಪರಭಾಷಾ ಚಿತ್ರಗಳಿಗೆ ಹೋಲಿಕೆ ಮಾಡುವುದಾದರೆ ವಿಲನ್ ಸಿನಿಮಾದ ಟಿಕೆಟ್ ದರ ಏರಿಕೆ ಮಾಡಿರುವುದು ಸ್ವಾಗತಾರ್ಹ. ಅದರಲ್ಲೂ ಸ್ಯಾಂಡಲ್‌ವುಡ್‌ನ ಇಬ್ಬರು ದಿಗ್ಗಜರು ನಟಿಸಿರುವ ಬಹು ನಿರೀಕ್ಷೆವುಳ್ಳ ಸಿನಿಮಾದ ದರ ಏರಿಕೆ ಹೊಸಬೆಳವಣಿಗೆಯೇ ಸರಿ
ಎಸ್.ಡಿ.ಕವಿತಾ, ಉದ್ಯೋಗಿ

**
ಸಾಧುವಲ್ಲ

ಕನ್ನಡ ಸಿನಿಮಾಗಳನ್ನು ಮೆಲ್ಟಿಪ್ಲೆಕ್ಸ್‌ಗಳಲ್ಲಿ ನೋಡುವವರ ಸಂಖ್ಯೆ ಮೊದಲೇ ಕಡಿಮೆ ಇದೆ. ಜೊತೆಗೆ ಪರಭಾಷಾ ಚಿತ್ರಗಳ ಸ್ಪರ್ಧೆಯನ್ನು ಎದುರಿಸುವ ಶಕ್ತಿ ಕನ್ನಡ ಸಿನಿಮಾಗಳಿಗೆ ಇಲ್ಲದಿರುವ ಸಂದರ್ಭದಲ್ಲಿ ಈ ಪ್ರಯತ್ನ ಸಾಧುವಲ್ಲ.

ಚಿತ್ರ ಚೆನ್ನಾಗಿದ್ದರೆ ಹೆಚ್ಚು ದಿನ ಪ್ರದರ್ಶನ ಕಂಡೇ ಕಾಣುತ್ತದೆ. ಆ ಮೂಲಕ ನಿರ್ಮಾಪಕರು ಲಾಭ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಆದರೆ ನಿರ್ಮಾಪಕರು, ವಿತರಕರು ಟಿಕೆಟ್‌ ದರಗಳನ್ನು ಏರಿಸಿ ಲಾಭ ಮಾಡಿಕೊಳ್ಳಲು ಮುಂದಾಗಿರುವುದು ದುರಾದೃಷ್ಟಕರ.

ಹಂ.ಗು. ರಾಜೇಶ್, ಉಪನ್ಯಾಸಕ
**

ಕ್ರಮ ತೆಗೆದುಕೊಳ್ಳುತ್ತೇವೆ
ಈ ವಿಷಯ ಗಮನಕ್ಕೆ ಬಂದಿದೆ. ಸರ್ಕಾರೀ ಆದೇಶವನ್ನು ಎಲ್ಲರೂ ಪಾಲಿಸಬೇಕು. ಉಲ್ಲಂಘಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇದನ್ನು ವಾಣಿಜ್ಯ ತೆರಿಗೆ ಇಲಾಖೆಯ ಗಮನಕ್ಕೆ ತರಲಾಗುವುದು

ಎನ್.ಆರ್‌. ವಿಶುಕುಮಾರ್‌, ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

**
ಯಥಾಸ್ಥಿತಿ ಕಾಯ್ದುಕೊಳ್ಳಲಿ

ಸುದೀಪ್ ಹಾಗೂ ಶಿವಣ್ಣ ಅವರಿಗೆ ರಾಜ್ಯದಲ್ಲಿ ಪ್ರತ್ಯೇಕ ಅಭಿಮಾನಿಗಳ ವರ್ಗವಿದೆ.ಅವರಿಬ್ಬರ ನಟಿಸಿರುವ ಸಿನಿಮಾಗೆ ದರ ಹೆಚ್ಚಳ ಹೊಡೆತ ಬೀಳುತ್ತದೆ. ಅಭಿಮಾನಿಗಳ ದೃಷ್ಟಿಯಿಂದ ದರದ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದು ಒಳಿತುಸಚಿನ್, ಉದ್ಯೋಗಿ

**

ಸರಿಯಾದ ಕ್ರಮವಲ್ಲ
ಸಿನಿಮಾ ಚೆನ್ನಾಗಿದ್ದರೆ ಖಂಡಿತವಾಗಿಯೂ ನಿರ್ಮಾಪಕ ಹೂಡಿದ ಹಣ ವಾಪಸ್ ಬಂದೇ ಬರುತ್ತದೆ. ಕೇವಲ ದೊಡ್ಡ ಬಜೆಟ್‌ನ ಸಿನಿಮಾದ ನೆಪವೊಡ್ಡಿ ಟಿಕೆಟ್ ದರ ಏರಿಸುವುದು ಸರಿಯಾದ ಕ್ರಮವಲ್ಲ. ಮಲ್ಟಿಫ್ಲೆಕ್ಸ್‌ಗಳಲ್ಲಿ ₹ 400, ಉಳಿದಂತೆ ₹ 150 ನಿಗದಿ ಮಾಡಿರುವುದು ಸರಿಯಾದ ನಿಲುವಲ್ಲ. ಸುದೀಪ್ ಮತ್ತು ಶಿವಣ್ಣ ಅಭಿನಯದ ಸಿನಿಮಾವನ್ನು ಮಲ್ಟಿಫ್ಲೆಕ್ಸ್‌ನಲ್ಲೇ ಕಣ್ತುಂಬಿಕೊಳ್ಳಲು ಕಾತುರಳಾಗಿದ್ದೆ. ದರ ಹೆಚ್ಚಳ ಕೊಂಚ ಬೇಸರ ತರಿಸಿದೆ. ಮಂಜುಳ ಲಮಾಣಿ, ಉದ್ಯೋಗಿ

ಏಕರೂಪ ದರವಿರಲಿ
ಬಜೆಟ್ ನೆಪವೊಡ್ಡಿ ಸಿನಿಮಾ ಟಿಕೆಟ್ ದರ ಹೆಚ್ಚಿಸುವುದು ಸರಿಯಲ್ಲ. ಈಗಾಗಲೇ ಮಲ್ಟಿಫ್ಲೆಕ್ಸ್‌ಗಳಲ್ಲಿ ಕನ್ನಡ ಸಿನಿಮಾಗಳ ದರವೂ 200ರ ಗಡಿ ದಾಟುತ್ತಿದೆ. ದರ ಹೆಚ್ಚಳ ನಿರ್ಧಾರವನ್ನು ಕೈಬಿಡಬೇಕು. ಅದರ ಜೊತೆಗೆ, ಕನ್ನಡ ಚಿತ್ರರಂಗದ ಎಲ್ಲ ಸಿನಿಮಾಗಳ ಟಿಕೆಟ್ ದರ ಹೆಚ್ಚಳ ಮಾಡಿ ಏಕರೂಪ ದರ ನಿಗದಿ ಮಾಡಲಿ

ಪೂಜಾ ಬುದ್ದಿವಂತರ್, ಉದ್ಯೋಗಿ

**
ಅನ್ಯಾಯವಾಗದಿರಲಿ

ರಾಜ್ಯದಲ್ಲಿ ಮಲ್ಟಿಫ್ಲೆಕ್ಸ್‌ಗಳೂ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೀತಿಯ ಪ್ರವೇಶ ದರ ನಿಗದಿಪಡಿಸಿ ಸಿದ್ದರಾಮಯ್ಯ ಸರ್ಕಾರ ಆದೇಶ ಹೊರಡಿಸಿತ್ತು. ತೆರಿಗೆ ಹೊರತುಪಡಿಸಿ ₹ 200 ದರ ನಿಗದಿಪಡಿಸಿತ್ತು. ಈ ಗರಿಷ್ಠ ಮಿತಿ ಕರ್ನಾಟಕದಲ್ಲಿ ಪ್ರದರ್ಶನಗೊಳ್ಳುವ ಎಲ್ಲಾ ಭಾಷೆಗಳ ಚಲನಚಿತ್ರಗಳಿಗೆ ಅನ್ವಯಿಸುತ್ತದೆ. ಆದರೆ ಈ ಗರಿಷ್ಠ ಮಿತಿ ಗೋಲ್ಡ್ ಕ್ಲಾಸ್ ಸ್ಕ್ರೀನ್, ಸೀಟ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿತ್ತು. ಯಾವುದೇ ಕಾರಣಕ್ಕೂ ಟಿಕೆಟ್ ದರ ಪ್ರೇಕ್ಷಕರಿಗೆ ಹೊರೆಯಾಗಬಾರದಷ್ಟೇ.

ಸಾಧನಾ ಅಬ್ರಹಾಂ, ವಕೀಲರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.