ADVERTISEMENT

ಆ್ಯಕ್ಷನ್‌ ಕ್ರೈಂ ಥ್ರಿಲ್ಲರ್‌...‘ಪೆಪೆ’ ಲುಕ್‌

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 19:30 IST
Last Updated 3 ಮಾರ್ಚ್ 2022, 19:30 IST
ಪೆಪೆ ಚಿತ್ರದ ಪೋಸ್ಟರ್
ಪೆಪೆ ಚಿತ್ರದ ಪೋಸ್ಟರ್   

ಲವರ್ ಬಾಯ್ ಇಮೇಜ್‌ನಿಂದ ಹೊರ ಬಂದಿರುವ ದೊಡ್ಮನೆ ಮೂರನೇ ಕುಡಿ ವಿನಯ್ ರಾಜ್ ಕುಮಾರ್ ಅವರು, ‘ಪೆಪೆ’ ಸಿನಿಮಾದಲ್ಲಿ ಮಾಸ್ ಆ್ಯಂಡ್‌ ರಗಡ್ ಲುಕ್‌ನಲ್ಲಿ ಮಿಂಚಿದ್ದಾರೆ. ಈ ಹೊಸ ಪ್ರೊಜೆಕ್ಟ್‌ ಕುರಿತು ‘ಸಿನಿಮಾ ಪುರವಣಿ’ ಜೊತೆ ವಿನಯ್‌ ಮಾತಿಗಿಳಿದು ಹೀಗೆಂದರು...

***

ಮೂರು ವರ್ಷ ತೆರೆ ಮೇಲೆ ಕಾಣಿಸಿಕೊಂಡಿರಲಿಲ್ಲ. ಯಾವ್ಯಾವ ಸಿನಿಮಾ ಬಿಡುಗಡೆಗೆ ಸಜ್ಜಾಗಿವೆ?

ADVERTISEMENT

ಮೂರು ವರ್ಷ ತೆರೆಯ ಮೇಲೆ ಕಾಣಿಸಿಕೊಳ್ಳದೇ ಇರುವುದಕ್ಕೆ ಮುಖ್ಯ ಕಾರಣ ಕೋವಿಡ್‌. ಹೆಚ್ಚಿನ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ ಎಂದಲ್ಲ. ಪುಷ್ಕರ್‌ ಮಲ್ಲಿಕಾರ್ಜುನಯ್ಯ ನಿರ್ಮಾಣದ, ಕರ್ಮ್‌ ಚಾವ್ಲಾ ನಿರ್ದೇಶನದ ‘10’ ಸಿನಿಮಾ ಬಿಡುಗಡೆ ಸಜ್ಜಾಗಿದೆ. ಕೀರ್ತಿ ಅವರು ನಿರ್ದೇಶಿಸಿರುವ ‘ಅಂದೊಂದಿತ್ತು ಕಾಲ’ ಸಿನಿಮಾದ ಚಿತ್ರೀಕರಣವೂ ಪೂರ್ಣಗೊಂಡಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳೂ ಪೂರ್ಣಗೊಂಡಿವೆ. ಇದೂ ಬಿಡುಗಡೆಗೆ ಸಿದ್ಧವಿದೆ. ಕೋವಿಡ್‌ ಕಾರಣದಿಂದ ಇವುಗಳ ಬಿಡುಗಡೆ ವಿಳಂಬವಾಗಿದೆ ಅಷ್ಟೆ. ರಿಲೀಸ್‌ಗೆ ಸೂಕ್ತ ದಿನಾಂಕಕ್ಕೆ ಕಾಯುತ್ತಿದ್ದೇವೆ. ಹೀಗಾಗಿ ತೆರೆಯ ಮೇಲೆ ವಿನಯ್‌ ಕಾಣಿಸಿಕೊಂಡಿಲ್ಲ.

‘ಅಂದೊಂದಿತ್ತು ಕಾಲ’ ಚಿತ್ರದಲ್ಲಿ ನಿರ್ದೇಶಕನ ಪಾತ್ರ ನನ್ನದು. 1990ರಿಂದ 2005ರವರೆಗೆ ನಡೆಯುವ ಚಿತ್ರಕಥೆ ಇದು. ಚಿತ್ರದಲ್ಲಿ ಮೂರು ಲುಕ್‌ ಇವೆ. 16, 21 ಹಾಗೂ 26 ವರ್ಷದ ಯುವಕನಾಗಿ ನಾನು ಕಾಣಿಸಿಕೊಳ್ಳುತ್ತಿದ್ದು, ಇದು ನನಗೆ ಸವಾಲಾಗಿದೆ. ಚಿತ್ರವು ಹಿಂದಿನ ಕಾಲದ ನೆನಪುಗಳನ್ನು ಮೆಲುಕು ಹಾಕುತ್ತದೆ. ಈ ವರ್ಷ ಎರಡು ಸಿನಿಮಾ ಖಂಡಿತಾ ತೆರೆಗೆ ಬರುತ್ತವೆ.

‘ಪೆಪೆ’ ಸಿನಿಮಾ ಬಗ್ಗೆ ನಿರೀಕ್ಷೆ ಏನಿದೆ? ‘ಗ್ರಾಮಾಯಣ’ ಪ್ರೊಜೆಕ್ಟ್‌ ಏನಾಯಿತು?

‘ಗ್ರಾಮಾಯಣ’ ಚಿತ್ರದ ನಿರ್ಮಾಪಕರು ನಿಧನರಾದ ಕಾರಣ, ಈ ಸಿನಿಮಾವನ್ನು ಯಾರು ಮುನ್ನಡೆಸುತ್ತಾರೆ ಎನ್ನುವುದು ತಿಳಿದಿಲ್ಲ. ಸದ್ಯಕ್ಕೆ ಈ ಪ್ರೊಜೆಕ್ಟ್‌ ಸ್ಥಗಿತವಾಗಿದೆ. ಶ್ರೀಲೇಶ್ ಎಸ್. ನಾಯರ್ ಆ್ಯಕ್ಷನ್‌ ಕಟ್ ಹೇಳಿರುವ ‘ಪೆಪೆ’ ಸಿನಿಮಾದ ಶೂಟಿಂಗ್‌ ಅಂತಿಮ ಹಂತದಲ್ಲಿದ್ದು, ಇನ್ನು 15 ದಿನಗಳ ಒಂದು ಶೆಡ್ಯೂಲ್‌ ಬಾಕಿ ಇದೆ. ಶ್ರೀಲೇಶ್‌ ಅವರು ಮೊದಲ ಬಾರಿಗೆ ಕಮರ್ಷಿಯಲ್‌ ಸಿನಿಮಾ ಮಾಡುತ್ತಿದ್ದಾರೆ. ‘ಪೆಪೆ’ ಕಥೆ ಅದ್ಭುತವಾಗಿದೆ. ಮಲೆನಾಡಿನ ಪರಿಸರ, ಅಲ್ಲಿನ ಜೀವನ ಈ ಕಥೆಗೆ ಕನೆಕ್ಟ್‌ ಆಗಿದೆ. ಇದರಲ್ಲಿನ ಎಲ್ಲ ಪಾತ್ರಗಳಿಗೂ ಪ್ರಾಮುಖ್ಯತೆ ಇದೆ. ಜೊತೆಗೆ ಒಂದು ಕಾರಣವೂ ಈ ಪಾತ್ರಗಳ ಹಿಂದಿದೆ. ಆ್ಯಕ್ಷನ್‌ ಕ್ರೈಂ ಥ್ರಿಲ್ಲರ್‌ ಡ್ರಾಮಾ ಇದಾಗಿದ್ದು, ಸಾಮಾಜಿಕ ಸಂದೇಶವೂ ಇದರಲ್ಲಿದೆ.

ಕೋವಿಡ್‌ ಅವಧಿಯಲ್ಲಿ ಸಿಕ್ಕ ಬಿಡುವಿನಲ್ಲಿ ವಿನಯ್‌ ಕಲಿತದ್ದೇನು?

‘ಪೆಪೆ’ಯಲ್ಲಿನ ಪಾತ್ರಕ್ಕಾಗಿ ದೈಹಿಕವಾಗಿ ನಾನು ಕೊಂಚ ಬದಲಾದೆ. ಈ ಪಾತ್ರಕ್ಕಾಗಿ ಗಡ್ಡ ಬಿಟ್ಟು, ನೈಜ ಲುಕ್‌ನಲ್ಲಿ ನಾನು ಕಾಣಿಸಿಕೊಂಡೆ. ಜೊತೆಗೆ ಜೀವನ ಹಾಗೂ ವೃತ್ತಿ ಜೀವನದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಸಿಕ್ಕಿತು. ಈ ಅವಧಿಯಲ್ಲಿ ನನ್ನನ್ನು ನಾನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡೆ. ಇದೇ ರೀತಿಯ ಸಿನಿಮಾ, ಈ ರೀತಿಯ ಪಾತ್ರವನ್ನೇ ಮಾಡಬೇಕು ಎನ್ನುವ ಆಸೆ ನನಗಿಲ್ಲ. ಇದನ್ನು ಅರ್ಥೈಸಿಕೊಂಡೆ. ಕಥೆ ಕೇಳುವಾಗ ಯಾವ ರೀತಿಯ ನಿರೀಕ್ಷೆಯೂ ನನಗಿಲ್ಲ. ಈ ರೀತಿ ನಿರೀಕ್ಷೆ ಇದ್ದಾಗ ಕಷ್ಟವಾಗುತ್ತದೆ. ಎಲ್ಲ ಕಥೆಗಳಿಗೂ ತೆರೆದುಕೊಂಡಾಗ ಆಯ್ಕೆ ಸುಲಭವಾಗುತ್ತದೆ.

ಚಂದನವನದಲ್ಲಿ ಇತ್ತೀಚೆಗೆ ಗ್ರಾಮೀಣ ಭಾಗ ಕಥಾವೇದಿಕೆ ಆಗುತ್ತಿರುವುದರ ಕುರಿತು ಏನು ಹೇಳುತ್ತೀರಿ?

ಕರ್ನಾಟಕದಲ್ಲಿ ಆಯಾ ಭಾಗದ ಜೀವನ ಕಥನ, ಭಾವನೆ, ಘಟನೆ ಬೇರೆ ಬೇರೆಯದ್ದಾಗಿರುತ್ತದೆ. ರಾಜ್ಯದಲ್ಲಿ ಸಿನಿಮಾ ಕಥೆಗಾಗಿ ಅನ್ವೇಷಣೆ ಮಾಡಬೇಕಾದ ಜಾಗಗಳು ಇನ್ನೂ ಹಲವಿವೆ. ಇದನ್ನು ನಾವು ಮೊದಲು ಅರಿತು ಅನ್ವೇಷಣೆಗಿಳಿಯಬೇಕು. ನಾನೂ ಇಲ್ಲಿಯವರೆಗೆ ಮಾಡಿದ ಪಾತ್ರಗಳಿಗಿಂತ ಭಿನ್ನವಾದ ಪಾತ್ರ ‘ಗ್ರಾಮಾಯಣ’ ಹಾಗೂ ‘ಪೆಪೆ’ಯಲ್ಲಿ ದೊರಕಿದೆ. ನನ್ನೊಳಗಿನ ಕಲಾವಿದನಿಗೂ ಹೆಚ್ಚು ಅನ್ವೇಷಣೆ ಮತ್ತು ನಟನೆ ಮಾಡಲು ಈ ಎರಡೂ ಪಾತ್ರಗಳು ಅವಕಾಶ ನೀಡಿದವು.

ಚಂದನವನದಲ್ಲಿ ಒಳ್ಳೊಳ್ಳೆ ಕಥೆಗಳು ಬರುತ್ತಿವೆ. ಯಾವ ಸಿನಿಮಾವನ್ನೂ ಒಳ್ಳೆಯ ಸಿನಿಮಾ ಅಥವಾ ಕೆಟ್ಟ ಸಿನಿಮಾ ಎನ್ನಲು ಸಾಧ್ಯವಿಲ್ಲ. ಎಲ್ಲ ಸಿನಿಮಾಗಳನ್ನೂ ಕಷ್ಟಪಟ್ಟು, ಉತ್ಸಾಹದಿಂದ ಮಾಡಿರುತ್ತಾರೆ. ಸೋಲು ಗೆಲುವು ನಮ್ಮ ಕೈಯಲ್ಲಿಲ್ಲ. ಪ್ರಸ್ತುತ ಬರುತ್ತಿರುವ ಎಲ್ಲ ಸಿನಿಮಾಗಳ ಕಥೆ, ನಿರೂಪಣೆ, ಪ್ರೇಕ್ಷಕರ ಎದುರಿಗೆ ಇಡುವ ಶೈಲಿಯಲ್ಲಿ ಗುಣಮಟ್ಟವಿದೆ. ಈ ಹಿಂದೆ ದೊಡ್ಡ ಸಿನಿಮಾಗಳಲ್ಲಷ್ಟೇ ಗುಣಮಟ್ಟವಿದೆ ಎಂದುಕೊಳ್ಳುತ್ತಿದ್ದೆವು. ಆದರೆ ಸಣ್ಣ ಬಜೆಟ್‌ ಸಿನಿಮಾಗಳಲ್ಲೂ ಈಗ ಗುಣಮಟ್ಟವಿದೆ. ನಿರ್ದೇಶಕರು, ಪಾತ್ರ ವರ್ಗ ಅಥವಾ ಒಟ್ಟು ಚಿತ್ರತಂಡದ ಉತ್ಸಾಹ ಇಲ್ಲಿ ಮುಖ್ಯ. ಈ ಬೆಳವಣಿಗೆ ನನಗೆ ವೈಯಕ್ತಿಕವಾಗಿ ಸಂತೋಷ ತಂದಿದೆ.

ಪುನೀತ್‌ ರಾಜ್‌ಕುಮಾರ್‌ ಅವರನ್ನು ನೆನಪಿಸಿಕೊಂಡರೆ...

ಹೊಸ ಪ್ರೊಜೆಕ್ಟ್‌ಗಳನ್ನು ಒಪ್ಪಿಕೊಂಡಿದ್ದೇನೆ. ನನ್ನ ಸಿನಿಮಾ ಪಯಣದ ಪ್ರತಿ ಹೆಜ್ಜೆಯಲ್ಲೂ ಪ್ರೀತಿಯ ಚಿಕ್ಕಪ್ಪ ‘ಅಪ್ಪು’ ಅವರು ಜೊತೆಗಿರುತ್ತಾರೆ. ಇಷ್ಟೇ ಹೇಳಬಯಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.