ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ 'ಎಕ್ಕ' ಚಿತ್ರ ತಂಡ
(ಚಿತ್ರ–@siddaramaiah)
ಬೆಂಗಳೂರು: ನಟ ಯುವ ರಾಜ್‌ಕುಮಾರ್ ಹಾಗೂ ‘ಎಕ್ಕ’ ಚಿತ್ರ ತಂಡದವರು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.
ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಸಿನಿಮಾ ಜುಲೈ 18ರಂದು ತೆರೆಗೆ ಬರಲಿದೆ. ಅದಕ್ಕೂ ಮುನ್ನ ನಡೆಯಲಿರುವ ಪ್ರೀಮಿಯರ್ ಶೋ ವೀಕ್ಷಣೆಗೆ ಆಗಮಿಸುವಂತೆ ಚಿತ್ರತಂಡ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದೆ.
ಮುಖ್ಯಮಮತ್ರಿ ಸಿದ್ದರಾಮಯ್ಯ ಹಾಗೂ ನಟ ಯುವ ರಾಜ್‌ಕುಮಾರ್
'ನಟ ಯುವ ರಾಜ್‌ಕುಮಾರ್ ಅವರು ಕಾವೇರಿ ನಿವಾಸದಲ್ಲಿ ನನ್ನನ್ನು ಭೇಟಿಯಾಗಿ, ಜುಲೈ 18ರಂದು ತೆರೆ ಕಾಣಲಿರುವ ತಾವು ನಾಯಕನಟನಾಗಿ ಅಭಿನಯಿಸಿರುವ 'ಎಕ್ಕ' ಸಿನಿಮಾ ಪ್ರೀಮಿಯರ್ ಶೋ ವೀಕ್ಷಣೆಗೆ ಆಗಮಿಸುವಂತೆ ಪ್ರೀತಿಯಿಂದ ಆಹ್ವಾನಿಸಿದರು. ರಾಜ್‌ಕುಮಾರ್ ಅವರ ಕುಟುಂಬದ ಜೊತೆಗಿನ ನನ್ನ ಒಡನಾಟ ನಾಲ್ಕೈದು ದಶಕಗಳಷ್ಟು ಹಳೆಯದು. ರಾಘವೇಂದ್ರ ರಾಜ್‌ಕುಮಾರ್, ಶಿವಣ್ಣ ಮತ್ತು ಅಪ್ಪು ತಮ್ಮ ತಂದೆಯಂತೆ ಅಭಿನಯದಲ್ಲಿ ಮಾತ್ರವಲ್ಲ, ಸಾಮಾಜಿಕ ಕಳಕಳಿಯಲ್ಲೂ ಎತ್ತಿದ ಕೈ. ರಾಜಣ್ಣನ ಕುಟುಂಬದ ಮೂರನೇ ತಲೆಮಾರು ಅದೇ ಹಾದಿಯಲ್ಲಿ ಹೆಜ್ಜೆಹಾಕಲು ಆರಂಭಿಸಿದ್ದು ಕಂಡು ಖುಷಿಯಾಯಿತು' ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ರತ್ನನ್ ಪ್ರಪಂಚ’ ಖ್ಯಾತಿಯ ರೋಹಿತ್ ಪದಕಿ ನಿರ್ದೇಶನದ, ಯುವ ರಾಜ್‌ಕುಮಾರ್ ನಟನೆಯ ‘ಎಕ್ಕ’ ಸಿನಿಮಾ ಜುಲೈ 18ರಂದು ತೆರೆಕಾಣಲಿದೆ. ‘ಯುವ’ ಸಿನಿಮಾ ಬಳಿಕ ಯುವ ನಟಿಸಿರುವ ಸಿನಿಮಾ ಇದಾಗಿದೆ.
ಈಗಾಗಲೇ ಟೀಸರ್ ಹಾಗೂ ಟೈಟಲ್ ಟ್ರ್ಯಾಕ್ ಮೂಲಕ ಚಂದನವನದಲ್ಲಿ ಸದ್ದು ಮಾಡಿದೆ ಈ ಸಿನಿಮಾ. ‘ಜಾಕಿ’ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡಿದ್ದ ಸ್ಟೈಲ್‌ನಲ್ಲೇ ‘ಎಕ್ಕ’ ಸಿನಿಮಾದ ಟೀಸರ್‌ನಲ್ಲಿ ಯುವ ಕಾಣಿಸಿಕೊಂಡಿದ್ದರು.
ಬೆಂಗಳೂರು ಭೂಗತ ಜಗತ್ತಿನ ಕಥೆಯನ್ನು ಹೊಂದಿರುವ ಈ ಸಿನಿಮಾದಲ್ಲಿ ಸಂಪದಾ ಹಾಗೂ ‘ಸಲಗ’ ಸಿನಿಮಾ ಖ್ಯಾತಿಯ ಸಂಜನಾ ಆನಂದ್ ನಾಯಕಿಯರಾಗಿ ನಟಿಸಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೊಸ್ ಹಾಗೂ ಜಯಣ್ಣ ಕಂಬೈನ್ಸ್ ಬ್ಯಾನರ್‌ಗಳ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.
ಚಿತ್ರದ ‘ಬ್ಯಾಂಗಲ್ ಬಂಗಾರಿ’ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ. ಶುಕ್ರವಾರ (ಜುಲೈ–11) ಟ್ರೇಲರ್ ಬಿಡುಗಡೆಯಾಗಿದ್ದು, ಅದು ಕೂಡ ಸಾಕಷ್ಟು ಸದ್ದು ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.