ADVERTISEMENT

ಯಶ್‌ ನಟನೆಯ ಕೆ.ಜಿ.ಎಫ್‌–2: ಮಾರ್ಚ್‌ 27ಕ್ಕೆ ಟ್ರೇಲರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 10:07 IST
Last Updated 3 ಮಾರ್ಚ್ 2022, 10:07 IST
ಕೆ.ಜಿ.ಎಫ್‌ 2 ಪೋಸ್ಟರ್‌
ಕೆ.ಜಿ.ಎಫ್‌ 2 ಪೋಸ್ಟರ್‌   

ಚಂದನವನದ ಬಹುನಿರೀಕ್ಷಿತ ಬಿಗ್‌ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾ, ಯಶ್‌ ನಟನೆಯ ಕೆ.ಜಿ.ಎಫ್‌–2 ಸಿನಿಮಾದ ಟ್ರೇಲರ್‌ ಯಾವಾಗ ಬಿಡುಗಡೆ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಉತ್ತರ ದೊರಕಿದೆ.

ಪ್ರಶಾಂತ್‌ ನೀಲ್‌ ನಿರ್ದೇಶನದ ಈ ಸಿನಿಮಾದ ಎರಡನೇ ಭಾಗದ ಟ್ರೇಲರ್‌ ಮಾ.27ರಂದು ಸಂಜೆ 6.40ಕ್ಕೆ ಬಿಡುಗಡೆಯಾಗಲಿದೆ.

ಏಪ್ರಿಲ್‌ 14ರಂದು ಈ ಸಿನಿಮಾ ತೆರೆ ಕಾಣುತ್ತಿದ್ದು, ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಅಂತಿಮ ಹಂತದಲ್ಲಿದೆ. ಚಿತ್ರದಲ್ಲಿ ‘ರಮಿಕಾ ಸೇನ್‌’ ಎಂಬ ಪ್ರಧಾನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಬಾಲಿವುಡ್‌ ನಟಿ ರವೀನಾ ಟಂಡನ್‌ ಇತ್ತೀಚಗೆಷ್ಟೇ ತಮ್ಮ ಪಾತ್ರದ ಡಬ್ಬಿಂಗ್‌ ಪೂರ್ಣಗೊಳಿಸಿದ್ದರು. ಚಿತ್ರತಂಡವು ಈಗಾಗಲೇ ಪ್ರಚಾರವನ್ನು ಆರಂಭಿಸಿದೆ. ಕೇರಳದಲ್ಲಿ ನಟ ಪೃಥ್ವಿರಾಜ್‌ ಅವರ ಪೃಥ್ವಿರಾಜ್‌ ಪ್ರೊಡಕ್ಷನ್ಸ್‌ ಸಂಸ್ಥೆಯು ಕೆ.ಜಿ.ಎಫ್‌–2 ಸಿನಿಮಾವನ್ನು ವಿತರಣೆ ಮಾಡಲಿದೆ.

ADVERTISEMENT

ಹೊಂಬಾಳೆ ಫಿಲಂಸ್‌ ಬ್ಯಾನರ್‌ನಡಿ ವಿಜಯ್‌ ಕಿರಗಂದೂರು ನಿರ್ಮಾಣ ಮಾಡುತ್ತಿರುವ ‘ಕೆ.ಜಿ.ಎಫ್‌–2’ ಚಿತ್ರದಲ್ಲಿ ‘ಅಧೀರ’ ಎಂಬ ಪಾತ್ರಕ್ಕೆ ಬಾಲಿವುಡ್‌ ನಟ ಸಂಜಯ್‌ ದತ್‌ ಬಣ್ಣಹಚ್ಚಿದ್ದಾರೆ.

ಕಳೆದ ವರ್ಷದ ಜುಲೈನಲ್ಲೇ ಬಿಡುಗಡೆಯಾಗಬೇಕಿದ್ದ ‘ಕೆಜಿಎಫ್‌–2’ ಚಿತ್ರವು ಕೋವಿಡ್‌ ಎರಡನೇ ಅಲೆಯ ಕಾರಣದಿಂದಾಗಿ ಮುಂದಕ್ಕೆ ಹೋಗಿತ್ತು. ಚಿತ್ರದ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಬಣ್ಣಹಚ್ಚಿದ್ದು, ಪ್ರಕಾಶ್‌ ರೈ, ಮಾಳವಿಕಾ ಅವಿನಾಶ್‌, ಬಿ.ಸುರೇಶ್‌, ಯಶ್‌ ಶೆಟ್ಟಿ, ಅರ್ಚನಾ ಜೋಯಿಷ್‌, ಅಯ್ಯಪ್ಪ ಪಿ.ಶರ್ಮ ಇನ್ನಿತರರು ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.