ADVERTISEMENT

ಸರ್ವಕಾಲಕ್ಕೂ ಹೊಂದುವ ‘ಯಥಾ ತಥಾ’

ಸತೀಶ ಬೆಳ್ಳಕ್ಕಿ
Published 23 ಅಕ್ಟೋಬರ್ 2018, 20:01 IST
Last Updated 23 ಅಕ್ಟೋಬರ್ 2018, 20:01 IST
ವಿಜಯ್‌ ಮಯ್ಯ
ವಿಜಯ್‌ ಮಯ್ಯ   

ಈ ಹಿಂದೆ ‘ಮಾ’ ಎಂಬ ಒಂಭತ್ತು ನಿಮಿಷದ ಕಿರುಚಿತ್ರವನ್ನು ತಯಾರಿಸಿ ವಿಶ್ವವಿಖ್ಯಾತಿ ಪಡೆದಿದ್ದ ಅಜ್ನಾ ಕ್ರಿಯೇಷನ್ಸ್‌ ತಂಡದ ಹುಡುಗರು ಈಗ ನಾಲ್ಕು ನಿಮಿಷದ ‘ಯಥಾ ತಥಾ’ ಎಂಬ ಕಿರುಚಿತ್ರವನ್ನು ತಯಾರಿಸಿದ್ದು, ಶೀಘ್ರದಲ್ಲೇ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡುವ ಸಿದ್ಧತೆ ನಡೆಸಿದ್ದಾರೆ.

‘ಅಜ್ನಾ ಕ್ರಿಯೇಷನ್ಸ್‌’ ಎಂಬುದು ಐವರು ಉತ್ಸಾಹಿ ತರುಣರ ಕನಸಿನ ಕೂಸು. ಸದಾಕಾಲ ಸಿನಿಮಾವನ್ನೇ ಧ್ಯೇನಿಸುವ ತಂಡದ ತರುಣರೆಲ್ಲರೂ ರಂಗಭೂಮಿಯಿಂದ ಬಂದವರು. ತುಳುಸಿನಿಮಾ ‘ಕಟಪಾಡಿ ಕಟ್ಟಪ್ಪ’ ಚಿತ್ರದ ನಿರ್ದೇಶಕ ಜೆ.ಪಿ.ತುಮಿನಾಡು, ‘ಜ್ಯೋತಿ ಸರ್ಕಲ್‌’ ಎಂಬ ತುಳು ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿರುವ ರಾಜೇಶ್‌ ಕೆ.ಬಂದ್ಯೋದ್‌, ಸಹ ನಿರ್ದೇಶಕ, ಸಂಭಾಷಣೆಕಾರರಾಗಿ ಗುರುತಿಸಿಕೊಂಡಿರುವ ಪ್ರತೀಕ್‌ ಅತ್ತಾವರ, ನಟರಾಗಿ ಮಿಂಚುತ್ತಿರುವ ವಿಜಯ್‌ ಮಯ್ಯ ಹಾಗೂ ಸೂರಜ್‌ ಸಾಲಿಯಾನ್‌ ಅವರು ಒಟ್ಟುಗೂಡಿ ಕಟ್ಟಿರುವ ಈ ತಂಡಕ್ಕೆ ಈಗ ಎರಡು ವರ್ಷದ ಪ್ರಾಯ.

‘‘ಅಜ್ನಾ’ ಅಂದರೆ ಶಿವನ ಮೂರನೇ ಕಣ್ಣು ಎಂದರ್ಥ. ನಮ್ಮ ಟೀಂನಲ್ಲಿರುವ ಐವರಿಗೂ ಸಾವಿರಾರು ಕನಸುಗಳಿವೆ. ನಾವೆಲ್ಲರೂ ಪ್ರತಿನಿತ್ಯ ಕಾಣುವುದು ಸಿನಿಮಾ ಕನಸನ್ನೇ! ಜನರಿಗೆ ಇಷ್ಟವಾಗುವಂತಹ ಹೊಸ ಬಗೆಯ ಸಿನಿಮಾ ಹಾಗೂ ಕಿರುಚಿತ್ರಗಳನ್ನು ರೂಪಿಸಬೇಕು ಎಂಬುದು ತಂಡದ ಹೆಬ್ಬಯಕೆ. ಅದಕ್ಕಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ. ಅಜ್ನಾ ಕ್ರಿಯೇಷನ್ಸ್‌ನ ಪ್ರಥಮ ಕಿರುಚಿತ್ರ ‘ಮಾ’. ಇದನ್ನು ಜೆ.ಪಿ.ತುಮಿನಾಡು ನಿರ್ದೇಶಿಸಿದ್ದರು. ಈ ಕಿರುಚಿತ್ರಕ್ಕೆ ದೇಶ–ವಿದೇಶಗಳ ಜನರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ‘ಯಥಾ ತಥಾ’ ಕಿರುಚಿತ್ರ ನಮ್ಮ ಕ್ರಿಯೇಷನ್ಸ್‌ನಿಂದ ರೂಪುಗೊಂಡಿರುವ ಎರಡನೇ ಕಿರುಚಿತ್ರ. ಇದನ್ನು ಪ್ರತೀಕ್‌ ಅತ್ತಾವರ್‌ ನಿರ್ದೇಶನ ಮಾಡಿದ್ದಾರೆ. ಕತೆ, ಸಂಭಾಷಣೆ ಕೂಡ ಅವರದ್ದೇ’’ ಎನ್ನುತ್ತಾರೆ ತಂಡದ ಸದಸ್ಯರಲ್ಲಿ ಒಬ್ಬರಾದ ವಿಜಯ್‌ ಮಯ್ಯ. ಅಂದಹಾಗೆ, ಇವರು ‘ಐಸ್‍ಕ್ರೀಂ’ ಸಿನಿಮಾದಲ್ಲಿ ನಿರ್ವಹಿಸಿದ್ದ ಖಳನಟನ ಪಾತ್ರಕ್ಕೆ ‘ಬೆಸ್ಟ್ ವಿಲನ್’ ಅವಾರ್ಡ್ ಪಡೆದುಕೊಂಡಿದ್ದಾರೆ.

ADVERTISEMENT

‘ಯಥಾ ರಾಜ ತಥಾ ಪ್ರಜಾ’ ಎಂಬ ನಾಣ್ಣುಡಿಯನ್ನು ಎಷ್ಟು ಉಜ್ಜಿದರೂ ಕ್ಲೀಷೆ ಅಂತ ಅನ್ನಿಸುವುದಿಲ್ಲ. ಅದರ ತಾತ್ಪರ್ಯ ಸರ್ವ ಕಾಲಕ್ಕೂ ಅನ್ವಯಿಸುವಂತದ್ದು. ಇದೇ ಪರಿಕಲ್ಪನೆಯನ್ನು ಇಟ್ಟುಕೊಂಡು ನಿರ್ದೇಶಕ ಪ್ರತೀಕ್‌ ಅತ್ತಾವರ್‌ ‘ಯಥಾ ತಥಾ’ ಎಂಬ ಕಿರುಚಿತ್ರ ರೂಪಿಸಿದ್ದಾರೆ. ಇದು ಅವರ ನಿರ್ದೇಶನದ ಮೊದಲ ಕಿರುಚಿತ್ರ.

‘‘ಈ ಕಿರುಚಿತ್ರದಲ್ಲಿ ಇರುವುದು ಎರಡು ‍ಪಾತ್ರಗಳು ಮಾತ್ರ. ಇದರಲ್ಲಿ ಬರುವ ಅಪ್ಪನ ಪಾತ್ರವನ್ನು ‘ಒಂದು ಮೊಟ್ಟೆಯ ಕಥೆ’ ಖ್ಯಾತಿಯ ಕಲಾವಿದ ಪ್ರಕಾಶ್‌ ಕೆ.ತುಮಿನಾಡು ಹಾಗೂ ಮಗನ ಪಾತ್ರವನ್ನು ‘ಮಜಾ ಭಾರತ’ ಖ್ಯಾತಿಯ ಅತೀಶ್‌ ಶೆಟ್ಟಿ ನಿರ್ವಹಿಸಿದ್ದಾರೆ. ನಾಲ್ಕು ನಿಮಿಷದ ಕಿರುಚಿತ್ರದಲ್ಲಿ ಸಮಾಜಕ್ಕೆ ಒಂದು ಸಂದೇಶ ದಾಟಿಸುವ ಪ್ರಯತ್ನ ಮಾಡಿದ್ದೇನೆ. ಅಂದರೆ, ಮನೆಯಲ್ಲಿನ ಮಕ್ಕಳು ದೊಡ್ಡವರನ್ನು ನೋಡುತ್ತಾ, ಅನುಕರಿಸುತ್ತಾ ಬೆಳೆಯುತ್ತಾರೆಯೇ ಹೊರತು; ಹಿರಿಯರು ಹೇಳುವ ಬೋಧನೆಯನ್ನು ಕೇಳಿಕೊಂಡಲ್ಲ. ತಂದೆ ತನ್ನ ಮಗನಿಗೆ ಅದು ಮಾಡಬೇಡ, ಇದು ಮಾಡಬೇಡ ಎಂದು ಬೋಧನೆ ಮಾಡುತ್ತಾನೆ. ಆದರೆ, ಆತ ಹೇಳುವ ವಿಚಾರಗಳನ್ನು ಸ್ವತಃ ಅವನೇ ಆಚರಣೆ ಮಾಡುವುದಿಲ್ಲ. ಹೀಗಿದ್ದಾಗ ಏನಾಗುತ್ತದೆ ಎಂಬುದೇ ಈ ಕಿರುಚಿತ್ರದ ಹೂರಣ’’ ಎನ್ನುತ್ತಾರೆ ಪ್ರತೀಕ್‌.

240 ಸೆಕೆಂಡ್‌ನ ಈ ಕಿರುಚಿತ್ರದ ಕತೆಯ ಕುರಿತು ಪ್ರತೀಕ್‌ ಹೇಳುವುದು ಹೀಗೆ: ‘ಒಂದು ಮನೆ. ಗೋಡೆಯ ಮೇಲೆ ನೇತುಹಾಕಿರುವ ಟೀವಿಯಲ್ಲಿ ಚಿತ್ರವೊಂದು ಪ್ರಸಾರಗೊಳ್ಳುತ್ತಿದೆ. ಟೀವಿ ಮುಂದೆ ಪುಸ್ತಕ ಹಿಡಿದುಕೊಂಡು ಕುಳಿತಿರುವ ಹುಡುಗ ನೋಡುವ ಮತ್ತು ಓದುವ ಕೆಲಸವನ್ನು ಏಕಕಾಲಕ್ಕೆ ಮಾಡುತ್ತಿರುತ್ತಾನೆ. ಆಗ ಮನೆಗೆ ತಂದೆಯ ಪ್ರವೇಶವಾಗುತ್ತದೆ. ಟೀವಿ ನೋಡುತ್ತಾ ಓದಲು ಕುಳಿತಿರುವ ಮಗನನ್ನು ಕಂಡು ಅಪ್ಪ ಗದರಿ ಬುದ್ಧಿ ಹೇಳಲು ಶುರು ಮಾಡುತ್ತಾನೆ. ಆದರೆ, ಮಗನಿಗೆ ಅಪ್ಪನ ಬೋಧನೆಯ ಮಾತುಗಳ್ಯಾವು ಮನಕ್ಕೆ ಮುಟ್ಟುವುದಿಲ್ಲ. ಅಷ್ಟರಲ್ಲಿ ಅಪ್ಪನಿಗೆ ಫೋನ್‌ ಕಾಲ್‌ ಬರುತ್ತದೆ. ಹಲೋ ಹೇಳುತ್ತಾ ಹೊರಕ್ಕೆ ಹೋಗಿ ತುಟಿಗೆ ಸಿಗರೇಟ್‌ ಇಟ್ಟು ಬೆಂಕಿಕಡ್ಡಿ ಗೀರಿ, ಹೊಗೆಯನ್ನು ಉಫ್‌ ಎಂದು ಹೊರಕ್ಕೆ ಬಿಡುತ್ತಾನೆ. ಮಗ ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾನೆ. ಅಪ್ಪ ಹೊರಗಡೆ ಫೋನ್‌ನಲ್ಲಿ ಮಾತನಾಡುತ್ತಾ ಹೊಗೆ ಬಿಡುತ್ತಾ ನಿಂತಿದ್ದರೆ, ಒಳಗೆ ಮಗ ಕೂಡ ಸಿಗರೇಟ್‌ ತುಟಿಗಿಟ್ಟು ಧಮ್‌ ಎಳೆಯುತ್ತಾನೆ. ಅಲ್ಲಿಗೆ ಕಿರುಚಿತ್ರ ಕೊನೆಗೊಳ್ಳುತ್ತದೆ’.

ಅಂದರೆ, ಮಕ್ಕಳು ತಂದೆ ಹೇಳುವುದನ್ನು ಕೇಳುವುದಕ್ಕಿಂತಲೂ, ಅವರು ಏನು ಮಾಡುತ್ತಿದ್ದಾರೆ ಎಂಬುದನ್ನು ತುಂಬ ಸೂಕ್ಷ್ಮವಾಗಿ ಗಮನಿಸುತ್ತಾರೆ ಮತ್ತು ಅದರಂತೆಯೇ ನಡೆಯುತ್ತಾರೆ. ಇದನ್ನು ಈ ಕಿರುಚಿತ್ರದಲ್ಲಿ ತೋರಿಸಲಾಗಿದೆ. ಒಂದು ವಿಷಯವನ್ನು ಚಿಕ್ಕದಾಗಿ, ಚೊಕ್ಕವಾಗಿ ಹಾಗೂ ಪರಿಣಾಮಕಾರಿಯಾಗಿ ಹೇಳಲು ಕಿರುಚಿತ್ರಗಳಿಗಿಂತ ದೊಡ್ಡ ಮಾಧ್ಯಮ ಬೇರೊಂದಿಲ್ಲ. ಈ ಕಾರಣಕ್ಕಾಗಿಯೇ ನಾನು ಕಿರುಚಿತ್ರಗಳ ತಯಾರಿಯಲ್ಲಿ ತೊಡಗಿಸಿಕೊಂಡಿದ್ದೇನೆ ಎನ್ನುವ ಪ್ರತೀಕ್‌ಗೆ ಮುಂದೆ ಸಿನಿಮಾಗಳನ್ನು ನಿರ್ದೇಶಿಸುವ ಕನಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.