ADVERTISEMENT

'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ಚಿತ್ರದ ನಿರ್ದೇಶಕರಿಗೆ ಕೋಲ್ಕತ್ತ ಪೊಲೀಸರಿಂದ ಸಮನ್ಸ್

ಐಎಎನ್ಎಸ್
Published 26 ಮೇ 2023, 9:46 IST
Last Updated 26 ಮೇ 2023, 9:46 IST
'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ಚಿತ್ರದ ದೃಶ್ಯ
'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ಚಿತ್ರದ ದೃಶ್ಯ   

ಕೋಲ್ಕತ್ತ: 'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ಸಿನಿಮಾದ ಕಥೆಗಾರ ಹಾಗೂ ನಿರ್ದೇಶಕರಾಗಿರುವ ಸನೋಜ್‌ ಮಿಶ್ರಾ ಅವರಿಗೆ ಕೋಲ್ಕತ್ತ ಪೊಲೀಸರು ಸಮನ್ಸ್‌ ಜಾರಿಗೊಳಿಸಿದ್ದು, ಮೇ 30ರಂದು ನಗರ ಪೊಲೀಸ್‌ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಸಿನಿಮಾದ ಟ್ರೇಲರ್‌ ಇತ್ತೀಚೆಗೆ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಉದ್ದೇಶಪೂರ್ವಕವಾಗಿ ರಾಜ್ಯದ ಹೆಸರು ಕೆಡಿಸುವ ಪ್ರಯತ್ನ ನಡೆಸಿರುವಂತೆ ಟ್ರೇಲರ್‌ ಮೂಡಿಬಂದಿದೆ ಎಂದು ಆರೋಪಿಸಿ ಮೇ 11ರಂದು ದೂರು ನೀಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

'ಈ ವಿಚಾರವಾಗಿ ನಡೆದ ಪ್ರಾಥಮಿಕ ತನಿಖೆಯ ಬಳಿಕ, ಸಿನಿಮಾದ ನಿರ್ದೇಶಕರನ್ನು ವಿಚಾರಣೆಗೆ ಒಳಪಡಿಸಲು ಸಾಕಷ್ಟು ಆಧಾರಗಳು ಇವೆ ಎಂದು ನಗರದ ಉನ್ನತಾಧಿಕಾರಿಗಳು ಭಾವಿಸಿದ್ದಾರೆ. ಹಾಗಾಗಿ ನೋಟಿಸ್‌ ನೀಡಲಾಗಿದ್ದು, ಮೇ 30ರ ಮಧ್ಯಾಹ್ನ 12ಕ್ಕೆ ಅಮ್ಹೆರ್ಸ್ಟ್‌ ರಸ್ತೆಯಲ್ಲಿರುವ ಠಾಣೆಗೆ ಹಾಜರಾಗುವಂತೆ ತಿಳಿಸಲಾಗಿದೆ' ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 41ಎ ಅಡಿಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದೆ.

ಇತ್ತೀಚೆಗೆ ತೆರೆಕಂಡಿದ್ದ 'ದಿ ಕೇರಳ ಸ್ಟೋರಿ' ಸಿನಿಮಾದ ಕಥೆಯು ಕೋಮು ಸಾಮರಸ್ಯಕ್ಕೆ ಹಾನಿ ಮಾಡುವಂತಿದೆ ಎಂದು ಹೇಳಿದ್ದ ಪಶ್ಚಿಮ ಬಂಗಾಳ ಸರ್ಕಾರ, ರಾಜ್ಯದಲ್ಲಿ ಚಿತ್ರ ಪ್ರದರ್ಶನ ನಿಷೇಧಿಸಿ ಸುದ್ದಿಯಾಗಿತ್ತು. ಸರ್ಕಾರದ ಕ್ರಮ ವಿರೋಧಿಸಿ ನಿರ್ದೇಶಕ ಸುಬ್ರತಾ ಸೇನ್‌ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ನಂತರ ನಿಷೇಧವನ್ನು ಹಿಂಪಡೆಯಲಾಯಿತ್ತು.

ಸರ್ಕಾರದ ಕ್ರಮವನ್ನು ವಿರೋಧ ಪಕ್ಷಗಳು, ನಾಗರಿಕರು, ಸೆಲೆಬ್ರಿಟಿಗಳು ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.