ADVERTISEMENT

ಹಲೋ ಕಾಣಸ್ತಿದ್ಯಾ?

ಗಾಣಧಾಳು ಶ್ರೀಕಂಠ
Published 19 ಏಪ್ರಿಲ್ 2020, 19:33 IST
Last Updated 19 ಏಪ್ರಿಲ್ 2020, 19:33 IST
ಸುಂದರ್
ಸುಂದರ್    

‘ಹಲೋ... ಕಾಣಸ್ತಿದ್ಯಾ...?’

ಹೀಗಂದ ಕೂಡಲೇ, ‘ಏನ್ ಕಾಣಿಸಬೇಕು, ನಾವು ಏನ್‌ ನೋಡಬೇಕು‘ ಅಂತ ಕೇಳಬೇಡಿ. ಇದು ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಪ್ರಸಾರವಾಗುತ್ತಿರುವ ಹೊಸರೂಪದ ‘ಹಾಸ್ಯ‘ ಕಾರ್ಯಕ್ರಮ ‘ಹಲೋ ಕಾಣಸ್ತಿದ್ಯಾ‘. ‘ಪಾಪ ಪಾಂಡು‘ ಧಾರಾವಾಹಿಯ ‘ಶ್ರೀಹರಿ‘ ಪಾತ್ರಧಾರಿ ಸೌರಭ ಕುಲಕರ್ಣಿ ಮತ್ತು ಸ್ನೇಹಿತರೆಲ್ಲ ಸೇರಿ ‘ನಮ್ಮನೆ ಪ್ರೊಡಕ್ಷನ್ಸ್‌‘ ಮೂಲಕ ಈ ಕಾರ್ಯಕ್ರಮವನ್ನು ರೂಪಿಸಿದ್ದಾರೆ.

ಒಂದೆರಡು ನಿಮಿಷಗಳ ಅವಧಿಯ ಈ ಹಾಸ್ಯಮಯ ಕಾರ್ಯಕ್ರಮ ವೀಕ್ಷಕರ ಮೊಗದಲ್ಲಿ ಥಟ್‌ನೆ ನಗುಮೂಡಿಸುತ್ತದೆ. ಮನಸ್ಸಿನಲ್ಲಿ ‘ಡೈಲಾಗ್‌‘ಗಳನ್ನು ಮೆಲುಕು ಹಾಕುವಂತೆ ಮಾಡುತ್ತದೆ. ಸದ್ಯಕ್ಕೆ ಎರಡು ಸಂಚಿಕೆ ಪ್ರಸಾರವಾಗಿವೆ. ಸಾವಿರಾರು ಜನ ನೋಡಿದ್ದಾರೆ, ಮೆಚ್ಚಿದ್ದಾರೆ. ಅನೇಕರು ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಇಂಥ ಏಳು ವಿಭಿನ್ನ ಸಂಚಿಕೆ ತಯಾರಾಗಿವೆ. ಚಿಕ್ಕದಾದ ಈ ಸರಣಿಗೆ ‘ನ್ಯಾನೊ ಸೀರಿಸ್‌‘ ಎಂದು ಹೆಸರಿಸಿದ್ದಾರೆ.

ADVERTISEMENT

‘ಇಡೀ ಕಥೆ, ವಿಡಿಯೊ ಕಾಲ್ ರೂಪದಲ್ಲೇ ನಡೆಯುವುದರಿಂದ, ಇದಕ್ಕೆ ‘ಹಲೋ ಕಾಣಸ್ತಿದ್ಯಾ?’ ಅಂತ ಶೀರ್ಷಿಕೆ ನೀಡಿದ್ದೇವೆ‘ ಎನ್ನುತ್ತಾರೆ ಸೌರಭ. ಈ ಕಾರ್ಯಕ್ರಮದಲ್ಲಿ ಹಿರಿಯ ನಟ ಸಿಹಿ ಕಹಿ ಚಂದ್ರು, ಖ್ಯಾತ ಕಲಾವಿದರಾದ ಸುಂದರ್ ಮತ್ತು ವೀಣಾ ಸುಂದರ್, ಪಾಪ ಪಾಂಡು ಧಾರಾವಾಹಿಯ ಪುಂಡಲೀಕ ಪಾತ್ರಧಾರಿ ಅಂಜನ್ ಭಾರದ್ವಾಜ್, ಶಾಲಿನಿ ಮತ್ತು ಅವರ ಪತಿ ಅನಿಲ್ ಕುಮಾರ್, ನಯನಾ ಪಾಣ್ಯಂ, ದಿಯಾ ಚಿತ್ರ ಖ್ಯಾತಿಯ ಖುಷಿ ರವಿ - ಇಂತಹ ನುರಿತ, ಪರಿಣಿತ, ಹಿರಿಯ ಕಲಾವಿದರು ಕಾಣಿಸಿಕೊಳ್ಳಲಿದ್ದಾರಂತೆ.

ಒಬ್ಬ ಹುಡುಗ, ವಿಡಿಯೊಕಾಲ್‍ನಲ್ಲಿ ಮದುವೆಗಾಗಿ ಹೆಣ್ಣು ನೋಡುವ ಕಾರ್ಯಕ್ರಮವೇ ‘ಹಲೋ ಕಾಣಸ್ತಿದ್ಯಾ‘ ಕಾರ್ಯಕ್ರಮದ ಕಥಾ ಹಂದರ. ಹೆಣ್ಣು ಹುಡುಕುವ ವರನ ಪಾತ್ರದಲ್ಲಿ ಅಂಜನ್ ನಟಿಸಿದ್ದಾರೆ.

‘ಲಾಕ್‌ಡೌನ್‘ ಸಮಯದಲ್ಲಿ, ಸ್ನೇಹಿತರೆಲ್ಲಾ ಒಟ್ಟಾಗಿ, ವಿಡಿಯೊ ಕಾಲ್ ಮೂಲಕ ಹರಟೆ ಹೊಡೆಯುತ್ತಿದ್ದಾಗ ಈ ಕಾರ್ಯಕ್ರಮ ಮಾಡುವ ಐಡಿಯಾ ಹೊಳೆಯಿತು. ಐಡಿಯಾ ಚರ್ಚೆ ರೂಪಕ್ಕೆ ಬಂತು. ಕಲಾವಿದರೊಂದಿಗೆ ಮಾತಾಡಿದೆವು. ಮನೆಯಲ್ಲೇ ದೃಶ್ಯಗ ಳನ್ನು ಚಿತ್ರಿಸಿ ಕಳಿಸಬಹುದಾ ಎಂದು ಕೇಳಿದೆವು. ಎಲ್ಲರೂ ಒಪ್ಪಿ, ಮನೆಯಲ್ಲೇ ನಟಿಸಿ, ಚಿತ್ರಿಸಿ ವಿಡಿಯೊ ಕಳಿಸಿದ್ದೇ ವಿಶೇಷ‘ ಎನ್ನುತ್ತಾರೆ ಸೌರಭ.

ಈ ‘ನ್ಯಾನೊ ಸೀರಿಸ್‌‘ ತಯಾರಿಕೆಯ ಹಿಂದೆ, ಸೌರಭ ಕುಲಕರ್ಣಿ ಜತೆಗೆ ನಮ್ರತಾ ತೇಜಕಿರಣ್, ಅರವಿಂದ್ ರಾವ್, ಭಾರ್ಗವ ಹೆಗಡೆ, ಸಂಜಯ್ ಎಂ. ಎಸ್, ಪೂರ್ಣಾನಂದ ಭಾಸ್ಕರ್, ಮಾದೇಶ್ ಎಂ ಮತ್ತು ಕಿಟ್ಟಿ ಕೌಶಿಕ್ ರಂತಹ ದೊಡ್ಡ ತಂಡದ ಶ್ರಮವಿದೆಯಂತೆ. ‘ಎಲ್ಲರೂ ಒಟ್ಟಾಗಿ ಕಥೆ ಹೆಣೆದು, ಚಿತ್ರಕಥೆ ರೂಪಿಸಿ, ಸಂಭಾಷಣೆ ರಚಿಸಿ, ಸಂಕಲನ ಮಾಡಿದ್ದೇವೆ. ‘ಮನೆಯಲ್ಲೇ ಇರಿ, ಆರಾಮಾಗಿರಿ‘ ಎನ್ನುವಂತೆ ಎಲ್ಲರೂ ಅವರವರ ಮನೆಯಲ್ಲೇ ಇದ್ದುಕೊಂಡು, ಕೇವಲ ವಿಡಿಯೊ ಕಾಲ್ ಮೂಲಕ ಎಲ್ಲ ಕೆಲಸಗಳನ್ನು ಮಾಡಿದ್ದಾರೆ. ಆ ಕಲಾವಿದರಿಗೆ, ಸಂಚಿಕೆಗಳನ್ನು ಮೆಚ್ಚಿಕೊಂಡಿರುವವರಿಗೆ ಧನ್ಯವಾದಗಳನ್ನು ಹೇಳಬೇಕು‘ ಎನ್ನುತ್ತಾರೆ ಸೌರಭ ಕುಲಕರ್ಣಿ.

‘ಹಲೋ.. ಕಾಣಿಸ್ತಿದ್ಯಾ‘ ನ್ಯಾನೊ ಸೀರಿಸ್ ಸಂಚಿಕೆಗಳನ್ನು ನೋಡಲುಫೇಸ್‌ಬುಕ್‌ ಖಾತೆ – SourabhKulkarni ಮತ್ತು ಇನ್‌ಸ್ಟಾಗ್ರಾಂ ಖಾತೆ – sourabhkulkarni_97 ಗೆ ಭೇಟಿ ಕೊಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.